ಕಳೆದ 8 ವರ್ಷದಿಂದ ಕ್ಯಾನ್ಸರ್ ರೋಗಿಗಳ ಬಾಳಿಗೆ ವಿಜ್ಞಾನಿ ರಾಕೇಶ್ ನಯ್ಯರ್ ಬೆಳಕಾಗಿದ್ದಾರೆ. ಬೆಳಗ್ಗಿನ ಒಂದು ಕಪ್ ಟೀ ಜತೆ ಕ್ಯಾನ್ಸರ್ ರೋಗಿಗಳ ಮುಖದಲ್ಲಿ ನಗು ತರಿಸುತ್ತಾರೆ.
ಮಾರಕ ಖಾಯಿಲೆಯಿಂದ ಜನ ಗುಣಮುಕ್ತರಾಗ್ಬೇಕು ಎಂಬ ನಿಟ್ಟಿನಲ್ಲಿ 'ಮಿಷನ್ ಚಾಯ್' ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 100ಟೀ ಕಪ್ ಗಳಿಂದ ಶುರುವಾದ ಮಿಷನ್ ಚಾಯ್ ಈಗ 1500 ಜನರಿಗೆ ಸಿಗ್ತಿದೆ.
ರಾಕೇಶ್ ನಯ್ಯರ್ ಗೆ ಈ ಮಹತ್ಕಾರ್ಯಕ್ಕೆ ಕೈ ಜೋಡಿಸಿದವರು ಇನ್ನೊಬ್ಬ ಮಹಿಳಾ ವಿಜ್ಞಾನಿ, ಚಂದ್ರಯಾನ 3ರ ನಿಯಂತ್ರಣ ವಿಭಾಗದ ಸದಸ್ಯೆ ಮಂಜುಳಾ ಹಾಗೂ ಗೆಳೆಯರು.
ದಿನನಿತ್ಯ 2,500 ರೂ ಹಣದಿಂದ ತಾವೇ ಸ್ವತಃ ಬಾದಾಮ್ ಹಾಲು, ಚಹಾ, ಬಿಸ್ಕೆಟ್ಸೇ ರಿ ವಿವಿಧ ಹಣ್ಣು ರೋಗಿಗಳಿಗೆ ಹಂಚಿಕೆ ಮಾಡುತ್ತಾರೆ.
ವಿಜ್ಞಾನಿ ರಾಕೇಶ್ ಮತ್ತು ಅವರ ಗಳೆಯರು ಮಾಡುವ ಚಹಾಗೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಫೇಷೆಂಟ್‌ಗಳು ಫಿದಾ ಆಗಿದ್ದಾರೆ. ಈ ಪುಟ್ಟ ಸಹಾಯ ಚಂದ್ರಯಾನ ಯಶಸ್ವಿಯಾದಷ್ಟೆ ಖುಷಿಯಾಗ್ತಿದೆ ಎನ್ನುತ್ತಾರೆ ರಾಕೇಶ್ ನಯ್ಯರ್.
ರಾಕೇಶ್ ನಯ್ಯರ್ ಈ ಸೇವೆ ಮಾಡಲು ಪ್ರಮುಖ ಕಾರಣವಿದೆ. ಸುಮಾರು 10 ವರ್ಷಗಳ ಹಿಂದೆ ಇವರ ಮಾವ ಪಂಜಾಬ್‌ನ ಅಮೃತಸರ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು.
ಗ್ಯಾಂಗ್ರಿನ್ ನಿಂದ ಅವರ ಮಾವನ ಕಾಲನ್ನು ಕತ್ತರಿಸಲಾಗಿತ್ತು. ಅವರ ನೋವಿಗೆ ಔಷಧಿ ಹಚ್ಚಿ ದಣಿದು ಕುಳಿತ್ತಿದ್ದಾಗ ಒಬ್ಬಳು ಅಜ್ಜಿ ಬಂದು ವಾಯ್ ಪೀಯೋಗೆ (ಚಹಾ ಕುಡಿತಿಯಾ?) ಎಂದು ಕೇಳಿದರು.
ಚಹಾ ಕಪ್ ಅನ್ನು ರಾಕೇಶ್ ಕೈಗೆ ನೀಡಿದ ನಂತರ ಅಜ್ಜಿ ಬೀರಿದ ಆ ನಗು ಅವರ ಮನಸ್ಸಲ್ಲಿ ಅಚ್ಚಾಗಿ ಉಳಿದಿತ್ತು. ಆ ನಗು ಇವರಿಗೆ ಅಪಾರ ಧೈರ್ಯ ಹೇಳಿದಂತಿತ್ತು. ಹೀಗಾಗಿ ಬೆಂಗಳೂರಿಗೆ ಬಂದ ನಂತರವೂ ಅಜ್ಜಿಯ ಮಾತು ಮತ್ತು ಆ ನಗು ಕಣ್ಣಮುಂದೆ ಬಂದು ಹೋಗುತ್ತಿತ್ತು.
ಹೀಗಾಗಿ ತಾನೂ ಕೂಡ ಅಜ್ಜಿಯಂತೆ ಚಹಾದ ಮೂಲಕ ನಗು ಹಂಚಲು ಮುಂದಾದರು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯನ್ನು ಇದಕ್ಕಾಗಿ ಆರಿಸಿಕೊಂಡ ರಾಕೇಶ್ ಅವರ ಈ ಮಿಷನ್ ಚಾಯ್ ಸೇವೆ ಈಗ ಕಿದ್ವಾಯಿ ಮಾತ್ವಲ್ಲದೆ ಸಂಜಯ್ ಗಾಂಧಿ ಆಸ್ಪತ್ರೆ, ಹೈದರಾಬಾದ್‌ನ ಎಂಎನ್‌ಜಿ ಆಸ್ಪತ್ರೆಗೂ ಆವರಿಸಿದೆ.
ಈ ಔದಾರ್ಯ ಸೇವೆ ಮಿಷನ್ ಚಾಯ್ ಆರಂಭವಾಗಿದ್ದು ಆಗಸ್ಟ್ 16, 2015ರಂದು ಅಂದರೆ 8 ವರ್ಷ ತುಂಬಿದೆ. ಬೆಡ್ಡಿನಿಂದ ಎದ್ದೇಳಲಾಗದ ರೋಗಿಗಳಿಗೆ ಇವರ ಬೆಳಗ್ಗಿನ ಚಹಾದ ಮೌಲ್ಯ ಮನಸ್ಸಿಗೆ ತುಂಬಾ ಹತ್ತಿರವೆನಿಸಿದೆ. ಅದಕ್ಕಾಗಿ ಹಲವರು ದುಡ್ಡು ಕೊಡಲು ಮುಂದಾದರೆ ಚಾಯ್ ಮಿಷನ್ ನಿಮ್ಮೂರಲ್ಲಿ ತೆರೆಯಿರಿ ಎಂದು ಸಲಹೆ ನೀಡುತ್ತಾರೆ.
ಇನ್ನು ಚಾಯ್ ಮಿಷನ್ ಸದಸ್ಯರ ಬರ್ತಡೇ, ವಿಶೇಷ ದಿನಗಳಿಗೆ ಅನ್ನದಾನ ಕೂಡ ನಡೆಯುತ್ತದೆ. ಮೃತದೇಹ ಸಾಗಿಸಲು ಹಣವಿಲ್ಲದಾಗ ಖರ್ಚು ನಿಭಾಯಿಸಿದ ಎಷ್ಟೋ ಉದಾಹರಣೆಗಳಿವೆ.