ಕೋವಿಡ್ -19 ಹಿನ್ನಲೆಯಲ್ಲಿ ಈ ಬಾರಿಯ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆ ತೀರ್ಮಾನಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಚರಣೆಯನ್ನು ಕೈ ಬಿಡದೆ, ವೈಭವಕ್ಕೆ ಕಡಿವಾಣ ಹಾಕುವುದು ಸೂಕ್‌ತ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಹೆಚ್ಚಿನ ಜನಸಂದಣಿ ಸೇರದಂತೆ ಸಾಂಕೇತಿಕ ಆಚರಣೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ದಸರಾ ಆಚರಣೆಗೆ 10 ಕೋಟಿ ರೂ.ಗಳ ಅನುದಾವನ್ನು ಬಿಡುಗಡೆ ಮಾಡಲಾಗುವುದು. ಆಹಾರ ಮೇಳ, ಕ್ರೀಡೆ, ಯು ದಸರಾ ಮುಂತಾದ ಕಾರ್ಯಕ್ರಮಗಳನ್ನು ಈ ಬಾರಿ ಕೈಬಿಡಲಾಗುವುದು. ಗಜಪಡೆಯನ್ನು ಸಹ ಕನಿಷ್ಟ 5ಕ್ಕೆ ಸೀಮಿತಗೊಳಿಸಲು ತೀರ್ಮಾನಿಸಲಾಯಿತು.
ಡದೇವತೆ ಚಾಮುಂಡೇಶ್ವರಿಯ ಅಗ್ರಪೂಜೆ ಮತ್ತು ದಸರಾ ಉದ್ಘಾಟನಯನ್ನು ಕೋವಿಡ್‌ಗಾಗಿ ಶ್ರಮಿಸಿರುವ ಕೊರೋನಾ ಯೋಧರಾದ ನರ್ಸ್, ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಹಾಗೂ ಪೊಲೀಸರಿಂದ ನೆರವೇರಿಸುವುದು ಎಂದು ತೀರ್ಮಾನಿಸಲಾಯಿತು.
ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ಪೂಜೆ ನೆರವೇರಿಸಿ, 5-6 ಆನೆಗಳನ್ನ ಮಾತ್ರ ಬಳಸಿ, ಜಂಬೂ ಸವಾರಿಯನ್ನು ಅರಮನೆ ಆವರಣದಲ್ಲಿ ಮಾತ್ರ ನಡೆಸುವುದು, ಮೈಸೂರು ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲು ನಿರ್ಧಾರ.
ಪ್ರಧಾನಿಮಂತ್ರಿಗಳ ಆರ್ಮನಿರ್ಭರ ಭಾರತ ಪರಿಕಲ್ಷನೆಯಂತೆ ಚೀನಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಬಾರದು. ದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಮೈಸೂರು ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿ ಸಭೆ ಜರುಗಿತು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ.ಸಿ.ಎನ್ ಅಶ್ವಥ್ ನಾರಾಯಣ, ಲಕ್ಷ್ಮಣ ಸವದಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ ರವಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಂಸದರಾದ ಸುಮಲತಾ ಅಂಬರೀಶ್ ಮತ್ತು ಪ್ರತಾಪ್ ಸಿಂಹ, ಶಾಸಕರು, ಕೆ.ಎಸ್.ಟಿ. ಡಿ.ಸಿ ಅಧ್ಯಕ್ಷೆ ಶ್ರುತಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಮೈಸೂರು ಜಿಲ್ಲಾಧಿಕಾರಿ ಬಿ.ಶರತ್ ಉಪಸ್ಥಿತರಿದ್ದರು.