ಭವಿಷ್ಯದ ಎಲ್ಲ ಸವಾಲುಗಳಿಗೆ ಸೇನೆ ರೆಡಿ: ರಾಜನಾಥ್‌ ಸಿಂಗ್‌

First Published Oct 23, 2021, 11:13 AM IST

ಬೆಂಗಳೂರು(ಅ.23):  ಭವಿಷ್ಯದಲ್ಲಿ ಎದುರಾಗಬಹುದಾದ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆಯನ್ನು ಸರ್ವಸನ್ನದ್ಧವಾಗಿರುವಂತೆ ರೂಪಿಸಲಾಗುತ್ತಿದೆ. ಭಾರತೀಯ ಸೇನೆಯ ಸಾಮರ್ಥ್ಯ ಮತ್ತು ದಕ್ಷತೆ ವೃದ್ಧಿಸಲು ಸರ್ಕಾರ ವೇಗವಾಗಿ ಹೆಜ್ಜೆಯಿಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದ್ದಾರೆ.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 1971ರ ಬಾಂಗ್ಲಾ ವಿಮೋಚನಾ ಸಮರದ ಸುವರ್ಣ ವಿಜಯ ವರ್ಷಾಚರಣೆಯ ಅಂಗವಾಗಿ ಮೂರು ದಿನಗಳ ಕಾಲ ನಡೆಯಲಿರುವ ‘ಸಂಯೋಜಿತ ಉದ್ದೇಶಗಳು’ ಶೃಂಗಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಜನಾಥ ಸಿಂಗ್‌

ಭಾರತೀಯ ಸೇನೆ ಮತ್ತು ಸಂಬಂಧ ಪಟ್ಟ ಅನೇಕ ಸಂಸ್ಥೆಗಳ ನಡುವೆ ಎಲ್ಲ ಹಂತದಲ್ಲಿ ಇನ್ನಷ್ಟು ಸಮನ್ವಯ ಸಾಧಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯತತ್ಪರರಾಗಿದ್ದೇವೆ. ಸಶಸ್ತ್ರ ಪಡೆಗಳು ಮತ್ತಿತರ ರಕ್ಷಣಾ ಸಂಬಂಧಿ ಸಂಸ್ಥೆಗಳನ್ನು ಸಂಯೋಜಿಸಲಾಗುವುದು. ಸ್ವದೇಶಿ ಉಪಕರಣಗಳ ನಿರ್ಮಾಣ, ತರಬೇತಿ ಮತ್ತು ಸರಕು ನೆರವು, ಸಾಮರ್ಥ್ಯ ವೃದ್ಧಿಯ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಲಿದ್ದೇವೆ ಎಂದು ರಾಜನಾಥ್‌ ಸಿಂಗ್‌ ತಿಳಿಸಿದರು.

ರಕ್ಷಣಾ ವಲಯದಲ್ಲಿ ರಫ್ತಿಗೆ ಆದ್ಯತೆ, ರಕ್ಷಣಾ ಸಂಶೋಧನೆಯಲ್ಲಿ ಖಾಸಗಿ ಸಂಸ್ಥೆಗಳ ತೊಡಗಿಸುವಿಕೆಗೆ ಹೆಚ್ಚು ಒತ್ತು, ರಕ್ಷಣಾ ಉಪಕರಣಗಳ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಭಾರತೀಯ ಕಂಪನಿಗಳನ್ನು ತೊಡಗಿಸಿ ಸ್ವದೇಶಿಕರಣಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ರಕ್ಷಣಾ ಸಚಿವರು ಹೇಳಿದರು.

ಇತಿಹಾಸ ಎಂಬುದು ಕೇವಲ ವಿಶ್ವಾಸದ ವಿಷಯವಲ್ಲ. ಇತಿಹಾಸವನ್ನು ವಿಶ್ಲೇಷಣೆ ನಡೆಸಬೇಕು. 1971ರ ಪಾಕಿಸ್ತಾನದ ಜೊತೆಗಿನ ಯುದ್ಧದ ಬಗೆಗಿನ ಮಾಹಿತಿಯ ಜೊತೆಗೆ ಆ ಯುದ್ಧದಿಂದ ಕಲಿತ ಪಾಠ, ಮತ್ತು ಅದರ ಪ್ರಸ್ತುತತೆಯ ಬಗ್ಗೆ ಸಮ್ಮೇಳನದಲ್ಲಿ ವಿಚಾರ ವಿನಿಮಯ ನಡೆಯಬೇಕು ಎಂದು ರಾಜನಾಥ್‌ ಅಭಿಪ್ರಾಯಪಟ್ಟರು.

ರಕ್ಷಣಾ ಮಂತ್ರಿ ರಾಜನಾಥ್‌ ಸಿಂಗ್‌ ಅವರು ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ಗೆ ಭೇಟಿ ನೀಡಿ ಎಲ್‌ಸಿಎ ತೇಜಸ್‌ ಯುದ್ಧ ವಿಮಾನದ ಸಿಮ್ಯುಲೇಟರ್‌ನಲ್ಲಿ ಕುಳಿತು ಹಾರಾಟದ ಅನುಭವ ಪಡೆದರು.

ಯಲಹಂಕ ವಾಯುನೆಲೆಯಲ್ಲಿ ವಾಯುಪಡೆಯಿಂದ 1971ರ ಬಾಂಗ್ಲಾ ವಿಮೋಚನಾ ಸಮರದ ಸುವರ್ಣ ವಿಜಯ ವರ್ಷಾಚರಣೆಯ ಅಂಗವಾಗಿ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನವನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉದ್ಘಾಟಿಸಿದರು.

click me!