ಲಕ್ಕುಂಡಿ ಅಭಿವೃದ್ಧಿಗೆ ಎಚ್‌ಕೆ ಪಾಟೀಲ್ ಚಾಲನೆ; ರಾಜಕೀಯ ವೈಷಮ್ಯ ಮರೆತು ಸಚಿವರಿಗೆ ಸಾಥ್ ನೀಡಿದ ಬಿಜೆಪಿ ನಾಯಕರು

Published : Feb 06, 2026, 02:14 PM IST

ಲಕ್ಕುಂಡಿ ಗತವೈಭವ: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪಂಚ ದೇವಾಲಯ ಮತ್ತು ಪಂಚ ಬಾವಿಗಳ ಅಭಿವೃದ್ಧಿಗೆ ಸಚಿವ ಎಚ್‌ಕೆ ಪಾಟೀಲ್ ಮತ್ತು ಶಾಸಕ ಸಿಸಿ ಪಾಟೀಲ್ ಚಾಲನೆ ನೀಡಿದರು. ಉತ್ಖನನದಲ್ಲಿ ಸುಮಾರು 45 ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ಗ್ರಾಮಸ್ಥರಿಂದ 'ನವ ಲಕ್ಕುಂಡಿ' ನಿರ್ಮಾಣಕ್ಕೆ ಮನವಿ

PREV
15
ಲಕ್ಕುಂಡಿಯ ಪುನರುತ್ಥಾನಕ್ಕೆ 10 ಕೋಟಿ ಅನುದಾನ

ಗದಗ (ಫೆ.6): ಐತಿಹಾಸಿಕ ಲಕ್ಕುಂಡಿ ಗ್ರಾಮದ ಕಲೆ ಮತ್ತು ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಲಕ್ಕುಂಡಿಯ ಪಂಚ ದೇವಾಲಯ ಹಾಗೂ ಪಂಚ ಬಾವಿಗಳ ಜೀರ್ಣೋದ್ಧಾರ ಕಾರ್ಯಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಸುಮಾರು 10 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಡಿ ಛಬ್ಬೆರ ಬಾವಿ, ಸಿದ್ದರ ಬಾವಿ, ವಿದ್ಯಾಶಂಕರ ಲಿಂಗ ದೇವಸ್ಥಾನ ಸೇರಿದಂತೆ ಸೋಮನಕಟ್ಟಿ ಈಶ್ವರ ದೇವಾಲಯ, ಕಪ್ಪಚರ ಮಠ ಹಾಗೂ ಫಕ್ಕೀರಸ್ವಾಮಿ ಮಠದ ಬಾವಿಗಳ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

25
ಉತ್ಖನನದಲ್ಲಿ ಸಿಕ್ಕ 'ಅಪರೂಪದ ಪುರಾತನ ನಿಧಿ' ವೀಕ್ಷಣೆ

ಇತ್ತೀಚೆಗೆ ಲಕ್ಕುಂಡಿಯಲ್ಲಿ ನಡೆದ ಉತ್ಖನನದ ವೇಳೆ ಪತ್ತೆಯಾಗಿರುವ ಸರಿಸುಮಾರು 45ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಸಚಿವರು ಮತ್ತು ಗಣ್ಯರು ವೀಕ್ಷಿಸಿದರು. ಈ ವೇಳೆ ಪ್ರಾಚೀನ ಕಾಲದ ಬಿಲ್ಲೆಗಳು, ಪ್ರಾಣಿಗಳ ಮೂಳೆಗಳು, ಕವಡೆಗಳು, ಮಡಿಕೆ ಚೂರುಗಳು, ಗಂಟೆ, ಲಿಂಗ ಹಾಗೂ ಮುಕುಟ ಮಣಿಗಳು ಪತ್ತೆಯಾಗಿವೆ. ಧೂಪದ ಆಕೃತಿಯ ವಸ್ತುಗಳು ಹಾಗೂ ಅನೇಕ ಲೋಹದ ಪ್ರಾಚ್ಯಾವಶೇಷಗಳು ಲಕ್ಕುಂಡಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.

35
ರಾಜಕೀಯ ವೈಷಮ್ಯ ಮರೆತ ನಾಯಕರು

ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಒಟ್ಟಾಗಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ್ ಮತ್ತು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರು ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಸಾಥ್ ನೀಡಿದರು. ಕೋಟೆ ವೀರಭದ್ರೇಶ್ವರ ದೇವಾಲಯದ ಅಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಶಿಲಾಕೃತಿಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ, ಲಕ್ಕುಂಡಿಯನ್ನು 'ವಿಶ್ವ ಪರಂಪರೆ ತಾಣ'ಗಳ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.

45
'ನವ ಲಕ್ಕುಂಡಿ' ನಿರ್ಮಾಣಕ್ಕೆ ಸಾರ್ವಜನಿಕರ ಆಗ್ರಹ

ಕಾರ್ಯಕ್ರಮದ ವೇಳೆ ಗ್ರಾಮಸ್ಥರು ಸಚಿವರಿಗೆ ಮಹತ್ವದ ಮನವಿಯೊಂದನ್ನು ಸಲ್ಲಿಸಿದರು. ಲಕ್ಕುಂಡಿಯಲ್ಲಿ ಅಡಗಿರುವ 101 ದೇವಸ್ಥಾನ ಹಾಗೂ 101 ಬಾವಿಗಳ ಗತವೈಭವ ಸಂಪೂರ್ಣವಾಗಿ ಹೊರಬರಬೇಕಾದರೆ ಈಗಿರುವ ಗ್ರಾಮವನ್ನು ಸ್ಥಳಾಂತರಿಸುವುದು ಅನಿವಾರ್ಯವಾಗಿದೆ. 

55
ನವ ಲಕ್ಕುಂಡಿ ನಿರ್ಮಾಣಕ್ಕೆ ಹೆಚ್ಚಿದ ಕೂಗು

ಗ್ರಾಮಸ್ಥರಿಗೆ ಪರ್ಯಾಯವಾಗಿ 'ನವ ಲಕ್ಕುಂಡಿ' ಗ್ರಾಮವನ್ನು ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮ ಸ್ಥಳಾಂತರವಾದರೆ ಮಾತ್ರ ಈ ಐತಿಹಾಸಿಕ ನಗರದ ಪೂರ್ಣ ವಿಕಾಸ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories