ಬೆಂಗಳೂರು: ಥಣಿಸಂದ್ರ, ವಿಶ್ವೇಶ್ವರಪುರ ವಾರ್ಡ್‌ ರಸ್ತೆ ಕಾಮಗಾರಿ ಪರಿಶೀಲಿಸಿದ ಮೇಯರ್‌

First Published | Aug 20, 2020, 8:25 AM IST

ಬೆಂಗಳೂರು(ಆ.20):  ಥಣಿಸಂದ್ರ ಮುಖ್ಯ ರಸ್ತೆ ಮತ್ತು ವಿಶ್ವೇಶ್ವರಪುರ ವಾರ್ಡ್‌ನ ವೈಟ್‌ಟಾಪಿಂಗ್‌ ಕಾಮಗಾರಿ ಹಾಗೂ ಹೆಣ್ಣೂರು ರಸ್ತೆ ದುರಸ್ತಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಎರಡು ಕಾಮಗಾರಿಗಳು ವಿಳಂಬವಾಗಿ ನಡೆಯುತ್ತಿದೆ ಎಂದು ಮಂಗಳವಾರ ನಡೆದ ಪಾಲಿಕೆ ಮಾಸಿಕ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ರಮೇಶ್‌ಗೌಡ ಹಾಗೂ ವಿಶ್ವೇಶ್ವರಪುರ ವಾರ್ಡ್‌ ಸದಸ್ಯೆ ವಾಣಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಮೇಯರ್‌, ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸದ್ಯ 110 ಹಳ್ಳಿಗಳಿಗೆ ನೀರು ಪೂರೈಸುವ ಜಲಮಂಡಳಿಯ ಕೊಳವೆ ಅಳವಡಿಕೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಥಣಿಸಂದ್ರದ (ನಾಗವಾರ ಜಂಕ್ಷನ್‌ನಿಂದ ಬಾಗಲೂರು ಜಂಕ್ಷನ್‌ ವರೆಗೆ) 9.5 ಕಿ.ಮೀ. ಉದ್ದದ ರಸ್ತೆಯ ವೈಟ್‌ಟಾಪಿಂಗ್‌ ಕಾಮಗಾರಿ ಹಿನ್ನೆಡೆ ಉಂಟಾಗಿದ್ದು, ಶೀಘ್ರ ಮುಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
Tap to resize

ಹೆಣ್ಣೂರು ಮುಖ್ಯರಸ್ತೆ ರಸ್ತೆಗುಂಡಿ ಮುಚ್ಚುವ ಕಾಮಗಾರಿಗೆ ಸಣ್ಣ ಜಲ್ಲಿಯನ್ನು ಬಳಸದೆ, ದೊಡ್ಡ ಜಲ್ಲಿಯನ್ನು ಬಳಸುತ್ತಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್‌, ಈ ರೀತಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರಿಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ನಾಗವಾರ ಹೊರವರ್ತುಲ ರಸ್ತೆ ಮಾರ್ಗ ಹಾಗೂ ಮೇಲ್ಸೇತುವೆ ಇಕ್ಕೆಲಗಳಲ್ಲಿ ಸಂಗ್ರಹವಾಗಿರುವ ಕಸ (ಮಣ್ಣಿನ ಧೂಳು)ತೆರವು ಮಾಡಬೇಕು, ಹೆಣ್ಣೂರು ಮುಖ್ಯರಸ್ತೆಯ ಹೆಣ್ಣೂರು ಬಂಡೆಯ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು, ರಸ್ತೆ ಕಾಮಗಾರಿ ನಡೆಸುವ ವೇಳೆ ವಾಹನ ಸವಾರರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಮೇಯರ್‌ ತಿಳಿಸಿದರು. ಸಜ್ಜನ್‌ ರಾವ್‌ ವೃತ್ತದಿಂದ ಕನ್ನಿಕಾ ಪರಮೇಶ್ವರಿ ರಸ್ತೆಯವರೆಗೆ ನಡೆಯುತ್ತಿರುವ ಒಂದು ಕಿ.ಮೀ. ವೈಟ್‌ ಟಾಪಿಂಗ್‌ ಕಾಮಗಾರಿ ಪರಿಶೀಲನೆ ನಡೆಸಿದರು. ವೈಟ್‌ಟಾಪಿಂಗ್‌ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಪಾದಚಾರಿ ಮಾರ್ಗ ಶೀಘ್ರ ಮುಗಿಸಲು ಸೂಚನೆ ನೀಡಿದರು.
ವಿವಿಪುರದಲ್ಲಿ ಕಳೆದ ಎರಡು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿರುವುದಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿ ಸ್ಥಗಿತದಿಂದ ವಾಹನ ಚಲಾಯಿಸುವುದು ಸವಾಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

Latest Videos

click me!