ರಾಜ್ಯದಲ್ಲಿ ಶ್ರೀಗಂಧ ಮರಗಳ ಕಳ್ಳತನವನ್ನು ತಡೆಯಲು ಕರ್ನಾಟಕ ಸರ್ಕಾರವು ತಂತ್ರಜ್ಞಾನದ ಮೊರೆ ಹೋಗಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಮೂಲಕ, ಪರಿಣಾಮಕಾರಿ ತಾಂತ್ರಿಕ ಪರಿಹಾರಗಳನ್ನು ಹೊಂದಿರುವವರಿಂದ ಆವಿಷ್ಕಾರಗಳನ್ನು ಆಹ್ವಾನಿಸಿದೆ.
ಬೆಂಗಳೂರು: ವಿಜಯಪುರದಲ್ಲಿ ಮೈಸೂರು ಸ್ಯಾಂಡಲ್ ಉತ್ಪನ್ನ ಘಟಕವನ್ನು ವಿಜಯಪುರದಲ್ಲಿ ಆರಂಭಿಸಲು ಸರ್ಕಾರ ಮುಂದಾದ ಬೆನ್ನಲ್ಲಿಯೇ ರಾಜ್ಯದಲ್ಲಿ ಶ್ರೀಗಂಧ ಮರಗಳ ಕಳ್ಳತನವನ್ನು ತಡೆಯುವುದಕ್ಕೆ ಹೆಚ್ಚಿನ ನಿಗಾವಹಿಸಿದೆ.
ಈ ಹಿನ್ನೆಲೆಯಲ್ಲಿ ಶ್ರೀಗಂಧ ಮರಕಳ್ಳತನ ತಡೆಯುವುದಕ್ಕೆ ರಾಜ್ಯದ ಯಾವುದೇ ರೈತರು ಅಥವಾ ತಂತ್ರಜ್ಞರು ಉತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದರೆ ಕೂಡಲೇ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಸಂಪರ್ಕಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮನವಿ ಮಾಡಿದ್ದಾರೆ.
28
ಮೈಸೂರು ಸ್ಯಾಂಡಲ್ ಸೋಪ್‌ಗೆ ಶ್ರೀಗಂಧವೇ ಜೀವಾಳ
ಈ ಬಗ್ಗೆ ಮಹಿತಿ ಹಂಚಿಕೊಂಡಿರುವ ಅವರು, ರಾಜ್ಯದ ಹೆಮ್ಮೆಯ ಲಾಂಛನವಾಗಿರುವ 'ಮೈಸೂರು ಸ್ಯಾಂಡಲ್ ಸೋಪ್' ತಯಾರಿಕೆಗೆ ಶ್ರೀಗಂಧವೇ ಜೀವಾಳ. ಆದರೆ, ದಶಕಗಳಿಂದ ಶ್ರೀಗಂಧದ ಬೆಳೆಗಾರರನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಮರಗಳ ಕಳ್ಳತನ. ಈ ಸವಾಲನ್ನು ಎದುರಿಸಲು ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಈಗ ಸಾರ್ವಜನಿಕರ ಮೊರೆ ಹೋಗಿದೆ. ಶ್ರೀಗಂಧದ ಮರಗಳ ಕಳ್ಳತನ ತಡೆಯಲು ಸುಧಾರಿತ ತಂತ್ರಜ್ಞಾನ ಅಥವಾ ಉಪಕರಣಗಳನ್ನು ಅಭಿವೃದ್ಧಿಪಡಿಸಿದವರಿಗೆ ಕೆಎಸ್‌ಡಿಎಲ್ ವೇದಿಕೆ ಕಲ್ಪಿಸಿಕೊಡಲಿದೆ ಎಂದು ತಿಳಿಸಿದ್ದಾರೆ.
38
ತಾಂತ್ರಿಕ ಪರಿಹಾರಗಳಿಗೆ ಮುಕ್ತ ಆಹ್ವಾನ:
ಶ್ರೀಗಂಧದ ಮರಗಳನ್ನು ಕಳ್ಳರಿಂದ ರಕ್ಷಿಸಲು ಆಧುನಿಕ ತಂತ್ರಜ್ಞಾನದ ಅಗತ್ಯವಿದೆ ಎಂದು ಮನಗಂಡಿರುವ ಸರ್ಕಾರ, ರೈತರು, ವಿಜ್ಞಾನಿಗಳು, ಸ್ಟಾರ್ಟ್‌ಅಪ್‌ಗಳು ಅಥವಾ ಸಂಶೋಧನಾ ಸಂಸ್ಥೆಗಳಿಂದ ಹೊಸ ಆಲೋಚನೆಗಳನ್ನು ಆಹ್ವಾನಿಸಿದೆ.
'ಯಾರೇ ಆಗಲಿ ಶ್ರೀಗಂಧದ ಮರಗಳ ಕಳ್ಳತನ ತಡೆಗೆ ಪರಿಣಾಮಕಾರಿ ತಂತ್ರಜ್ಞಾನದ ಮಾಹಿತಿ ಹೊಂದಿದ್ದರೆ ಅವರು ಕೆಎಸ್‌ಡಿಎಲ್ ಅನ್ನು ಸಂಪರ್ಕಿಸಬಹುದು. ಸಂಸ್ಥೆಯ ಮುಂದೆ ಆ ತಂತ್ರಜ್ಞಾನದ ಪ್ರಾತ್ಯಕ್ಷಿಕೆ (Demo) ನೀಡಲು ಅವಕಾಶ ನೀಡಲಾಗುವುದು. ಒಂದು ವೇಳೆ ಆ ತಂತ್ರಜ್ಞಾನವು ಸೂಕ್ತವೆಂದು ಕಂಡುಬಂದರೆ, ಅದರ ಅನುಷ್ಠಾನಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಕೆಎಸ್‌ಡಿಎಲ್ ಭರಿಸಲಿದೆ' ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
58
ಶ್ರೀಗಂಧ ಬೆಳೆಗಾರರಿಗೆ ಮತ್ತು ರಕ್ಷಕರಿಗೆ ಸನ್ಮಾನ
ಶ್ರೀಗಂಧ ಬೆಳೆಯುವುದನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಎಸ್‌ಡಿಎಲ್ ಹೊಸ ಪುರಸ್ಕಾರಗಳನ್ನು ಘೋಷಿಸಿದೆ.
ರೈತರಿಗೆ ಗೌರವ: ಕೆಎಸ್‌ಡಿಎಲ್‌ಗೆ ಅತಿ ಹೆಚ್ಚು ಶ್ರೀಗಂಧ ಪೂರೈಸಿದ ನಾಲ್ವರು ರೈತರನ್ನು ಗುರುತಿಸಿ, ಜೂನ್ 4ರಂದು (ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ) ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ರಕ್ಷಕರಿಗೆ ಪುರಸ್ಕಾರ: ಶ್ರೀಗಂಧ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಳ್ಳತನದ ಬಗ್ಗೆ ನಿಖರ ಮಾಹಿತಿ ನೀಡಿದ ಸಾರ್ವಜನಿಕರನ್ನು ಕೂಡ ಇದೇ ಸಂದರ್ಭದಲ್ಲಿ ಪುರಸ್ಕರಿಸಲಾಗುವುದು.
68
ದಶಕಗಳ ಸಮಸ್ಯೆಗೆ ತಾಂತ್ರಿಕ ಮದ್ದು:
'ಶ್ರೀಗಂಧದ ಅಕ್ರಮ ಕಟಾವು ತಡೆಯಲು ಕಠಿಣ ಕಾನೂನುಗಳಿದ್ದರೂ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದರಿಂದ ಕಳ್ಳತನ ಮುಂದುವರಿದಿದೆ. ಇದರಿಂದ ರೈತರು ಶ್ರೀಗಂಧ ಬೆಳೆಸಲು ಭಯಪಡುತ್ತಿದ್ದಾರೆ. ರೈತರಿಗೆ ಕೇವಲ ಆರ್ಥಿಕ ಲಾಭವಲ್ಲದೆ, ಅವರಿಗೆ ರಕ್ಷಣೆಯ ಭರವಸೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ' ಎಂದು ಎಂ.ಬಿ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
78
ಬೆಳೆಗಾರರಿಗೆ ಆರ್ಥಿಕ ನೆರವು:
ಕಳೆದ ಮೂರು ವರ್ಷಗಳಲ್ಲಿ ಕೆಎಸ್‌ಡಿಎಲ್ ರಾಜ್ಯದಾದ್ಯಂತ ರೈತರಿಂದ ಒಟ್ಟು 174.5 ಮೆಟ್ರಿಕ್ ಟನ್ ಶ್ರೀಗಂಧವನ್ನು ಖರೀದಿಸಿದೆ. ಇದಕ್ಕಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 6.08 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಮಧ್ಯವರ್ತಿಗಳ ಕಾಟವಿಲ್ಲದೆ ರೈತರಿಗೆ ನೇರ ಮಾರುಕಟ್ಟೆ ಕಲ್ಪಿಸಿಕೊಡಲಾಗಿದೆ.
88
ಕೃಷಿ ಕ್ಷೇತ್ರಕ್ಕೂ ಹೊಸ ಚೈತನ್ಯ
ಶ್ರೀಗಂಧದ ಉಳಿವಿಗೆ ಮತ್ತು ಬೆಳವಣಿಗೆಗೆ ಕೆಎಸ್‌ಡಿಎಲ್ ಕೈಗೊಂಡಿರುವ ಈ ಕ್ರಾಂತಿಕಾರಿ ನಿರ್ಧಾರವು ಕೇವಲ ಉದ್ದಿಮೆಗೆ ಮಾತ್ರವಲ್ಲದೆ, ಕೃಷಿ ಕ್ಷೇತ್ರಕ್ಕೂ ಹೊಸ ಚೈತನ್ಯ ನೀಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ