ಕೊಡಗು: ಪಂಪ್ ಹೌಸ್ ಬಡಾವಣೆಯಲ್ಲಿ ಬಂಡೆಗಳಡಿ ಉಕ್ಕುತ್ತಿದೆ ಜಲ; ಭೂಕುಸಿತದ ಆತಂಕ!

First Published | Aug 21, 2024, 10:26 PM IST

ಬೆಟ್ಟ ಗುಡ್ಡಗಳ ನಡುವೆ ಇರುವ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಬಂತು ಅಂದ್ರೆ ಇನ್ನಿಲ್ಲದ ಭಯ ಕಾಡುತ್ತದೆ. ಅದರಲ್ಲೂ ಕೇರಳದ ವಯನಾಡಿನಲ್ಲಿ ಆದ ಭೀಕರ ಭೂಕುಸಿತದ ಬಳಿಕ ಕೊಡಗಿನ ಜನರಲ್ಲಿ ಮಳೆ ಬಂತು ಅಂದ್ರೆ ಜೀವ ಕೈಯಲ್ಲಿ ಹಿಡಿದು ಬದುಕಬೇಕೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಆತಂಕದಲ್ಲಿ ಬದುಕುತ್ತಿರುವವರು ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಗ್ರಾಮದ ಪಂಪ್ ಹೌಸ್ ಬಡಾವಣೆಯ ಜನರು. ಹೌದು ಬಡಾವಣೆಯ ಒಂದು ಭಾಗದಲ್ಲಿ ಬೃಹತ್ ಗಾತ್ರದ ಬಂಡೆಗಳಿಂದ ಕೂಡಿರುವ ಬೆಟ್ಟವಿದೆ. ಆ ಬೆಟ್ಟ ಹಾಗೂ ಬಂಡೆಗಳ ಅಡಿಯಿಂದ ಸಾಕಷ್ಟು ಜಲ ಬರಲಾರಂಭಿಸಿದೆ. ಹೀಗಾಗಿ ಬೆಟ್ಟ ಕುಸಿಯಬಹುದು ಎಂಬ ಆತಂಕದಿಂದ 100 ಕ್ಕೂ ಹೆಚ್ಚು ಕುಟುಂಬಗಳು ಆತಂಕದಿಂದ ದಿನದೂಡಬೇಕಾಗಿದೆ. ಬೆಟ್ಟದ ತಪ್ಪಲಿನಲ್ಲಿ ಇರುವ ಕೊಲ್ಲಿಯ ಜಾಗದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಒಂದು ವೇಳೆ ಈ ಬೆಟ್ಟ ಕುಸಿದಿದ್ದೇ ಆದಲ್ಲಿ ಇಲ್ಲಿ ಎದುರಾಗುವ ಅಪಾಯವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. 

ಈಗಾಗಲೇ ಬಂಡೆಗಳ ತಳಭಾಗದಿಂದ ಸಾಕಷ್ಟು ಜಲ ಬರುತ್ತಿದ್ದು ಮಳೆ ಸುರಿದಾಗಲಂತೂ ಹೊಳೆಯಂತೆ ನೀರು ಹರಿಯುತ್ತದೆ. ಇದು ನಮ್ಮನ್ನು ಮತ್ತಷ್ಟು ಭಯಕ್ಕೆ ದೂಡುತ್ತದೆ ಎನ್ನುತ್ತಿದ್ದಾರೆ ಜನರು. ಬಂಡೆಗಳ ಅಕ್ಕಪಕ್ಕದಲ್ಲಿ ಈಗಾಗಲೇ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು ಇದೆಲ್ಲವೂ ಭೂಕುಸಿತದ ಮುನ್ನೆಚ್ಚರಿಕೆಯ ಲಕ್ಷಣಗಳು ಎನ್ನುವುದು ಜನರ ಅಳಲು.

Tap to resize

ಬೆಟ್ಟ ಅಥವಾ ಕಲ್ಲು ಬಂಡೆಗಳು ಕುಸಿಯಂತೆ ತಡೆಗೋಡೆ ನಿರ್ಮಿಸಿಕೊಡಿ ಎಂದು ಹಲವು ವರ್ಷಗಳಿಂದ ಮನವಿ ಮಾಡಿದ್ದೇವೆ ಆದರೆ ಯಾರು ನಮಗಿರುವ ಅಪಾಯದ ಬಗ್ಗೆ ಎಚ್ಚರ ವಹಿಸಲ್ಲ ಎಂದು ನೋವು ತೋಡಿಕೊಳ್ಳುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಇಲ್ಲಿನ ನಿವಾಸಿ ಸುಬೈದಾ ಅವರು ಚಿಕ್ಕಪುಟ್ಟ ಮಕ್ಕಳೊಂದಿಗೆ ಜೀವನ ಮಾಡುತ್ತಿದ್ದೇವೆ. ರಾತ್ರಿ ಮನೆಯಲ್ಲಿ ನಿದ್ದೆ ಮಾಡಲಾಗುತ್ತಿಲ್ಲ. ಎಷ್ಟೇ ಭಂಡಧೈರ್ಯ ಮಾಡಿ ಮಲಗಿದರೂ ನಿದ್ದೆ ಬಾರದೆ ಎದ್ದು ಕುಳಿತುಕೊಳ್ಳುವಂತೆ ಆಗಿದೆ. ತಡೆಗೋಡೆ ನಿರ್ಮಿಸಿಕೊಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಇದುವರೆಗೆ ಯಾರೂ ಗಮನಹರಿಸಿಲ್ಲ ಎಂದು ನೋವಿನಿಂದ ನುಡಿದಿದ್ದಾರೆ. 

ಮತ್ತೊಂದೆಡೆ ಬರುವ ಜಲದ ನೀರು ಹೊರಗೆ ಹೋಗುವಂತೆ ಚರಂಡಿ ಮಾಡಲಾಗಿದೆ. ಆದರೆ ಇಲಿ, ಹೆಗ್ಗಣಗಳು ದೊಡ್ಡದೊಡ್ಡ ಬಿಲಗಳನ್ನು ಕೊರೆದು ನೀರೆಲ್ಲವೂ ಬಿಲದೊಳಗೆ ಹೋಗುತ್ತಿದೆ. ಇದು ಭೂಕುಸಿತದ ಆತಂಕವನ್ನು ಮತ್ತಷ್ಟು ಜಾಸ್ತಿ ಮಾಡಿದೆ. ನಾವು ಬೇರೆಡೆ ಎಲ್ಲಿಗೆ ಹೋಗಲು ಅವಕಾಶವೂ ಇಲ್ಲ. ಪಂಚಾಯಿತಿ ಅವರಿಗೆ ಹೇಳಿದರೆ ಇಲ್ಲಿ ತಡೆಗೋಡೆ ಮಾಡುವಷ್ಟು ದೊಡ್ಡ ಅನುದಾನವೂ ಇಲ್ಲ. ಮಳೆಗಾಲ ಮುಖಿಯಲಿ ನೋಡೋಣ ಎನ್ನುತ್ತಿದ್ದಾರೆ. ಆದರೆ ಅಷ್ಟರಲ್ಲಾಗಲೇ ಏನಾದರೂ ದುರಂತ ಸಂಭವಿಸಿದರೆ ಯಾರು ಹೊಣೆ ಎನ್ನುತ್ತಿದ್ದಾರೆ.

Latest Videos

click me!