ದಕ್ಷಿಣ ಗಂಗೆ ಕಾವೇರಿ ನದಿ ಸ್ವಚ್ಛತೆ, ಉಳಿವಿಗೆ ಅಖಿಲ ಭಾರತ ಸನ್ಯಾಸಿಗಳ ಪಣ!

First Published | Oct 20, 2024, 8:39 PM IST

ಕಾವೇರಿ ನದಿ ರಾಜ್ಯಕ್ಕೆ ಅಷ್ಟೇ ಅಲ್ಲ, ಪಕ್ಕದ ತಮಿಳುನಾಡು, ಪುದುಚೇರಿಗಳಿಗೂ ಜೀವನದಿಯೇ ಸರಿ. ಕಾವೇರಿ ನದಿ ಹರಿಯುವ ಎಲ್ಲೆಲ್ಲೂ ಸಂಪೂರ್ಣ ಹಚ್ಚ ಹಸಿರು ತುಂಬಿ ನಾಡನ್ನೆಲ್ಲಾ ಸಮೃದ್ಧಿಯನ್ನಾಗಿಸುತ್ತಾಳೆ. ಜೊತೆಗೆ ಉತ್ತರದಲ್ಲಿ ಗಂಗೆ ಎಷ್ಟು ಪವಿತ್ರಳೋ ದಕ್ಷಿಣದಲ್ಲಿ ಕಾವೇರಿ ನದಿಯೂ ಕೂಡ ಅಷ್ಟೇ ಪವಿತ್ರಳು ಎನ್ನುವ ಮಾತಿದೆ. ಆದರೆ ಕಾವೇರಿ ಇತ್ತೀಚೆಗೆ ಬಹುತೇಕ ಕಲುಷಿತಗೊಳ್ಳುತ್ತಿದೆ. ಬೇಸಿಗೆ ಬಂತೆಂದರೆ ಕೈಗಾರಿಕೆಗಳಿಗೂ ಉಪಯೋಗಿಸಲು ಯೋಗ್ಯವಲ್ಲ ಎನ್ನುವಂತಹ ಸ್ಥಿತಿ ಎದುರಾಗಿದೆ. ಹೀಗಾಗಿಯೇ ಅಖಿಲ ಭಾರತ ಸನ್ಯಾಸಿಗಳ ಸಂಘ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಿಂದ ತಮಿಳುನಾಡಿನ ಪೂಂಪ್ ಹಾರ್ ವರೆಗೆ ಜಾರಗೃತಿ ಜಾಥಾ ಆರಂಭಿಸಿದೆ. 

ಸಾಧು ಸಂತರು ಕಾವೇರಿ ತವರು ಕ್ಷೇತ್ರ ತಲಕಾವೇರಿಯಿಂದ ಪೂಜೆ ಸಲ್ಲಿಸಿ ಕಾವೇರಿ ನದಿಯನ್ನು ಸ್ವಚ್ಚತೆ ಹಾಗೂ ನದಿಯ ಪ್ರಾಮುಖ್ಯತೆ ಬಗ್ಗೆ ನಾಡಿನ ಉದ್ದಗಲಕ್ಕೂ ಜಾಗೃತಿ ಕಾರ್ಯ ಮಾಡಲು ಮುಂದಾಗಿದ್ದಾರೆ. ಸ್ವಚ್ಛ ಕಾವೇರಿ ಹಾಗೂ ಜಲಮೂಲಗಳ ಸಂರಕ್ಷಣೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದಕ್ಕಾಗಿ ಯಾತ್ರೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸಾಧು ಸಂತರು ಪಾಲ್ಗೊಂಡಿದ್ದಾರೆ. ತಲಕಾವೇರಿಗೆ ಆಗಮಿಸಿದ ಸಾಧು ಸಂತರ ತಂಡ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಕಳಸಗಳಲ್ಲಿ ಪವಿತ್ರ ಕಾವೇರಿ ತೀರ್ಥ ಸಂಗ್ರಹಿಸಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನಂತರ ಭಾಗಮಂಡಲ ಕ್ಷೇತ್ರಕ್ಕೆ ತೆರಳಿದರು. ಅಲ್ಲಿಯೂ ತ್ರಿವೇಣಿ ಸಂಗಮದ ಬಳಿ ಕಾವೇರಿ ನದಿಗೆ ಮಹಾಆರತಿ ಮಾಡಿದ್ರು. 

ಯಾತ್ರೆಯ ಸಂಸ್ಥಾಪಕ ಶ್ರೀ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ, ಅಖಿಲ ಭಾರತ ಸನ್ಯಾಸಿಗಳ ಸಂಘ ಸಂಸ್ಥಾಪಕ ಶ್ರೀ ರಮಾನಂದ ಸ್ವಾಮೀಜಿ, ಕೊಡಗಿನ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ಜಾಗೃತಿ ಜಾಥಾ ಆರಂಭಿಸಿದ್ದಾರೆ. ಕೊಡಗಿನಿಂದ ಹೊರಟು ಶ್ರೀರಂಗಪಟ್ಟಣ ಬೆಂಗಳೂರು ಮಾರ್ಗವಾಗಿ ರಾಜ್ಯದ ಗಡಿಭಾಗವಾದ ಹೊಗೇನಕಲ್ ಮೂಲಕ ತಮಿಳುನಾಡಿನತ್ತ ಸಾಗಿ ನವೆಂಬರ್ 13 ರಂದು ತಮಿಳುನಾಡಿನ ಪೂಂಪ್ಹಾರ್ ತಲುಪಲಿದ್ದಾರೆ. ಬಳಿಕ ಕಾವೇರಿ ನದಿ ಬಂಗಾಳಕೊಲ್ಲಿಯ ಸಮುದ್ರದ ಸಂಗಮದಲ್ಲಿ ತಲಕಾವೇರಿ ಕ್ಷೇತ್ರದಿಂದ ಕಳಸಗಳಲ್ಲಿ ಒಯ್ಯುವ ಪವಿತ್ರ ಕಾವೇರಿ ತೀರ್ಥಕ್ಕೆ ವಿಶೇಷ ಪೂಜೆ ಸಲ್ಲಿಸಿ ವಿಸರ್ಜಿಸುವ ಮೂಲಕ ಯಾತ್ರೆಯ ಸಮಾರೋಪ ಮಾಡಲಿದ್ದಾರೆ. ಆ ಮೂಲಕ ಯಾತ್ರೆ ಸಂಚರಿಸುವೆಡೆಯೆಲ್ಲಾ ಕಾವೇರಿ ನದಿಯ ಉಳಿವಿಗಾಗಿ ಹಾಗೂ ಕಾವೇರಿ ಪಾವಿತ್ರತ್ಯೆ ಕಾಪಾಡುವಂತೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. 

Tap to resize

ಈ ಕುರಿತು ಮಾತನಾಡಿರುವ ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ಅವರು ಮನುಷ್ಯ ತಮ್ಮ ಅಂತರಂಗವನ್ನು ಸ್ವಚ್ಛಗೊಳಿಸಿಕೊಳ್ಳಬೇಕಾಗಿದೆ. ಇಡೀ ಪ್ರಕೃತಿಯಲ್ಲಿ ಯಾವ ಪಶು ಪಕ್ಷಿಯೂ ಪ್ರಕೃತಿಗೆ ಹಾನಿ ಮಾಡುತ್ತಿಲ್ಲ. ಆದರೆ ಮನುಷ್ಯ ತನ್ನ ಅತಿ ಆಸೆಗಳಿಂದಾಗಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಕಾವೇರಿ ನದಿ ಉಳಿದರೆ ಇಂದು ಇಡೀ ದಕ್ಷಿಣ ಭಾರತ ಉಳಿಯಲು ಸಾಧ್ಯ. ಆ ಕೆಲಸವನ್ನು ಅಖಿಲ ಭಾರತ ಸನ್ಯಾಸಿಗಳ ಸಂಘ ಮಾಡುತ್ತಿರುವುದು ಶ್ಲಾಘನೀಯ ಎಂದಿದ್ದಾರೆ. ಈ ಕುರಿತು ಮಾತನಾಡಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ. ಎನ್. ಚಂದ್ರಮೋಹನ್ ಕಾವೇರಿ ಕೊಡಗಿನಲ್ಲಿ ಕೇವಲ ಒಂದೆರಡು ಕಿಲೋ ಮೀಟರ್ ಅಷ್ಟೇ ಸ್ವಚ್ಛವಾಗಿದ್ದಾಳೆ. ಉಳಿದಂತೆ ತವರು ಜಿಲ್ಲೆ ಕೊಡಗಿನಿಂದ ಹಿಡಿದು ಸಮುದ್ರ ಸೇರುವ ತನಕ ನಿತ್ಯ ಮಲಿನವಾಗುತ್ತಿದ್ದಾಳೆ. ಇದರ ಸ್ವಚ್ಛತೆ ಕಾಪಾಡದಿದ್ದರೆ ಮುಂದೆ ದಕ್ಷಿಣ ಭಾರತಕ್ಕೆ ಕಂಟಕ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
 

Latest Videos

click me!