
ಬೆಂಗಳೂರು: ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಲ್ಸನ್ ಗಾರ್ಡನ್ ಚಿನ್ನಯ್ಯನಪಾಳ್ಯದಲ್ಲಿ ಇಂದು ಬೆಳಿಗ್ಗೆ ಭಾರೀ ಸ್ಫೋಟ ಸಂಭವಿಸಿ ಒಂದು ಮಗು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಬೆಳಿಗ್ಗೆ 7.30 ರಿಂದ 8 ಗಂಟೆಯ ನಡುವೆ ಈ ಘಟನೆ ನಡೆದಿದ್ದು, ಸ್ಫೋಟದ ರಭಸಕ್ಕೆ ಕನಿಷ್ಠ 10 ಮನೆಗಳು ಹಾನಿಗೊಂಡಿವೆ, ಕೆಲವು ಮನೆಗಳು ಸಂಪೂರ್ಣವಾಗಿ ನೆಲಸಮವಾಗಿದೆ. ಈ ಭೀಕರ ಸ್ಫೋಟದ ಬಗ್ಗೆ ಭಾರೀ ಅನುಮಾನ ವ್ಯಕ್ತವಾಗಿದ್ದು, ಇದು ಸಿಲಿಂಡರ್ ಸ್ಟೋಟವಲ್ಲ ಈ ಬಗ್ಗೆ ತನಿಖೆ ನಡೆಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಹಲವು ಮನೆಗಳ ಗೋಡೆ, ಛಾವಣಿ ಹಾಗೂ ಕಿಟಕಿಗಳು ಹಾರಿ ಬಿದ್ದಿವೆ. ಮೊದಲ ಮಹಡಿಯಲ್ಲಿದ್ದ ಕಸ್ತೂರಿ (35) ಹಾಗೂ ಆಕೆಯ ಮಗಳು ಕಾಯಾಲ (8) ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. 50 ವರ್ಷದ ಸರಸಮ್ಮಗೆ ತಲೆಗೆ ತೀವ್ರ ಪೆಟ್ಟು ತಗುಲಿದೆ. ಶಬ್ರಿನ್ ಬಾನು (35), ಅವರ ಗಂಡ ಅಮಾನುಲ್ಲಾ ಹಾಗೂ ಮಕ್ಕಳಾದ ಲತೀಫ್ (15), ಫಾತೀಮಾ (8) ಗಾಯಗೊಂಡಿದ್ದಾರೆ. 10 ವರ್ಷದ ಮುಬಾರಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಗಾಯಾಳುಗಳ ಪಟ್ಟಿ
ಕಸ್ತೂರಮ್ಮ (35) – ವಿಕ್ಟೋರಿಯಾ ಆಸ್ಪತ್ರೆ, ಸುಟ್ಟಗಾಯ ವಿಭಾಗ
ಕಾಯಾಲ (8) – ವಿಕ್ಟೋರಿಯಾ ಆಸ್ಪತ್ರೆ, ಸುಟ್ಟಗಾಯ ವಿಭಾಗ
ಸರಸಮ್ಮ (50) – ಸಂಜಯ್ ಗಾಂಧಿ ಆಸ್ಪತ್ರೆ
ಶಬ್ರಿನ್ ಬಾನು (35) – ಸಂಜಯ್ ಗಾಂಧಿ ಆಸ್ಪತ್ರೆ
ಫಾತೀಮಾ (8) – ಸಂಜಯ್ ಗಾಂಧಿ ಆಸ್ಪತ್ರೆ
ಸುಬ್ರಹ್ಮಣಿ (62) – ಅಗಡಿ ಆಸ್ಪತ್ರೆ
ಶೇಖ್ ನಜೀಬ್ ಉಲ್ಲಾ (37) – ನಿಮ್ಹಾನ್ಸ್
ಮುಬಾರಕ್ (10) – ಮೃತ
ಸ್ಥಳೀಯರ ಪ್ರಕಾರ, ಆಗಸ್ಟ್ 14ರಂದು ಕಸ್ತೂರಿ ಎಂಬಾಕೆ ಹೋಟೆಲ್‌ನಿಂದ ಟಿಫಿನ್ ತರಿಸಿಕೊಂಡಾಗ “ಸಿಲಿಂಡರ್ ಖಾಲಿಯಾಗಿದೆ” ಎಂದು ಹೇಳಿದ್ದಳು. ಇಂದಿನ ಬೆಳಿಗ್ಗೆ 8 ಗಂಟೆ ಹೊತ್ತಿಗೆ ಆಕೆಯ ಮನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಕೆಲವು ಸ್ಥಳೀಯರು ಇದು ಗ್ಯಾಸ್ ಸಿಲಿಂಡರ್ ಸ್ಫೋಟವಾಗಿರಬಹುದು ಎಂದು ಹೇಳಿದರೆ, ಇತರರು ಸ್ಫೋಟದ ಬಳಿಕ ಗ್ಯಾಸ್ ವಾಸನೆ ಬರದ ಕಾರಣ ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ಫೋಟದ ನಂತರ ಸ್ಥಳಕ್ಕೆ ಅಗ್ನಿಶಾಮಕ ದಳ, ಆಡುಗೋಡಿ ಠಾಣೆ ಪೊಲೀಸರು, ಸೋಕೋ ತಂಡ, ಬಾಂಬ್ ಡಿಸ್ಪೋಸಲ್ ಸ್ಕ್ವಾಡ್ ಮತ್ತು NDRF ತಂಡ ಧಾವಿಸಿ, ಅವಶೇಷಗಳೊಳಗೆ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ, ಆಡುಗೋಡಿ ಇನ್ಸ್‌ಪೆಕ್ಟರ್ ರವಿಕುಮಾರ್, ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸ್ಥಳೀಯ ಶಾಸಕ ಉದಯ್ ಗರುಡಾಚಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, “ಘಟನೆಯಲ್ಲಿ ಒಂದು ಮಗು ಸಾವನ್ನಪ್ಪಿದೆ. ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಒಟ್ಟು ಎಂಟು ಜನರಿಗೆ ಗಾಯಗಳಾಗಿದ್ದು, ಐದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇಲ್ ನೋಟಕ್ಕೆ ಆರು ರಿಂದ ಏಳು ಮನೆ ಹಾನಿಯಾಗಿದೆ. ಸ್ಫೋಟದ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಮುಂದುವರಿದಿದೆ” ಎಂದು ಹೇಳಿದರು.
ಸ್ಥಳೀಯ ಶಾಸಕ ಉದಯ್ ಗರುಡಾಚಾರ್ ಅವರು, “ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ, ಎಂಟು ಜನರಿಗೆ ಗಾಯವಾಗಿದೆ. ಸ್ಥಳೀಯರು ಸಿಲಿಂಡರ್ ಸ್ಫೋಟವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನಿಖರ ಕಾರಣ ತನಿಖೆಯ ಬಳಿಕ ಗೊತ್ತಾಗಲಿದೆ” ಎಂದು ಹೇಳಿದರು.
ಚಿನ್ನಯ್ಯನಪಾಳ್ಯದ ನಿವಾಸಿ ಅಬೀಬ್, “ಬೆಳಿಗ್ಗೆ 7.30ಕ್ಕೆ ಭಾರೀ ಶಬ್ಧ ಕೇಳಿಸಿತು. ಸ್ಥಳಕ್ಕೆ ಬಂದು ನೋಡಿದಾಗ ಮನೆಗಳು ನೆಲಸಮವಾಗಿದ್ದವು. ಅಮಾನುಲ್ಲಾ ಕುಟುಂಬ ನನಗೆ ವರ್ಷಗಳಿಂದ ಪರಿಚಿತ. ಮುಬಾರಕ್ ಪ್ರತೀ ಶುಕ್ರವಾರ ಮಸೀದಿಗೆ ಹೋಗುತ್ತಿದ್ದ. ಇಂದು ಅವನು ಇಲ್ಲ ಎನ್ನುವುದು ತುಂಬಾ ದುಃಖಕರ” ಎಂದು ಕಣ್ಣೀರಿಟ್ಟು ಹೇಳಿದರು. ಇನ್ನೊಬ್ಬ ಸ್ಥಳೀಯ ಸಯ್ಯದ್ ಅಸಾದುಲ್ಲಾ, “ಸಿಲಿಂಡರ್ ಸ್ಫೋಟವಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ, ಆದರೆ ಗ್ಯಾಸ್ ವಾಸನೆ ಕಾಣಿಸಲಿಲ್ಲ. ಹೀಗಾಗಿ ನಿಖರ ಕಾರಣ ತಿಳಿದಿಲ್ಲ” ಎಂದರು.
ಗಾಯಾಳುಗಳಲ್ಲಿ ಇಬ್ಬರು ಮಕ್ಕಳು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ಮಗು ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಇನ್ನೊಬ್ಬ ಮಗು ಗೋಡೆ ಬಿದ್ದು ಕೈ ಕಾಲು ಮುರಿದುಕೊಂಡಿದೆ. ಅವಶ್ಯಕತೆ ಹಿನ್ನೆಲೆಯಲ್ಲಿ ಕೆಲವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಫೋಟದ ಕಾರಣ ಪತ್ತೆಹಚ್ಚಲು ತಜ್ಞರ ತಂಡ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆಯ ತನಿಖೆ ಮುಂದುವರಿದಿದೆ.
ಸ್ಫೋಟದ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಗ್ಯಾಸ್ ಸಿಲಿಂಡರ್ ಸ್ಫೋಟವೇ ಕಾರಣವೇ ಅಥವಾ ಬೇರೆ ಕಾರಣ ಇದೆಯೇ ಎಂಬುದನ್ನು ಪೊಲೀಸರು ಹಾಗೂ ತಜ್ಞರ ತಂಡ ಪರಿಶೀಲಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಜಾರಿಯಲ್ಲಿದೆ.