
ಚಿಕ್ಕಮಗಳೂರು (ಮೇ 26): ಮಲೆನಾಡಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಭಾರೀ ಅವಘಡಗಳು ಸಂಭವಿಸಿವೆ. ಕೆಲವೆಡೆ ಮರ ಕುಸಿತ, ಮನೆ ಕುಸಿತ, ಭೂ ಕುಸಿತ, ವಿದ್ಯುತ್ ಕಂಬ ಬೀಳುವುದು, ವಿದ್ಯುತ್ ಲೈನ್ ತುಂಡಾಗುವುದು, ರಸ್ತೆಗಳ ಗುಂಡಿ, ಪಾದಾಚಾರಿ ಮಾರ್ಗ ಹಾಳಾಗಿರುವುದು ಕಂಡುಬರುತ್ತಿವೆ. ಆದರೆ, ಕಳಸ ಪಟ್ಟಣದ ರಸ್ತೆಯ ಬದಿಯಲ್ಲಿರುವ ಪಾದಚಾರಿ ಮಾರ್ಗದಲ್ಲಿ ಉಂಟಾಗಿರುವ ಗುಂಡಿಗೆ ಜಾಗೃತಿ ಮೂಡಿಸಲು ಬಾಲಿವುಡ್ ನಟ ರಣಬೀರ್ ಕಪೂರ್ ಅವರನ್ನು ರಾಯಭಾರಿಯಾಗಿ ಮಾಡಿದ್ದಾರೆ. ಈ ಮೂಲಕ ಜನರು ಗುಂಡಿಗೆ ಬೀಳುವುದನ್ನು ತಪ್ಪಿಸಿದ್ದಾರೆ.
ರಸ್ತೆ ಗುಂಡಿಗೆ ರಣಬೀರ್ ಕಪೂರ್ ಜಾಗೃತಿ ರಾಯಭಾರಿ
ಕಳಸ ಪಟ್ಟಣದ ರಸ್ತೆಗಳು ಹೊಳೆಯಂತಾಗಿದೆ. ಇದರ ನಡುವೆ ಫುಟ್‌ಪಾತ್‌ಗಳಿಗೆ ಅಳವಡಿಸಿದ ಕಾಂಕ್ರಿಟ್ ಚಪ್ಪಡಿಗಳು ಹಾಳಾಗಿರುವುದರಿಂದ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇದನ್ನು ದುರಸ್ಥಿ ಪಡಿಸಲು ವರ್ತಕರು, ನಿವಾಸಗಳು ಹಲವು ಬಾರಿ ಮನವಿ ಮಾಡಿದರೂ ಸ್ಥಳೀಯಾಡಳಿತ ಸ್ಪಂದಿಸದ ಹಿನ್ನೆಲೆಯಲ್ಲಿ ಗುಂಡಿ ಬಿದ್ದ ಜಾಗದಲ್ಲಿ ಹಾಲಿವುಡ್ ನಟ ರಣಬೀರ್ ಕಪೂರ್ನ ಫ್ಲೆಕ್ಸ್‌ಗಳನ್ನು ಅಳವಡಿಸಿ ಪಾದಚಾರಿಗಳ ರಕ್ಷಣೆಗೆ ಮುಂದಾಗಿದ್ದಾರೆ.
ಇನ್ನು ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ರಾಜ ಕಾಲುವೆಯೂ ಶಿಥಿಲಾವಸ್ತೆಗೆ ತಲುಪಿದ್ದು ಆದಷ್ಟು ಬೇಗ ಸರಿ ಪಡಿಸಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲ್ಲೂಕುಗಳಲ್ಲಿ ನಿರಂತರ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ದೈನಂದಿನ ಕೆಲಸ, ಕಾರ್ಯಗಳಿಗೂ ತೊಡಕುಂಟಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲೆ ಈಗ ಮನೆಗಳು ಬೀಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಚಿಕ್ಕಮಗಳೂರು ನಗರ ಸೇರಿದಂತೆ ಮಲೆನಾಡಿನ ಹಲವು ಕಡೆಗಳಲ್ಲಿ ಮನೆಗಳು ಹಾಗೂ ಗೋಡೆಗಳು ಕುಸಿದು ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಚಿಕ್ಕಮಗಳೂರು ನಗರದ ಶಂಕರಪುರ ಬಡಾವಣೆಯಲ್ಲಿ ಬೆಳಗ್ಗೆ ಮನೆತೊಂದು ಸಂಪೂರ್ಣ ಕುಸಿದು ಬಿದ್ದಿದೆ. ಸ್ಥಳಕ್ಕೆ ನಗರಸಭೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮನೆ ಮೇಲೆ ಮರ ಬಿದ್ದು ಮಹಿಳೆಗೆ ಗಾಯ :
ಮೂಡಿಗೆರೆ ತಾಲೂಕಿನ ಬಾಳೂರು ಕಾಫಿ ಎಸ್ಟೇಟ್ನಲ್ಲಿ ಕಾರ್ಮಿಕರ ಮನೆ ಮೇಲೆ ಮರ ಬಿದ್ದ ಪರಿಣಾಮ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ನಿನ್ನೆ ತಡ ರಾತ್ರಿ ಎರಡು ಗಂಟೆ ಸುಮಾರಿಗೆ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಯಿಂದಾಗಿ ಮರ ಉರುಳಿ ಬಿದ್ದಿದೆ.ಈ ವೇಳೆ ಮನೆಯಲ್ಲಿ ನಿದ್ರಿಸುತ್ತಿದ್ದ ಕಾರ್ಮಿಕ ಮಹಿಳೆ ಸುನಂದ ಎಂಬುವವರಿಗೆ ಗಂಭೀರ ಗಾಯವಾಗಿದೆ. ತಕ್ಷಣವೇ ಗಾಯಾಳುವನ್ನು ಬಣಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರ ಬಿದ್ದ ರಬಸಕ್ಕೆ ಮನೆಯ ಮೇಲ್ಟಾವಣಿ ಸಂಪೂರ್ಣ ಹಾನಿಯಾಗಿವ ಜೊತೆಗೆ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ನಾಶವಾಗಿದೆ. ಇಷ್ಟಾದರೂ ಎಸ್ಟೇಟ್ನ ಮಾಲೀಕರು, ಮತ್ತು ಮ್ಯಾನೇಜರ್‌ಗಳು ಕನಿಷ್ಠ ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಮಾಡಿಲ್ಲ ಎಂದು ಕುಟುಂಬಸ್ಥರು ಬೇಸರ ಹೊರಹಾಕಿದ್ದಾರೆ. ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಭಾರೀ ಮಳೆಯಿಂದಾಗಿ ನಿಯಂತ್ರಣ ತಪ್ಪಿದ ಫಾರ್ಚುನರ್ ಕರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಕಳಸದ ಕುದುರೆಮುಖ ಸರ್ಕಲ್ ಬಳಿ ಕಳೆದ ರಾತ್ರಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂ ಆಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಮೆಸ್ಕಾಂ ಸಿಬ್ಬಂದಿ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಭಾರೀ ಮಳೆಯಿಂದ ಹಲವು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದು ಮೂಡಿಗೆರೆ ತಾಲ್ಲೂಕಿ ಕೊಟ್ಟಿಗೆಹಾರದ ತರುವೆ ಗ್ರಾಮ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಮುಳುಗಿದೆ.
ಎರಡುಪಟ್ಟು ಹೆಚ್ಚುಮಳೆ:
ಜಿಲ್ಲೆಯಲ್ಲಿ ರೋಹಿಣಿ ಮಳೆ ರೌದ್ರ ನರ್ತನತಳೆದಿದ್ದು, ಮೂಡಿಗೆರೆ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದೆ. ತಾಲ್ಲೂಕಿನ ದೇವರ ಮನೆಯಲ್ಲಿ 12 ಇಂಚು, ಕೊಟ್ಟಿಗೆಹಾರ 7.5 ಇಂಚು, ಗೋಣಿಬೀಡು 4 ಇಂಚು, ಬಣಕಲ್ 6.5 ಇಂಚು, ದಾರದಹಳ್ಳಿ 5 ಇಂಚು, ಊರುಬಗೆಯಲ್ಲಿ 8 ಇಂಚಿನಷ್ಟು ಮಳೆಯಾಗಿದೆ. ಇದು ವಾಡಿಕೆಗಿಂತ ಎರಡು ಪಟ್ಟು ಹೆಚ್ಚಾಗಿದ್ದು, ಮುಂಗಾರಿನ ಆರಂಭದಲ್ಲೇ ಈಪರಿ ಮಳೆ ಸುರಿಯುತ್ತಿರುವುದು ಆತಂಕ ಮೂಡಿಸಿದೆ.
ಮೆಸ್ಕಾಂಗೆ ಸುದ್ದಿ ಮುಟ್ಟಿಸಿದರೂ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಂಬಗಳು, ಲೈನ್‌ಗಳು ಹಾನಿಗೀಡಾಗಿರುವುದರಿಂದ ದುರಸ್ಥಿಗೆ ಇನ್ನೂ ಮೂರ್ನಾಲ್ಕು ದಿನ ಬೇಕು ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ತಾವೇ ಶ್ರಮದಾನ ನಡೆಸಿ ಮರದ ರೆಂಬೆ, ನೆಲಕ್ಕೆ ಬಿದ್ದಿರುವ ತಂತಿಗಳನ್ನು ಸರಿಪಡಿಸಲು ಮುಂದಾಗಿದ್ದಾರೆ.
23 ಮನೆಗಳಿಗೆ ಹಾನಿ
ನಿರಂತರ ಮಳೆಯಿಂದಾಗಿ ಕಳೆದ 7 ದಿನಗಳಲ್ಲಿ ಜಿಲ್ಲೆಯಲ್ಲಿ 23 ಮನೆಗಳಿಗೆ ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಪೈಕಿ ಕಡೂರು ತಾಲ್ಲೂಕಿನಲ್ಲಿ 5 ಮನೆಗಳಿಗೆ ಸಂಪೂರ್ಣ ಹಾನಿ ಸಂಭವಿಸಿದೆ ಉಳಿದಂತೆ ಮೂಡಿಗೆರೆ ತಾಲ್ಲೂಕಿನಲ್ಲಿ ಅತೀ ಹೆಚ್ಚು 11 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ ಎಂದು ತಿಳಿಸಿದೆ.
ಅಂಗನವಾಡಿಗಳಿಗೆ ರಜೆ
ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಜಿಲ್ಲೆಯ ಮೆಲನಾಡು ಭಾಗದ 6 ತಾಲ್ಲೂಕುಗಳಲ್ಲಿ ಮೇ.28 ರ ವರೆಗೆ ಅಂಗನವಾಡಿಗಳಿಗೆ ರಜೆ ಘೋಷಿಸಿದೆ.ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲೂಕುಗಳ ಅಂಗನವಾಡಿ ಕೇಂದ್ರಗಳಿಗೆ ಸೋಮವಾರದಿಂದ ಬುಧವಾರದ ವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜು ಆದೇಶಿಸಿದ್ದಾರೆ.ಉಳಿದಂತೆ ಕಡೂರು, ಅಜ್ಜಂಪುರ, ತರೀಕೆರೆ ತಾಲೂಕುಗಳಲ್ಲಿ ಮಳೆಯ ತೀವ್ರತೆ ಕಡಿಮೆ ಇರುವುದರಿಂದ ಈ ತಾಲೂಕುಗಳಿಗೆ ರಜೆ ಘೋಷಣೆ ಮಾಡಿಲ್ಲ.
ವರದಿ- ಆಲ್ದೂರು ಕಿರಣ್ ಏಷ್ಯಾನೆಟ್, ಸುವರ್ಣ ನ್ಯೂಸ್