ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ದಿನಗಣನೆ; ಹಾಸನ ಜಿಲ್ಲಾಡಳಿತದಿಂದ ಭರದ ಸಿದ್ಧತೆ

First Published | Oct 19, 2024, 11:09 PM IST

ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನದ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ .  ಆಶ್ವೀಜ ಮಾಸದ ಮೊದಲ ಗುರುವಾರ ಹಾಸನಾಂಬ ದೇಗುಲದ ಬಾಗಿಲು ತೆರೆದು, ಬಲಿಪಾಡ್ಯಮಿಯ ಮಾರನೆ ದಿನ ದೇಗುಲದ ಬಾಗಿಲು ಮುಚ್ಚುವುದು ಪ್ರತೀತಿ. ಅಂತೆಯೇ ಆಶ್ವೀಜ ಮೊದಲ ಗುರವಾರವಾದ ಇದೇ ತಿಂಗಳ 24 ರಂದು ದೇಗುಲದ ಬಾಗಿಲು ತೆರೆದು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು, 

ಬಲಿಪಾಡ್ಯಮಿ ಮಾರನೇ ದಿನವಾದ ನವೆಂಬರ್ 3 ರಂದು ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ತೆರೆ ಬೀಳಲಿದೆ. ಹಾಸನಾಂಬ ಉತ್ಸವಕ್ಕೆ ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಬಾರಿ ಹಾಸನಾಂಬ ವೆಬ್ ಸೈಟ್ ಸಹ ಆರಂಭಿಸಲಾಗಿದ್ದು ಜಿಲ್ಲಾಧಿಕಾರಿ ಸತ್ಯಭಾಮ ಚಾಲನೆ ನೀಡಿದ್ದಾರೆ. 

ಅಧಿಕಾರಿಗಳು ಹಾಸನಾಂಬ ಉತ್ಸವ ಸಂದರ್ಭ ಹೇಗೆ ಕೆಲಸ ನಿರ್ವಹಿಸಬೇಕೆಂದು ಸಲಹೆ ಸೂಚನೆ ಸಹ ನೀಡಿದ್ದಾರೆ.  ಅಧಿದೇವತೆ ಶ್ರಿ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವವನ್ನು ಊರಿನ ಹಬ್ಬದಂತೆ ಆಚರಿಸಬೇಕು. ಬರುವ ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದಂತೆ ವಹಿಸಿರುವ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕರೆ ನೀಡಿದ್ದಾರೆ.
 

ಹಾಸನ ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಾಸನಾಂಬ ಉತ್ಸವ ವೆಬ್‌ಸೈಟ್‌ಗೆ ಚಾಲನೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಂಘ ಸಂಸ್ಥೆ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಗಾರ ಉದ್ದೇಶಿಸಿ ಅವರು ಮಾತನಾಡಿದರು. ಪ್ರತಿ ವರ್ಷ ನಡೆಯುವ ಅಧಿದೇವತೆ ಹಾಸನಾಂಬೆ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದಂದು ಯಾವುದೇ ಗೊಂದಲ ಆಗದಂತೆ ಸುಗಮ ದೇವಿ ದರ್ಶನಕ್ಕಾಗಿ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳಿಗೆ ಆಯಾ ಜವಾಬ್ದಾರಿ ವಹಿಸಲಾಗಿದೆ. 

ಹಿಂದಿನ ವರ್ಷದ ವಿಡಿಯೋ ತುಣುಕು ವೀಕ್ಷಣೆ ಮಾಡಿ, ಆಗಿ ಸಣ್ಣ ಪುಟ್ಟ ಲೋಪದೋಷ ಸರಿಪಡಿಸಿಕೊಳ್ಳಲಾಗಿದೆ. ಈ ಬಾರಿಯೂ ಕೂಡ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲಾಗಿದ್ದು, ಅ.೨೮ ರಂದು ಬರುವುದಾಗಿ ಹೇಳಿದ್ದಾರೆ ಎಂದರು.
ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ. ಉಪಮುಖ್ಯಮಂತ್ರಿ ಅವರು ಅ.೨೬ ರಿಂದ ೨೯ರೊಳಗೆ ಬರುವುದಾಗಿ ಹೇಳಿದ್ದಾರೆ ಎಂದರು. ಈ ವರ್ಷ ೯ ದಿನ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ೨೦ ಲಕ್ಷಕ್ಕೂ ಅಧಿಕ ಭಕ್ತಾಧಿಗಳು ಬರುವ ನಿರೀಕ್ಷೆ ಇದೆ. 

ಹಿಂದಿನ ಬಾರಿ ಆಗಿದ್ದ ಸಣ್ಣಪುಟ್ಟ ಲೋಪದೋಷ  ಈ ಬಾರಿ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಸೆಸ್ಕಾಂ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪೊಲೀಸ್ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಮಾಡಬೇಕಾದ ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ಸೂಚಿಸಲಾಗಿದೆ ಎಂದರು.
 

Tap to resize

ಕೆಪಿಟಿಸಿಎಲ್, ಸೆಸ್ಕಾಂ ಸಿಬ್ಬಂದಿ ನಿಗಾ ವಹಿಸಿದ್ದು, ವಿದ್ಯುತ್‌ಗಳಿಂದ ಆಗುವ ಅನಾಹುತ ತಪ್ಪಿಸಲು ಎಲ್ಲಾ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ವಿದ್ಯುತ್ ಅವಘಡ ಆದ ಹಿನ್ನೆಲೆ ಈ ವರ್ಷ ಅಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದು ತಾಕೀತು ಮಾಡಿದರು.

ರಸ್ತೆಗಳ ಡಾಂಬರೀಕರಣ ಮಾಡಲಾಗಿದೆ. ದೇವಸ್ಥಾನದ ಒಳ ಭಾಗದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಸರದಿ ಸಾಲಿನಲ್ಲಿ ಬರುವ ಭಕ್ತಾಧಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಕುಡಿಯುವ ನೀರು, ಶೌಚಾಲಯ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಇದರ ಜವಾಬ್ದಾರಿಯನ್ನು ವಿವಿಧ ಸಂಘ ಸಂಸ್ಥೆಗಳಿಗೆ ನೀಡಲಾಗಿದೆ. ವಿವಿಧ ಸಂಘ ಸಂಸ್ಥೆಗಳು ನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು. 

ಎಸಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಮಾರುತಿ ಮಾತನಾಡಿ, ನಿಯೋಜನೆ ಮಾಡಿದ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಲು ಎಲ್ಲರನ್ನು ಒಟ್ಟುಗೂಡಿಸಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ದೇವಾಲಯದ ಪ್ರತಿ ೧೦೦ ಮೀಟರ್‌ಗೆ ಪ್ರತಿ ಮ್ಯಾನೆಜ್ಮೆಂಟ್ ಕೌಂಟರ್ ಮಾಡಲಾಗಿದೆ. ಭಕ್ತಾಧಿಗಳನ್ನು ಸರಿಯಾಗಿ ಕಳುಹಿಸುವುದು ಇವರ ಕೆಲಸ. ಪ್ರತಿ ಕೇಂದ್ರಕ್ಕೂ ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದನ್ನು ವೀಕ್ಷಣೆ ಮಾಡಲು ಅಧಿಕಾರಿಗಳ ನೇಮಕ ಮಾಡಲಾಗಿದೆ. ಇಲ್ಲಿ ಏನೇ ತೊಂದರೆ ಆದರೂ ವಾಕಿಟಾಕಿ ಮತ್ತು ಸಿಸಿ ಕ್ಯಾಮೆರಾದಲ್ಲೂ ಮಾತನಾಡಬಹುದು ಎಂದರು. ಒಟ್ಟಿನಲ್ಲಿ ಈ ವರ್ಷವೂ ಹಾಸನಾಂಬೆ-ಸಿದ್ದೇಶ್ವರ ಸ್ವಾಮಿ ಉತ್ಸವ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.  ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ.ಶೃತಿ, ಜಿಲ್ಲಾ ಭೂ ದಾಖಲಾತಿ ಅಧಿಕಾರಿ ಸಂಜಯ್, ತಹಸೀಲ್ದಾರ್ ಶ್ವೇತಾ ಮೊದಲಾದವರಿದ್ದರು.

Latest Videos

click me!