Published : May 18, 2026, 02:45 PM ISTUpdated : May 18, 2026, 02:48 PM IST
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಕರೆದಿದ್ದ ಸಭೆಯು ಗದ್ದಲ, ಗಲಾಟೆಯಲ್ಲಿ ಅಂತ್ಯಗೊಂಡಿದೆ. ಹುದ್ದೆಯಿಂದ ತೆಗೆದುಹಾಕಿದ್ದನ್ನು ಪ್ರಶ್ನಿಸಿದಾಗ ಎರಡು ಬಣಗಳ ನಡುವೆ ತೀವ್ರ ವಾಗ್ವಾದ, ತಳ್ಳಾಟ-ನೂಕಾಟ ನಡೆದು, ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಬೆಂಗಳೂರು (ಮೇ 18): ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿರುವ ಬೆಂಗಳೂರಿನ ಕೆಪಿಸಿಸಿ (KPCC) ಕಚೇರಿ ಇಂದು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ಕಾಂಗ್ರೆಸ್ ಪಕ್ಷದ ರಾಜ್ಯ ಕಚೇರಿ ಆವರಣದಲ್ಲೇ ಯೂತ್ ಕಾಂಗ್ರೆಸ್ ಪದಾಧಿಕಾರಿಗಳು ಪರಸ್ಪರ ಕಿತ್ತಾಡಿಕೊಂಡ ಪ್ರಸಂಗ ನಡೆದಿದೆ. ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಅವರ ನಂತರ ಜವಾಬ್ದಾರಿ ವಹಿಸಿಕೊಂಡಿರುವ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಗದ್ದಲಕ್ಕೆ ಸಾಕ್ಷಿಯಾಯಿತು.
26
ಸಭೆ ಕರೆದಿದ್ದ ಮಂಜುನಾಥ್, ಎದುರಾದ ಆಕ್ರೋಶ:
ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಅವರು ಇಂದು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಕರೆದಿದ್ದರು. ಸಂಘಟನೆಯ ಬಲವರ್ಧನೆ ಮತ್ತು ಮುಂದಿನ ಹೋರಾಟಗಳ ಬಗ್ಗೆ ಚರ್ಚಿಸಲು ಈ ಸಭೆ ಆಯೋಜಿಸಲಾಗಿತ್ತು. ಆದರೆ, ಸಭೆ ಆರಂಭವಾಗುತ್ತಿದ್ದಂತೆಯೇ ಅಸಮಾಧಾನದ ಜ್ವಾಲೆ ಸ್ಫೋಟಿಸಿತು. ಇದಕ್ಕೆ ಪ್ರಮುಖ ಕಾರಣ, ಇತ್ತೀಚೆಗಷ್ಟೇ ಮಂಜುನಾಥ್ ಅವರು ಕೆಲ ಪದಾಧಿಕಾರಿಗಳನ್ನು ಅವರ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದರು. ಇದು ಅನೇಕ ಹಿರಿಯ ಮತ್ತು ನಿಷ್ಠಾವಂತ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿತ್ತು.
36
ದೀಪಿಕಾ ರೆಡ್ಡಿ ಪ್ರಶ್ನೆಗೆ ಸಿಡಿದ ಪದಾಧಿಕಾರಿಗಳು:
ಪಕ್ಷದ ಹುದ್ದೆಯಿಂದ ಮುಕ್ತಗೊಳಿಸಲ್ಪಟ್ಟಿದ್ದ ಪ್ರಮುಖ ಪದಾಧಿಕಾರಿಗಳಲ್ಲಿ ಒಬ್ಬರಾದ ದೀಪಿಕಾ ರೆಡ್ಡಿ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ನಡೆಯುತ್ತಿದ್ದ ವೇಳೆ ಎದ್ದು ನಿಂತ ದೀಪಿಕಾ ರೆಡ್ಡಿ, 'ಯಾವ ಆಧಾರದ ಮೇಲೆ ನಮ್ಮನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ? ಪಕ್ಷಕ್ಕಾಗಿ ದುಡಿದ ನಮಗೆ ಈ ರೀತಿ ಅವಮಾನ ಮಾಡುವುದು ಸರಿಯೇ?' ಎಂದು ನೇರವಾಗಿ ಅಧ್ಯಕ್ಷ ಮಂಜುನಾಥ್ ಅವರನ್ನು ಪ್ರಶ್ನಿಸಿದರು. ದೀಪಿಕಾ ರೆಡ್ಡಿ ಅವರ ಬೆಂಬಲಕ್ಕೆ ನಿಂತ ಇತರ ಪದಾಧಿಕಾರಿಗಳು ಕೂಡ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು.
ಪ್ರಶ್ನೆ ಮಾಡಿದವರನ್ನು ಮಂಜುನಾಥ್ ಬೆಂಬಲಿಗರು ತಡೆಯಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಎರಡೂ ಬಣಗಳ ನಡುವೆ ತೀವ್ರ ವಾಕ್ಸಮರ ನಡೆದು, ನಂತರ ಅದು ತಳ್ಳಾಟ-ನೂಕಾಟಕ್ಕೆ ತಿರುಗಿತು. ಕೆಪಿಸಿಸಿ ಕಚೇರಿಯ ಒಳಗೆ ಪದಾಧಿಕಾರಿಗಳು ಪರಸ್ಪರ ಕಿರುಚಾಡುತ್ತಾ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು.
56
ಚೇರುಗಳನ್ನ ಎತ್ತಿ ಎಸೆದ ಕಾರ್ಯಕರ್ತರು
ಕಚೇರಿಯಲ್ಲಿದ್ದ ಚೇರುಗಳನ್ನು ಎತ್ತಿ ಎಸೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ನಾಯಕರು ಕಚೇರಿಯಲ್ಲಿದ್ದರೂ ಲೆಕ್ಕಿಸದ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದರು. ಇದರಿಂದ ಕಚೇರಿಯ ಇಡೀ ವಾತಾವರಣ ಹಾಳಾಯಿತು.
66
ಅಪಹಾಸ್ಯಕ್ಕೀಡಾದ ಯೂತ್ ಕಾಂಗ್ರೆಸ್:
ಈ ಘಟನೆಯಿಂದಾಗಿ ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಶಿಸ್ತು ಸಮಿತಿಯ ಎಚ್ಚರಿಕೆಯ ನಡುವೆಯೂ ಪದಾಧಿಕಾರಿಗಳು ಈ ರೀತಿ ಸಾರ್ವಜನಿಕವಾಗಿ ಗಲಾಟೆ ಮಾಡಿಕೊಂಡಿರುವುದು ಪಕ್ಷದ ಮುಜುಗರಕ್ಕೆ ಕಾರಣವಾಗಿದೆ. 'ಪದಾಧಿಕಾರಿಗಳ ಬದಲಾವಣೆ ನಿಯಮದಂತೆ ನಡೆದಿದೆ' ಎಂದು ಒಂದು ಬಣ ವಾದಿಸಿದರೆ, 'ಏಕಪಕ್ಷೀಯ ತೀರ್ಮಾನ ಕೈಗೊಳ್ಳಲಾಗಿದೆ' ಎಂದು ದೀಪಿಕಾ ರೆಡ್ಡಿ ಬಣ ಆಕ್ರೋಶ ವ್ಯಕ್ತಪಡಿಸಿದೆ. ಒಟ್ಟಾರೆಯಾಗಿ, ಯೂತ್ ಕಾಂಗ್ರೆಸ್‌ನಲ್ಲಿನ ಆಂತರಿಕ ಅಸಮಾಧಾನ ಈಗ ಬೀದಿಗೆ ಬಂದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ