ಚೆಸ್ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್‌ಅಪ್ ಸ್ಥಾನ ಪಡೆದ ತಮಿಳುನಾಡಿನ 18 ವರ್ಷದ ಆಟಗಾರ ಆರ್. ಪ್ರಜ್ಞಾನಂದ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಚೆಸ್ ವಿಶ್ವಕಪ್‌ನಲ್ಲಿ ತಾವು ಗೆದ್ದ ಬೆಳ್ಳಿ ಪದಕವನ್ನು ಪ್ರಜ್ಞಾನಂದ ಹೆಮ್ಮೆಯಿಂದ ತೋರಿಸಿದ್ದಾರೆ.
ಪ್ರಜ್ಞಾನಂದನ ಜೊತೆಯಲ್ಲಿ ಅವರ ತಂದೆ ರಮೇಶ್‌ಬಾಬು ಹಾಗೂ ತಾಯಿ ನಾಗಲಕ್ಷ್ಮೀ ಕೂಡ ಜೊತೆಯಲ್ಲಿದ್ದರು. ಪ್ರಧಾನಿ ಮೋದಿ ಪ್ರಜ್ಞಾನಂದನ ಹೆಗಲ ಮೇಲೆ ಕೈಇಟ್ಟು ಫೋಟೋ ತೆಗೆಸಿಕೊಂಡಿದ್ದಾರೆ.
ಪ್ರಜ್ಞಾನಂದನ ಜೊತೆ ಮಾತುಕತೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಟೇಬಲ್‌ನ ಮುಂಭಾಗದಲ್ಲಿ ಆಕರ್ಷಕ ಚೆಸ್ ಬೋರ್ಡ್‌ಅನ್ನು ಇರಿಸಲಾಗಿತ್ತು.
ಇದೇ ವೇಳೆ ಪ್ರಜ್ಞಾನಂದನ ತಂದೆ-ತಾಯಿಯವರ ಜೊತೆ ಕೂಡ ಆತ್ಮೀಯವಾಗಿ ಮಾತನಾಡಿಸಿದರು. ತಂದೆ ತಾಯಿಯ ಮುಖದಲ್ಲಿ ಪ್ರಧಾನಿಯನ್ನು ಭೇಟಿಯಾದ ಹೆಮ್ಮೆ ಕಾಣಿಸಿತ್ತು.
ಪ್ರಧಾನಿ ಮೋದಿ ಅವರನ್ನು ಸ್ವಗೃಹದಲ್ಲಿ ಭೇಟಿಯಾದ ಕ್ಷಣ ಸ್ಮರಣೀಯವಾದದ್ದು. ಅವರ ಸ್ಫೂರ್ತಿದಾಯಕ ಮಾತುಗಳು ನನಗೆ ಹಾಗೂ ನನ್ನ ತಂದೆ ತಾಯಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ ಎಂದು ಪ್ರಜ್ಞಾನಂದ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
'ನೀವು ಉತ್ಸಾಹ ಮತ್ತು ಪರಿಶ್ರಮವನ್ನು ನಿರೂಪಿಸುತ್ತೀರಿ. ಭಾರತದ ಯುವಕರು ಯಾವುದೇ ಕ್ಷೇತ್ರದಲ್ಲೂ ಹೇಗೆ ಜಯಿಸಬಹುದು ಎಂಬುದನ್ನು ನಿಮ್ಮ ಉದಾಹರಣೆಯೇ ತೋರಿಸುತ್ತದೆ. ನಿಮ್ಮ ಮೇಲೆ ಹೆಮ್ಮೆ ಇದೆ' ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡಿದ್ದಾರೆ.