ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್‌: ತಾನೇ ಬೆಳೆದ ನಾಲ್ಕು ಎಕರೆ ಹೂಕೋಸು ನಾಶಪಡಿಸಿದ ರೈತ!

Published : Mar 31, 2026, 10:09 AM IST

ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ರೈತರ ಬೆಳೆಗಳಿಗೂ ತಟ್ಟಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಇಳಿಕೆ ಹಿನ್ನೆಲೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ರೈತ ಬಸವಣ್ಣ ಎಂಬುವವರು ತಾವೇ ಕಷ್ಟಪಟ್ಟು ಬೆಳೆದಿದ್ದ ಸಮೃದ್ಧ ಹೂಕೋಸಿನ ಬೆಳೆಯನ್ನು ನಾಶಪಡಿಸಿದ ಘಟನೆ ನಡೆದಿದೆ.

PREV
15
ಯಾವ ರೈತನಿಗೂ ಇಂಥ ದುಸ್ತಿತಿ ಬರಬಾರದು!

ಬೆವರು ಸುರಿಸಿ, ಹಗಲು ರಾತ್ರಿ ಎನ್ನದೇ ದುಡಿದು ಬೆಳೆದ ಬೆಳೆ ತನ್ನ ಕೈಯಾರೆ ನಾಶಪಡಿಸುವ ದುಸ್ಥಿತಿ ಯಾವ ರೈತರಿಗೂ ಬರಬಾರದು. ಆದರೆ ಇಂಥದ್ದೊಂದು ದುಸ್ಥಿತಿ ಬಂದಿದ್ದು, ಬೆಳೆದ ಬೆಳೆ ಸ್ವತಃ ರೈತನೇ ಟ್ರ್ಯಾಕ್ಟರ್‌ ಏರಿ ನಾಶಪಡಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ರೈತ ಬಸವಣ್ಣ ಎಂಬುವವರು ತಾವೇ ಕಷ್ಟಪಟ್ಟು ಬೆಳೆದಿದ್ದ ಸಮೃದ್ಧ ಹೂಕೋಸಿನ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ಸಂಪೂರ್ಣ ನಾಶಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆ ಮಾರುಕಟ್ಟೆಯಲ್ಲಿ ಕೇಳುವವರಿಲ್ಲದೆ ಹೊಲದಲ್ಲೇ ಕೊಳೆಯುವಂತಾಗಿದೆ.

25
ಮಧ್ಯಪ್ರಾಚ್ಯದಲ್ಲಿ ಯುದ್ಧವಾದರೆ ಚಾಮರಾಜನಗರ ರೈತನ ಬೆಳೆ ನಾಶ!

ದೂರದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧಕ್ಕೂ ನಮ್ಮ ಚಾಮರಾಜನಗರದ ರೈತನಿಗೂ ಏನು ಸಂಬಂಧ ಅಂತೀರಾ? ಖಂಡಿತ ಇದೆ. ಯುದ್ಧದ ಎಫೆಕ್ಟ್‌ನಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದು ನೇರವಾಗಿ ನಮ್ಮ ಡೊಮೆಸ್ಟಿಕ್ ಗ್ಯಾಸ್ ಕೊರತೆಗೆ ಕಾರಣವಾಗಿದೆ. ಗ್ಯಾಸ್ ಸಿಗದೆ ಹೋಟೆಲ್‌ಗಳು, ಪಿಜಿಗಳು ಮತ್ತು ಹಾಸ್ಟೆಲ್‌ಗಳಲ್ಲಿ ಮೆನು ಕಡಿತಗೊಳಿಸಲಾಗಿದೆ. ಕೆಲವು ಸಣ್ಣಪುಟ್ಟ ಹೋಟೆಲ್‌ಗಳು ಮುಚ್ಚಿವೆ ಇದರ ಪರಿಣಾಮವಾಗಿ ತರಕಾರಿಗೆ ಬೇಡಿಕೆ ಸಂಪೂರ್ಣ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.

35
ರೈತ ಬಸವಣ್ಣ ಸುಮ್ಮನೆ ಬೆಳೆ ಬೆಳೆದಿಲ್ಲ

ರೈತ ಬಸವಣ್ಣ ಸುಮ್ಮನೆ ಈ ಬೆಳೆ ಬೆಳೆದಿರಲಿಲ್ಲ. ಒಂದೆಡೆ ಪಾತಾಳಕ್ಕೆ ಕುಸಿದಿರುವ ಅಂತರ್ಜಲ, ಮತ್ತೊಂದೆಡೆ ಕಾಡು ಹಂದಿಗಳ ಕಾಟ, ಇದರ ನಡುವೆ ಅಸಮರ್ಪಕ ವಿದ್ಯುತ್ ಪೂರೈಕೆಯ ಕಣ್ಣಾಮುಚ್ಚಾಲೆ. ಇಷ್ಟೆಲ್ಲಾ ಸವಾಲುಗಳ ನಡುವೆ ನಿದ್ದೆಗೆಟ್ಟು ನಾಲ್ಕು ಎಕರೆ ಪ್ರದೇಶದಲ್ಲಿ ಹೂಕೋಸು ಬೆಳೆದಿದ್ದರು. ಬೆಳೆಯೂ ಅದ್ಭುತವಾಗಿ ಬಂದಿತ್ತು, ಆದರೆ ಅದೃಷ್ಟ ಮಾತ್ರ ಕೈಕೊಟ್ಟಿದೆ. ಹೂಕೋಸು ಮಾತ್ರವಲ್ಲದೆ ಟೊಮ್ಯಾಟೊ, ಸಣ್ಣ ಈರುಳ್ಳಿ, ಬೀಟ್ ರೂಟ್ ಬೆಳೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಾರುಕಟ್ಟೆಯಲ್ಲಿ ಕೇಳುವವರಿಲ್ಲದಂತಾಗಿದೆ.

45
ಹೊಲದಲ್ಲೇ ಕೊಳೆಯುತ್ತಿದೆ ಬೆಳೆ!

ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಪಾತಾಳಕ್ಕೆ ಕುಸಿದಿರುವುದರಿಂದ, ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವ ಖರ್ಚು ಕೂಡ ಸಿಗದಂತಾಗಿದೆ. ಹೀಗಾಗಿ ರೈತರು ಹೊಲದಲ್ಲೇ ಬೆಳೆಗಳನ್ನು ಬಿಟ್ಟಿದ್ದಾರೆ. ಬಸವಣ್ಣ ಅವರು ಮನನೊಂದು ಟ್ರ್ಯಾಕ್ಟರ್ ಮೂಲಕ ತಾನೇ ಬೆಳೆದ ಬೆಳೆಯನ್ನು ನಾಶಪಡಿಸುವಾಗ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು.

55
ರೈತ ಮಾತಾಡುತ್ತಲೇ ಕಣ್ಣೀರು

'ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದೆವು. ಆದರೆ ಈಗ ಕೈಲಿದ್ದ ಕಾಸೂ ಇಲ್ಲ, ಮಾರುಕಟ್ಟೆಯಲ್ಲಿ ಕೇಳೋರೂ ಇಲ್ಲ' ಎಂದು ರೈತ ಬಸವಣ್ಣ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories