ಕಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆಯಲ್ಲಿದ್ದ ರೋಗಿಗಳಿಗೆ ಏಕಾಏಕಿ ಆಕ್ಸಿಜನ್ ಕೊರತೆ ಉಂಟಾಗಿ ತೀವ್ರ ಆತಂಕ ಸೃಷ್ಟಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್
ಸೋಮವಾರ ಕಿಮ್ಸ್ ಆಸ್ಪತ್ರೆಯಲ್ಲಿ ವಾಡಿಕೆಯಂತೆ ಬರುತ್ತಿದ್ದ ಆಕ್ಸಿಜನ್ ಬೇಡಿಕೆ ಹೆಚ್ಚಾದ ಹಿನ್ನೆಲೆ ಪೂರೈಕೆದಾರರು ನಿಗದಿತ ಸಮಯಕ್ಕೆ ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕಿಮ್ಸ್ ಆಡಳಿತ ಮಂಡಳಿ ಸರ್ಕಾರದ ಗಮನಕ್ಕೆ ವಿಷಯ ತಂದಿದೆ. ಕೂಡಲೇ ಆಸ್ಪತ್ರೆಯಲ್ಲಿದ್ದ 178 ಮಂದಿಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ 23 ಮಂದಿಯನ್ನು ತಕ್ಷಣ ವಿಕ್ಟೋರಿಯಾ ಹಾಗೂ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಈ ಮೂಲಕ ಆಗಬಹುದಾದ ಅನಾಹುತ ತಪ್ಪಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಕೊರೋನಾ ಹಾಗೂ ಕೊರೋನೇತರ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆಕ್ಸಿಜನ್‌ಗೆ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಪೂರೈಕೆ ಮಾಡಲು ಪೂರೈಕೆದಾರರಿಗೆ ಸಾಧ್ಯವಾಗಿಲ್ಲ. ಇನ್ನು ಮುಂದೆ ಇಂತಹ ಸಮಸ್ಯೆ ಉಂಟಾಗದಂತೆ ಶಾಶ್ವತ ಒಡಂಬಡಿಕೆಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು ಇದನ್ನು ವೈದ್ಯಕೀಯ ಲೋಪ ಎನ್ನಲು ಸಾಧ್ಯವಿಲ್ಲ. ಬೇಡಿಕೆ ಹೆಚ್ಚಾಗಿರುವುದರಿಂದ ಪೂರೈಕೆದಾರರಿಗೆ ಸರಬರಾಜು ಮಾಡಲು ಕಷ್ಟವಾಗಿದೆ. ಇಷ್ಟುದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಬೇಕಾಗಬಹುದು ಎಂದು ಯಾರೂ ಅಂದಾಜು ಮಾಡಿರಲಿಲ್ಲ. ಲಿಕ್ವಿಡ್ ಘಟಕಗಳನ್ನು ಬೇರೆ ಕಡೆಯಿಂದ ತಂದು ಇಲ್ಲಿನ ಆಸ್ಪತ್ರೆಗಳಲ್ಲಿ ಅಳವಡಿಸಬೇಕಿದೆ ಎಂದು ಹೇಳಿದರು.
ಈಗಾಗಲೇ ಆಕ್ಸಿಜನ್ ಪೂರೈಕೆದಾರರು ದರ ಏರಿಕೆ ಮಾಡಿದ್ದು, ಒಂದು ಕ್ಯೂಬಿಕ್ ಮೀಟರ್ ಆಕ್ಸಿಜನ್ ಮೊದಲು .19 ಇತ್ತು. ಆದರೆ, ಕೊರೊನಾ ಸೋಂಕು ಹೆಚ್ಚಾದ ಬಳಿಕ 26 ಆಗಿದೆ. ಇಲ್ಲಿನ ಕೊರತೆಯಿಂದ ವಿಶಾಖಪಟ್ಟಣಂನಿಂದ ಕ್ಯೂಬಿಕ್ ಮೀಟರ್ ಆಕ್ಸಿಜನ್‌ಗೆ 31ರಂತೆ ಖರೀದಿಸಬೇಕಾಗುತ್ತಿದೆ. ಸದ್ಯಕ್ಕೆ ಸರ್ಕಾರಿ ಆಸ್ಪತ್ರೆಗಳಿಗೆ ಯಾವುದೇ ಸಮಸ್ಯೆ ಆಗದ ರೀತಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಕೊರತೆ ಎದುರಾಗುವ ಆತಂಕವಿದೆ ಎಂದು ಸ್ವತಃ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.