ಬೆಂಗಳೂರು: ನಗರದ ಎಲ್ಲ ರಸ್ತೆಗಳ ರಸ್ತೆ ಗುಂಡಿ ಮುಚ್ಚಲು 15 ದಿನ ಗಡುವು

First Published Aug 17, 2020, 7:26 AM IST

ಬೆಂಗಳೂರು(ಆ.17): ಮುಂದಿನ 15 ದಿನದಲ್ಲಿ ನಗರದ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಗಡುವು ನೀಡಿದ್ದಾರೆ.

ನಗರದ ಕಣ್ಣೂರು ಬಳಿ ನಿರ್ಮಿಸಲಾದ ಡಾಂಬರು ಮಿಶ್ರಣ ಘಟಕಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆಯಿಂದ 4.5 ಎಕರೆ ಜಾಗದಲ್ಲಿ, ಸುಮಾರು 7.5 ಕೋಟಿ ರು. ವೆಚ್ಚದಲ್ಲಿ ಡಾಂಬರು ಮಿಶ್ರಣ ಘಟಕ (ಹಾಟ್‌ ಮಿಕ್ಸ್‌ ಪ್ಲಾಂಟ್‌) ಸ್ಥಾಪಿಸಲಾಗಿದೆ. ಮಿಶ್ರಿತ ಡಾಂಬರ್‌, ರೋಲರ್‌ ಹಾಗೂ ಸಿಬ್ಬಂದಿ ಲಭ್ಯವಿದ್ದು, 15 ದಿನದಲ್ಲಿ ನಗರದ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
undefined
ವಲಯಗಳಿಗೆ ವಹಿಸಿದ್ದ ರಸ್ತೆಗಳ ನಿರ್ವಹಣೆ ಮತ್ತು ಗುಂಡಿ ಮುಚ್ಚುವ ಜವಾಬ್ದಾರಿಯನ್ನು ಈಗ ರಸ್ತೆ ಮತ್ತು ಮೂಲಸೌಕರ್ಯ ವಿಭಾಗಕ್ಕೆ ನೀಡಲಾಗಿದೆ. ವಾರ್ಡ್‌ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣದ ಗುತ್ತಿಗೆದಾರರು ಹಾಗೂ ಮುಖ್ಯ ರಸ್ತೆಗಳನ್ನು ಸಂಬಂಧಿಸಿದ ಇಂಜಿನಿಯರ್‌ಗಳು ಗುಂಡಿ ಮುಚ್ಚಿಸುವ ಜವಾಬಾರಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
undefined
ಕಣ್ಣೂರಿನ ಘಟಕದಲ್ಲಿ ಪ್ರತಿ ಗಂಟೆಗೆ 100 ಟನ್‌ ಡಾಂಬರು ಮಿಶ್ರಣ ತಯಾರಿಸುವ (ಹಾಟ್‌ ಮಿಕ್ಸ್‌) ಸಾಮರ್ಥ್ಯ ಹೊಂದಿದೆ. ಪ್ರತಿ ಗಂಟೆಗೆ 20 ರಿಂದ 25 ಟನ್‌ ಸಾಮರ್ಥ್ಯದ 5 ಟ್ರಕ್‌ ಡಾಂಬಾರು ಮಿಶ್ರಣ ಸಿದ್ಧಗೊಳ್ಳಲಿದೆ. ಒಂದು ದಿನಕ್ಕೆ ಬರೋಬ್ಬರಿ 50 ರಿಂದ 60 ಟ್ರಕ್‌ ಮಿಶ್ರಿತ ಡಾಂಬರ್‌ ತಯಾರಿಸಬಹುದಾಗಿದೆ. ಘಟಕದಿಂದ ವೆಚ್ಚವೂ ಕಡಿಮೆಯಾಗಲಿದೆ. ಹಾಟ್‌ ಮಿಕ್ಸ್‌ ಡಾಂಬರಿಗೆ ಗುತ್ತಿಗೆದಾರರ ಮೇಲೆ ಅವಲಂಬನೆ ತಪ್ಪಲಿದೆ ಎಂದು ಹೇಳಿದರು.
undefined
ವಿಶೇಷ ಆಯುಕ್ತ (ಯೋಜನೆ) ಮನೋಜ್‌ ಜೈನ್‌, ಪಾಲಿಕೆಯ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಎಂ.ಆರ್‌.ವೆಂಕಟೇಶ್‌, ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
undefined
click me!