ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕೆ ಎಂಬೆಸ್ಸಿ ಒಡಂಬಡಿಕೆ

First Published | Sep 9, 2020, 7:41 AM IST

ಬೆಂಗಳೂರು(ಸೆ.09): ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲು ನಿಲ್ದಾಣ ಮತ್ತು ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಬಿಎಂಆರ್‌ಸಿಎಲ್‌ ಮೆ.ಎಂಬೆಸ್ಸಿ ಪ್ರಾಪರ್ಟಿ ಡೆವಲಪ್‌ಮೆಂಟ್‌ ಪ್ರೈವೇಟ್‌ ಸಂಸ್ಥೆ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್‌) ನಡುವೆ ಎರಡು ಒಪ್ಪಂದಗಳನ್ನು ಮಾಡಿಕೊಂಡಿದೆ.

ಮೆ.ಎಂಬೆಸ್ಸಿ ಪ್ರಾಪರ್ಟಿ ಡೆವಲಪ್‌ಮೆಂಟ್‌ ಪ್ರೈವೇಟ್‌ ಸಂಸ್ಥೆಯೊಂದಿಗೆ 140 ಕೋಟಿ ಅಂದಾಜು ವೆಚ್ಚದಲ್ಲಿ ಓಆರ್‌ಆರ್‌- ವಿಮಾನ ನಿಲ್ದಾಣ ಮೆಟ್ರೋ ಮಾರ್ಗದಲ್ಲಿನ ಬೆಟ್ಟಹಲಸೂರಿನಲ್ಲಿ ಮೆಟೋ ನಿಲ್ದಾಣ ನಿರ್ಮಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಹಾಗೆಯೇ ಬಿಎಂಆರ್‌ಸಿಎಲ್‌ನೊಂದಿಗೆ ಓಆರ್‌ಆರ್‌- ಏರ್‌ಪೋರ್ಟ್‌ ಮೆಟ್ರೋದ 4.95 ಕಿಮೀ ಉದ್ದದ ಮಾರ್ಗವನ್ನು ವಿಮಾನ ನಿಲ್ದಾಣ ವಿಭಾಗದಲ್ಲಿ 800 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸುವ ಒಪ್ಪಂದಕ್ಕೆ ಬಿಐಎಎಲ್‌ ಸಹಿ ಹಾಕಿದೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಮೂರು ಸಂಸ್ಥೆಗಳ ಮುಖ್ಯಸ್ಥರು ಎರಡು ಒಡಂಬಡಿಕೆಗಳಿಗೆ ಸಹಿ ಮಾಡಿದ್ದಾರೆ.
Tap to resize

ಎಂಬೆಸ್ಸಿ ಗ್ರೂಪ್‌ ಈ ಹಿಂದೆ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ ಮತ್ತು ವೀರಣ್ಣ ನಿಲ್ದಾಣದ ಆರ್‌ಒಬಿ(ರೋಡ್‌ ಓವರ್‌ ಬ್ರಿಡ್ಜ್‌) ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ 140 ಕೋಟಿ ಅಂದಾಜು ವೆಚ್ಚದಲ್ಲಿ ಓಆರ್‌ಆರ್‌- ವಿಮಾನ ನಿಲ್ದಾಣ ಮೆಟ್ರೋ ಮಾರ್ಗದಲ್ಲಿನ ಬೆಟ್ಟಹಲಸೂರಿನಲ್ಲಿ ಮೆಟೋ ನಿಲ್ದಾಣ ನಿರ್ಮಾಣ ಮಾಡಲು ಒಡಂಬಡಿಕೆ ಮಾಡಿಕೊಂಡಿದೆ.
ಬೆಟ್ಟಹಲಸೂರಿನ ಮೆಟ್ರೋ ನಿಲ್ದಾಣ 2024 ಡಿಸೆಂಬರ್‌ ಒಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಭೂಸ್ವಾಧೀನ, ಸಿವಿಲ್‌ ಕಾಮಗಾರಿ ಮತ್ತು ಎಲೆಕ್ಟ್ರೋ-ಮೆಕ್ಯಾನಿಕಲ್‌ ಕೆಲಸಗಳು, ಮೂಲಭೂತ ಸೌಲಭ್ಯ ಮತ್ತು ಸಿಸ್ಟಮ್‌ ಉಪಕರಣಗಳು ಸೇರಿದಂತೆ ಬೆಟ್ಟಹಲಸೂರಿನಲ್ಲಿ ಬಿಎಂಆರ್‌ಸಿಎಲ್‌ ಮೆಟ್ರೋ ನಿಲ್ದಾಣವನ್ನು ನಿರ್ಮಿಸಿ ನಿರ್ವಹಿಸಲಿದೆ. ಜತೆಗೆ ಪಾದಚಾರಿ ಮೇಲು ಸೇತುವೆ ನಿರ್ಮಾಣಗೊಳ್ಳಲಿದೆ. ಮೆಟ್ರೋ ನಿಲ್ದಾಣದ ಮಾಲಿಕತ್ವ ಬಿಎಂಆರ್‌ಸಿಎಲ್‌ನೊಂದಿಗೆ ಮುಂದುವರೆಯಲಿದೆ.
ಬೆಂಗಳೂರು ನಗರದ ಅಭಿವೃದ್ಧಿಗೆ ಎಂಬೆಸ್ಸಿ ಗ್ರೂಪ್‌ ಕೊಡುಗೆ ಗುರುತಿಸಿ ನಿಲ್ದಾಣವನ್ನು ಎಂಬೆಸ್ಸಿ ಬುಲೆವರ್ಡ್‌ ಬೆಟ್ಟಹಲಸೂರು ಮೆಟ್ರೋ ನಿಲ್ದಾಣ ಎಂದು ಹೆಸರಿಡಲಾಗುವುದು. ಎಂಬೆಸ್ಸಿ ಗ್ರೂಪ್‌ಗೆ ನಿಲ್ದಾಣದಲ್ಲಿ ಜಾಹೀರಾತು ಸ್ಥಳ( ಒಂದು ಸಾವಿರ ಚದರ ಅಡಿ) ಮತ್ತು ವಾಣಿಜ್ಯ ಸ್ಥಳ( ಮೂರು ಸಾವಿರ ಚದರ ಅಡಿ) ಸಹ ನೀಡಲಾಗುವುದು ಎಂದು ಮೆಟ್ರೋ ನಿಗಮ ತಿಳಿಸಿದೆ.
ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಿಂದ ಕೆಆರ್‌ ಪುರಂ ಮತ್ತು ಹೆಬ್ಬಾಳ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌ವರೆಗೆ 56 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಬಿಎಂಆರ್‌ಸಿಎಲ್‌ ನಿರ್ಮಾಣ ಮಾಡುತ್ತದೆ. ಓಆರ್‌ಆರ್‌- ವಿಮಾನ ನಿಲ್ದಾಣ ಮೆಟ್ರೋವನ್ನು ಬಿಎಂಆರ್‌ಸಿಎಲ್‌ ಒಟ್ಟು 14844 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ. ಈ ಕಾಮಗಾರಿ 2024ರಲ್ಲಿ ಪೂರ್ಣಗೊಳ್ಳಲಿದ್ದು ಪ್ರತಿ ದಿನ 7.8 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ.
ಬೆಟ್ಟಹಲಸೂರಿನ ಮೆಟ್ರೋ ನಿಲ್ದಾಣವೂ ಕೂಡ 2024ರಲ್ಲಿ ಪೂರ್ಣಗೊಳ್ಳಲಿದ್ದು ಪ್ರತಿದಿನ ಎಂಟು ಸಾವಿರ ಪ್ರಯಾಣಿಕರು ಸಂಚರಿಸಬಹುದು. ಇದು 2041ರ ಹೊತ್ತಿಗೆ 35 ಸಾವಿರಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ವಿಮಾನ ನಿಲ್ದಾಣದ ಪ್ರದೇಶದ ಎರಡು ನಿಲ್ದಾಣಗಳು ಸೇರಿದಂತೆ 4.95 ಕಿಮೀ ಉದ್ದದ ಮೆಟ್ರೋ ಮಾರ್ಗ 2024ರಲ್ಲಿ ಪೂರ್ಣಗೊಳ್ಳಲಿದ್ದು, 800 ಕೋಟಿ ವೆಚ್ಚವಾಗಲಿದೆ. ಈ ನಿಲ್ದಾಣಗಳಿಂದ ಪ್ರತಿ ದಿನ 60 ಸಾವಿರ ಪ್ರಯಾಣಿಕರು ಇತರೆಡೆಗೆ ಪ್ರಯಾಣಿಸುವ ಸಾಧ್ಯತೆ ಇದೆ. ಇದು 2041ರ ವೇಳೆಗೆ 1.88 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ.
ವಿಮಾನ ನಿಲ್ದಾಣ ಪ್ರದೇಶದಲ್ಲಿ ಸಿವಿಲ್‌ ಕಾಮಗಾರಿಗಳು ಮಾಚ್‌ರ್‍ 2021ರಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. 56 ಕಿ.ಮೀ ಮೆಟ್ರೋ ವಯಾಡಕ್ಟ್ ಮತ್ತು 30 ನಿಲ್ದಾಣಗಳ ಸಿವಿಲ್‌ ಕಾಮಗಾರಿಗಳಿಗೆ 3,230 ಕೋಟಿ ರು.ಗಳಿಗೂ ಹೆಚ್ಚಿನ ಮೊತ್ತದ ಟೆಂಡರ್‌ಗಳನ್ನು ಈಗಾಗಲೇ ಐದು ಪ್ಯಾಕೇಜ್‌ಗಳಲ್ಲಿ ಕರೆಯಲಾಗಿದೆ. ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌.ಪುರಂವರೆಗಿನ ಮೊದಲ ಎರಡು ಪ್ಯಾಕೇಜ್‌ಗಳ ಕೆಲಸ ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಉಳಿದಂತೆ ಕೆಆರ್‌ ಪುರಂನಿಂದ ವಿಮಾನ ನಿಲ್ದಾಣದವರೆಗಿನ ಮೂರು ಪ್ಯಾಕೇಜ್‌ಗಳಲ್ಲಿ ಮಾರ್ಚ್‌ 2021ರಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Latest Videos

click me!