ಮಲೆನಾಡಲ್ಲಿ ಮತ್ತೆ ಅಬ್ಬರಿಸಿದ‌ ಮಳೆ‌; ಮಹಲ್ಗೋಡು ಸೇತುವೆ ಮುಳುಗಡೆ!

First Published | Jun 17, 2024, 11:24 PM IST

ಕಳೆದ ಎಂಟತ್ತು ದಿನಗಳಿಂದ ಕಾಫಿನಾಡ ಮಲೆನಾಡು ಭಾಗದಲ್ಲಿ ಬಿಡುವು ನೀಡಿದ್ದ ವರುಣದೇವ ಇಂದು ಮತ್ತೆ ಅಬ್ಬರಿಸಿ ಬೊಬ್ಬೆರಿದಿದ್ದಾನೆ. ಮಧ್ಯಾಹ್ನದ ನಂತರ ಆರಂಭವಾದ ಧಾರಾಕಾರ ಮಳೆಗೆ ಇಡೀ ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಮೂಡಿಗೆರೆಯಲ್ಲಿ ಮಧ್ಯಾಹ್ನವೇ ವಾಹನಗಳ ಲೈಟ್ ಆನ್ ಮಾಡಿಕೊಂಡು ಓಡಾಡುವಂತಾಗಿದ್ರೆ, ಕಳಸ-ಬಾಳೆಹೊನ್ನೂರು ಮಳೆಗೆ ರಸ್ತೆಯೇ ಮಾಯವಾಗಿ ಕಳಸ-ಬಾಳೆಹೊನ್ನೂರು ಸಂಪರ್ಕವೇ ಕಡಿತಗೊಂಡಿತ್ತು. ಭಾರೀ ಮಳೆಯಿಂದ ಕಾರು-ಬೈಕ್ ನೀರಿನ ಮಧ್ಯೆ ಲಾಕ್ ಆಗಿ ಪ್ರಯಾಣಿಕರು ಪರದಾಡಿದ್ದರು. 

ಮಹಲ್ಗೋಡು ಸೇತುವೆ ಮುಳುಗಡೆ : 

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿ ಸುರಿದ ಮಳೆಯಿಂದ  ಮಹಲ್ಗೋಡು ಸೇತುವೆ‌ ಕೆಲ ಕಾಲ ಮುಳುಗಡೆ ಆಗಿತ್ತು. ಮಧ್ಯಾಹ್ನದ ನಂತರ ಎನ್‌.ಆರ್.ಪುರ-ಕಳಸ ತಾಲೂಕಿನ ಭಾರೀ ಮಳೆಗೆ ಸೇತುವೆ ಕಾಣದಂತೆ ಮಳೆ ನೀರು ಹರಿದಿದೆ. ಇದರಿಂದ ಬಾಳೆಹೊನ್ನೂರು-ಕಳಸ ರಾಜ್ಯ ಹೆದ್ದಾರಿಯೇ ಕೆಲ ಕಾಲ ಬಂದ್ ಆಗಿತ್ತು. ಇದರಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೋಗಿದ್ದ ಭಕ್ತರು ರಸ್ತೆ ಮಧ್ಯೆ ಸಿಕ್ಕಿಬಿದ್ದಿದ್ದು ಕಿ.ಮೀ. ಗಟ್ಟಲೇ ಟ್ರಾಫಿಕ್ ಜಾಮ್ ಆಗಿತ್ತು. ಮಳೆ ನೀರಲ್ಲಿ ಕೊಚ್ಚಿ ಬಂದ ಕಸ ಸೇತುವೆಗೆ ಸಿಕ್ಕಿ ನೀರು ಹರಿಯದಂತಾಗಿತ್ತು. ಆಗ ಮಹಲ್ಗೋಡು ಯುವಕರು ಸೊಂಟದ ಎತ್ತರದ ನೀರಲ್ಲಿ ದಾರಿ ಇಲ್ಲದ ಕಡೆಯೂ ಜೀವದ ಹಂಗು ತೊರೆದು ಸೇತುವೆಗೆ ಅಡ್ಡ ಇದ್ದ ಕಸವನ್ನ ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಿದರು.
 

ಈ ಸೇತುವೆ ಬಗ್ಗೆ ಅಸಮಾಧಾನ ಹೊರಹಾಕಿದ ಸ್ಥಳಿಯರು ನಾನು ಚಿಕ್ಕ ಹುಡುಗ ಇದ್ದಾಗಿನಿಂದ ಈ ಸೇತುವೆಯದ್ದು ಇದೇ ಗೋಳು. ಅಧಿಕಾರಿಗಳು ಬರ್ತಾರೆ ನೋಡ್ತಾರೆ, ಹೋಗ್ತಾರೆ ಅಷ್ಟೆ. ಸೇತುವೆಯನ್ನ ಮೇಲ್ದರ್ಜೆಗೆ ಏರಿಸಿ ಅಂತ ಎಷ್ಟೆ ಮನವಿ ಮಾಡಿದ್ರು ನೋ ಯೂಸ್ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

Tap to resize

ಕಳಸ-ಎನ್.ಆರ್.ಪುರ ತಾಲೂಕಿನದ್ದು ಒಂದು ಕಥೆಯಾದ್ರೆ ಮೂಡಿಗೆರೆ ತಾಲೂಕಿನದ್ದು ಮತ್ತೊಂದು ಕಥೆ. ಮೂಡಿಗೆರೆ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಮಟ..ಮಟ.. ಮಧ್ಯಾಹ್ನವೇ ವಾಹನಗಳ ಲೈಟ್ ಆನ್ ಮಾಡಿಕೊಂಡು ಓಡಾಡುವಂತಾಗಿತ್ತು. ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಸುರಿದ ಭಾರೀ ಮಳೆಗೆ ಜನಜೀವನ ಕೂಡ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. 

ಭಾರೀ ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ವಾಹನಗಳು ಸಂಚಾರ ಮಾಡದಂತಾಗಿತ್ತು. ಹಾವು-ಬಳುಕಿನ ಮೈಕಟ್ಟಿನ ಚಾರ್ಮಾಡಿ ರಸ್ತೆಯಲ್ಲಿ ಭಾರೀ ಮಳೆಯಿಂದ ವಾಹನಗಳು ನಿಂತಲ್ಲೇ ನಿಂತಿದ್ದವು. ಚಾರ್ಮಾಡಿಯಲ್ಲಿ ಮಳೆ ಇಲ್ಲದಾಗಲೇ ಸಂಚಾರ ಕಷ್ಟ. ಇನ್ನು ಭಾರೀ ಮಳೆ ಮಧ್ಯೆ ಸಂಚಾರ ಮತ್ತಷ್ಟು ಕಷ್ಟ. ವಾಹನಗಳ ಹೆಡ್ ಲೈಟ್, ಫಾಗ್ ಲೈಟ್ ಹಾಕಿಕೊಂಡು ಹೋದರೂ ಸಂಚಾರ ಕಷ್ಟ. ಹಾಗಾಗಿ, ಭಾರೀ ಮಧ್ಯೆ ಚಾರ್ಮಾಡಿಯಲ್ಲಿ ಸಂಚಾರ ಅಸಾಧ್ಯ ಎಂದು ವಾಹನಗಳು ನಿಂತಲ್ಲೇ ನಿಲ್ಲುವಂತಹಾ ಸ್ಥಿತಿ ನಿರ್ಮಾಣವಾಗಿತ್ತು.

ಒಟ್ಟಾರೆ, ಮಲೆನಾಡಿನಾದ್ಯಂತ ಸುಮಾರು 2 ಗಂಟೆಗಳ ಕಾಲ ಸುರಿದ ಮಳೆಗೆ ಮಲೆನಾಡ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಲೆನಾಡಲ್ಲಿ ಮುಂಗಾರು ಮಳೆ ಅಷ್ಟಾಗಿ ಸುರಿದಿರಲಿಲ್ಲ. ಕಾಫಿ-ಅಡಿಕೆ-ಮೆಣಸು ಬೆಳೆಗಾರರು ಮಳೆಗಾಗಿ ಆಕಾಶ ನೋಡುತ್ತಿದ್ದರು. ಇದೀಗ, ಧಾರಾಕಾರ ಮಳೆ ಸುರಿದಿರುವುದು ಮಲೆನಾಡಿಗರಿಗೆ ಸಂತಸ ತಂದಿದೆ. 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

Latest Videos

click me!