1. ಹಾಶೀಂ ಆಮ್ಲಾ: ದಕ್ಷಿಣ ಆಫ್ರಿಕಾ
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಹಾಶೀಂ ಆಮ್ಲಾ ಭಾರತೀಯ ಮೂಲದವರು ಎಂದರೆ ನಿಮಗೂ ಅಚ್ಚರಿಯಾಗಬಹುದು. ದಕ್ಷಿಣ ಆಫ್ರಿಕಾ ಪರ ಸುಮಾರು 18 ಸಾವಿರಕ್ಕೂ ಅಧಿಕ ರನ್, 55 ಶತಕ ಸಿಡಿಸಿರುವ ಆಮ್ಲಾ ಪೂರ್ವಜರು ಗುಜರಾತಿನ ಸೂರತ್‌ನವರು. ಈಗಲೂ ಆಮ್ಲಾ ಪೋಷಕರ ಕುಟುಂಬಸ್ಥರು ಸೂರತ್’ನ ಹರಿಪುರದಲ್ಲೇ ವಾಸವಾಗಿದ್ದಾರೆ.
2. ನಾಸಿರ್ ಹುಸೇನ್: ಇಂಗ್ಲೆಂಡ್ ಮಾಜಿ ನಾಯಕ
ಇಂಗ್ಲೆಂಡ್ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿರುವ ನಾಸಿರ್ ಹುಸೈನ್ ಜನಿಸಿದ್ದು, ಸ್ಪಿನ್ ನಾಡು ಎಂದು ಕರೆಸಿಕೊಳ್ಳುವ ಚೆನ್ನೈನಲ್ಲಿ. ಚೆನ್ನೈನ ಚೆಪಾಕ್ ಮೈದಾನದ ಸಮೀಪದಲ್ಲಿರುವ ಆಸ್ಫತ್ರೆಯಲ್ಲಿ ಜನಿಸಿದ ಹುಸೇನ್, ಬಾಲ್ಯದ 7 ವರ್ಷಗಳನ್ನು ಭಾರತದಲ್ಲೇ ಕಳೆದಿದ್ದರು. ಇದೀಗ ಖ್ಯಾತ ವೀಕ್ಷಕ ವಿವರಣೆಗಾರರಾಗಿ ಗುರುತಿಸಿಕೊಂಡಿದ್ದಾರೆ.
3. ಜೀತ್ ರಾವಲ್: ನ್ಯೂಜಿಲೆಂಡ್
ನ್ಯೂಜಿಲೆಂಡ್ ಪರ ಸೀಮಿತ ಅವಧಿಯಲ್ಲೇ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮಿಂಚಿದ್ದ ನ್ಯೂಜಿಲೆಂಡ್’ನ ಜೀತ್ ರಾವಲ್ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಕಿವೀಸ್ ಪರ 18 ಪಂದ್ಯಗಳನ್ನಾಡಿ ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದರು. ಕಿವೀಸ್ ಪ್ರತಿನಿಧಿಸುವ ಮೊದಲ ರಾವಲ್, ಗುಜರಾತ್ ಪರ ಅಂಡರ್-15, ಅಂಡರ್-17 ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲದೇ ಟೀಂ ಇಂಡಿಯಾ ಕ್ರಿಕೆಟಿಗರಾದ ಪಾರ್ಥಿವ್ ಪಟೇಲ್, ರವೀಂದ್ರ ಜಡೇಜಾ ಅವರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದರು.
4. ಮುತ್ತಯ್ಯ ಮುರುಳೀಧರನ್: ಶ್ರೀಲಂಕಾ
ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರುಳೀಧರನ್ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 1,347 ವಿಕೆಟ್ ಕಬಳಿಸಿರುವ ಶ್ರೀಲಂಕಾದ ದೂಸ್ರಾ ಸ್ಪೆಷಲಿಸ್ಟ್ ಪೂರ್ವಜರು ಚೆನ್ನೈ ಮೂಲದವರು. ಮುತ್ತಯ್ಯ ಅವರ ಅಜ್ಜ ಉದ್ಯೋಗ ಅರಸಿ ಶ್ರೀಲಂಕಾಕ್ಕೆ ವಲಸೆ ಹೋಗಿದ್ದರು. ಕೆಲಕಾಲದ ಬಳಿಕ ವಾಪಾಸ್ ಭಾರತಕ್ಕೆ ಮರಳಿದರು. ಆದರೆ, ಮುತ್ತಯ್ಯ ತಂದೆ ಲಂಕಾದಲ್ಲೇ ಉಳಿದರು. ಅಂದಹಾಗೆ ಮುತ್ತಯ್ಯ, ಚೆನ್ನೈ ನಿವಾಸಿ ಮದಿ ಮಲಾರ್ ರಾಮಮೂರ್ತಿಯವರನ್ನು ವಿವಾಹವಾಗುವ ಮೂಲಕ ಭಾರತದ ಅಳಿಯ ಎನಿಸಿದ್ದಾರೆ.
5. ರವಿ ರಾಂಪಾಲ್; ವೆಸ್ಟ್ ಇಂಡೀಸ್
ವೆಸ್ಟ್ ಇಂಡೀಸ್ ತಂಡ ದಶಕಗಳಿಂದ ಸಾಕಷ್ಟು ವೇಗದ ಬೌಲರ್’ಗಳನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದೆ. ಅದರಲ್ಲಿ ರವಿ ರಾಂಪಾಲ್ ಕೂಡಾ ಒಬ್ಬರು. 19ನೇ ವರ್ಷಕ್ಕೆ ವಿಂಡೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ರವಿ ರಾಂಪಾಲ್ 160ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ರಾಂಪಾಲ್ ಕೂಡಾ ಭಾರತ ಮೂಲದವರಾಗಿದ್ದು, 2011ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧವೇ ಚೊಚ್ಚಲ ಬಾರಿಗೆ 5 ವಿಕೆಟ್ ಪಡೆದು ಮಿಂಚಿದ್ದರು.