ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಗಾಗಿ ಕಾಂಗ್ರೆಸ್ ನಾಯಕರಾದ ಎಚ್.ಸಿ. ಮಹದೇವಪ್ಪ ಮತ್ತು ಭೈರತಿ ಸುರೇಶ್ ನಡುವೆ ವಿವಾದ ಭುಗಿಲೆದ್ದಿದೆ. ಮಹದೇವಪ್ಪನವರು ನಿವಾಸ ಖಾಲಿ ಮಾಡುವ ಮುನ್ನವೇ, ಸುರೇಶ್ ಅವರು ನವೀಕರಣ ಕಾರ್ಯ ಆರಂಭಿಸಿ, ಶೆಡ್ ಕೆಡವಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು (ಸೆ.07): ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ನಡುವೆ ಇದೀಗ 'ಸರ್ಕಾರಿ ಬಂಗಲೆ' ಕಿತ್ತಾಟ ತಾರಕಕ್ಕೇರಿದೆ. ರಾಜಧಾನಿಯ ಪ್ರತಿಷ್ಠಿತ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸವನ್ನು ಮಾಜಿ ಸಚಿವ, ಹಿರಿಯ ಮುಖಂಡ ಡಾ. ಎಚ್.ಸಿ. ಮಹದೇವಪ್ಪ ಅವರು ಖಾಲಿ ಮಾಡುವ ಮುನ್ನವೇ, ಹಾಲಿ ಸಚಿವ ಭೈರತಿ ಸುರೇಶ್ ಆ ಮನೆಯ ನವೀಕರಣ ಕಾರ್ಯ ಆರಂಭಿಸಿರುವುದು ತೀವ್ರ ವಿವಾದ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಹದೇವಪ್ಪ ಅವರು ಇನ್ನೂ ಮನೆಯಲ್ಲೇ ವಾಸ್ತವ್ಯ ಹೂಡಿರುವಾಗಲೇ ಮನೆಗೆ ಪೇಂಟಿಂಗ್ ಮಾಡಿಸುವುದು ಹಾಗೂ ಸಾರ್ವಜನಿಕರ ಭೇಟಿಗಾಗಿ ನಿರ್ಮಿಸಲಾಗಿದ್ದ ಶೆಡ್ ಅನ್ನು ಒಡೆಸಿ ಹಾಕಿರುವುದು ಕಾಂಗ್ರೆಸ್ ಪಾಳೆಯದಲ್ಲಿ ಭಾರೀ ಮುಜುಗರ ಸೃಷ್ಟಿಸಿದೆ.
23
ಮನೆಯಲ್ಲಿದ್ದಾಗಲೇ ಶೆಡ್ ಧ್ವಂಸ, ಪೇಂಟಿಂಗ್ ಶುರು!
ಸದ್ಯ ಡಾ. ಎಚ್.ಸಿ. ಮಹದೇವಪ್ಪ ವಾಸವಿರುವ ಕ್ರೆಸೆಂಟ್ ರಸ್ತೆಯ ಸರ್ಕಾರಿ ನಿವಾಸವು ಹಾಲಿ ಸಚಿವ ಭೈರತಿ ಸುರೇಶ್ ಅವರಿಗೆ ಹಂಚಿಕೆಯಾಗಿದೆ (Allot). ನಿಯಮಾವಳಿಗಳ ಪ್ರಕಾರ ಯಾವುದೇ ಸಚಿವರು ಅಥವಾ ಶಾಸಕರು ಸರ್ಕಾರಿ ನಿವಾಸವನ್ನು ತೆರವುಗೊಳಿಸಲು ಕನಿಷ್ಠ 6 ತಿಂಗಳ ಕಾಲಾವಕಾಶವಿರುತ್ತದೆ. ಆದರೆ, ಮಹದೇವಪ್ಪ ಅವರು ಮನೆ ಹುಡುಕಿ ಖಾಲಿ ಮಾಡುವ ಮುನ್ನವೇ ಭೈರತಿ ಸುರೇಶ್ ಅತಿಯಾದ ಆತುರ ತೋರಿದ್ದಾರೆ ಎನ್ನಲಾಗಿದೆ. ಖುದ್ದು ಭೈರತಿ ಸುರೇಶ್ ಅವರೇ ಸ್ಥಳಕ್ಕೆ ಭೇಟಿ ನೀಡಿ, ಮಹದೇವಪ್ಪ ಅವರು ಸಾರ್ವಜನಿಕರನ್ನು ಭೇಟಿ ಮಾಡುತ್ತಿದ್ದ ಮೀಟಿಂಗ್ ಹಾಲ್/ಶೆಡ್ ಅನ್ನು ನೆಲಸಮ ಮಾಡಿಸಿದ್ದಾರೆ.
ಮಹದೇವಪ್ಪ ಅವರು ಮನೆಯ ಒಳಗಿರುವಾಗಲೇ ಹೊರಗಡೆ ಪೇಂಟಿಂಗ್ ಹಾಗೂ ನವೀಕರಣ ಕಾಮಗಾರಿ ಶುರುಮಾಡಿಸಲಾಗಿದೆ. ಅಷ್ಟೇ ಅಲ್ಲದೆ, ಮಹದೇವಪ್ಪ ಅವರ ಮನೆಯ ಸಿಬ್ಬಂದಿಗೆ ಭೈರತಿ ಸುರೇಶ್ ಆವಾಜ್ ಹಾಕಿದ್ದು, ಕೇವಲ 2 ದಿನಗಳಲ್ಲಿ ಮನೆ ಖಾಲಿ ಮಾಡುವಂತೆ ತಾಕೀತು ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
33
ಪಾಪ ಅವರಿಗೆ ಬಹಳ ಕಷ್ಟ ಇರಬಹುದು: ಮಹದೇವಪ್ಪ ಮಾರ್ಮಿಕ ತಿರುಗೇಟು!
ಭೈರತಿ ಸುರೇಶ್ ಅವರ ಈ ಅಸಹನೆ ಮತ್ತು ವರ್ತನೆಗೆ ಅತ್ಯಂತ ಸಂಯಮ ಹಾಗೂ ಮಾರ್ಮಿಕ ವ್ಯಂಗ್ಯದ ಮೂಲಕವೇ ಡಾ. ಎಚ್.ಸಿ. ಮಹದೇವಪ್ಪ ಪ್ರತ್ಯುತ್ತರ ನೀಡಿದ್ದಾರೆ. 'ಮನೆ ಭೈರತಿ ಸುರೇಶ್‌ಗೆ ಅಲಾಟ್ ಆಗಿದೆ. ಖಾಲಿ ಮಾಡಿ ಎಂದಿದ್ದಾರೆ, ಖಾಲಿ ಮಾಡಬೇಕಲ್ಲವೇ? ಪಾಪ... ಅವರಿಗೆ ಬಹಳ ಕಷ್ಟ ಇರಬಹುದು, ಬಹಳ ಬೇಗ ಇಲ್ಲಿಗೆ ಬರಬೇಕೆಂಬ ಆತುರ ಇರಬಹುದು. ಇಲ್ಲಿ ಹಿರಿಯ-ಕಿರಿಯ ನಾಯಕ ಎಂಬ ಪ್ರಶ್ನೆಯೇ ಬರಲ್ಲ. ಅವರು ಮಿನಿಸ್ಟರ್ ಇದ್ದಾರೆ, ಅವರ ಕೆಲಸ ಕಾರ್ಯಗಳಿಗೆ ಅಡ್ಡಿ ಆಗಬಾರದು. ನಾನು ಬಾಡಿಗೆ ಮನೆ ಹುಡುಕುತ್ತಿದ್ದೇನೆ, ಸಿಕ್ಕ ತಕ್ಷಣ ಖಾಲಿ ಮಾಡಿಕೊಡುತ್ತೇನೆ. ಪಾಪ ಅವರು ಕೇಳ್ತಿದ್ದಾರೆ, ಅವರಿಗೆ ತೊಂದರೆ ಆಗಬಾರದು ಎಂದು ಬಿಡುತ್ತಿದ್ದೇನೆ. ನಾನು ಸರ್ಕಾರಿ ಕೆಲಸದಲ್ಲಿದ್ದೆ, ಮನೆ ಕೊಟ್ಟಿದ್ದರು. ಈಗ ನಾನಿಲ್ಲ, ಬೇಗ ಬಿಡ್ತೇನೆ. ಇದರಲ್ಲಿ ನಾನು ಯಾರ ತಪ್ಪನ್ನೂ ಹುಡುಕಲ್ಲ' ಎಂದು ಕುಟುಕಿದ್ದಾರೆ.
ಪಕ್ಷದ ಹಿರಿಯ ನಾಯಕನೊಬ್ಬ ಇನ್ನೂ ಮನೆಯಲ್ಲೇ ಇರುವಾಗ ಈ ರೀತಿ ದರ್ಪ ಪ್ರದರ್ಶಿಸಿ, ಮನೆಗೆ ಬಣ್ಣ ಬಳಿಯಲು ಮುಂದಾಗಿರುವ ಕಿರಿಯ ಸಚಿವ ಭೈರತಿ ಸುರೇಶ್ ಅವರ ನಡೆಗೆ ಸ್ವಪಕ್ಷೀಯರೇ ಒಳಗೊಳಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ