'ಈ ಯುಗದಲ್ಲಿ ನಾನು ಸ್ಪರ್ಧೆ ಮಾಡ್ಬೇಕಿತ್ತು..' ಕ್ರೀಡೆಗೆ ಮೋದಿ ನೀಡಿದ ಬೆಂಬಲಕ್ಕೆ ಅಂಜು ಜಾರ್ಜ್‌ ಫುಲ್‌ ಮಾರ್ಕ್ಸ್‌!

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್‌ ಅಂಜು ಬಾಬಿ ಜಾರ್ಜ್, ತಾನು ತಪ್ಪು ಯುಗದಲ್ಲಿ ಸ್ಪರ್ಧೆ ಮಾಡಿದ್ದೇನೆ ಮತ್ತು ಇಂದಿನ ಪೀಳಿಗೆಯ ಭಾರತೀಯ ಕ್ರೀಡಾಪಟುಗಳನ್ನು ನಾನು ಅಸೂಯೆಪಡುತ್ತೇನೆ ಎಂದು ಹೇಳಿದ್ದಾರೆ.

ಅಂಜು ಬಾಬಿ ಜಾರ್ಜ್‌ ಯಾರಿಗೆ ಗೊತ್ತಿಲ್ಲ ಹೇಳಿ. 20 ವರ್ಷಗಳ ಹಿಂದೆ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಅಥ್ಲಟಿಕ್ಸ್‌ ಚಾಂಪಿಯನ್‌ಷಿಪ್‌ನ ಲಾಂಗ್‌ ಜಂಪ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸಾಧಕಿ.

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊಟ್ಟಮೊದಲ ಅಥ್ಲೀಟ್‌ ಎನ್ನುವ ಕೀರ್ತಿ ಇವರ ಹೆಸರಲ್ಲಿದೆ. ಇತ್ತೀಚೆಗೆ ಪ್ರಧಾನಿ ಮೋದಿ ನಿವಾಸದಲ್ಲಿ ನಡೆದ ಕ್ರಿಸ್‌ಮಸ್‌ ಸಂಭ್ರಮದಲ್ಲಿ ಅಂಜು ಜಾರ್ಜ್‌ ಮಾತನಾಡಿದ್ದು ಈಗ ವೈರಲ್‌ ಆಗಿದೆ.


ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಂಜು ಜಾರ್ಜ್‌, ನಾನು ತಪ್ಪಾದ ಯುಗದಲ್ಲಿ ಸ್ಪರ್ಧೆ ಮಾಡಿದ್ದೆ ಎಂದು ನನಗನಿಸುತ್ತದೆ. ಇಂದಿನ ಭಾರತದ ಕ್ರೀಡಾಪಟುಗಳನ್ನು ನೋಡಿ ನನಗೆ ಅಸೂಯೆಯಾಗುತ್ತದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವ ಮತ್ತು ಪೋಷಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳನ್ನು ಅವರು ಮುಕ್ತವಾಗಿ ಒಪ್ಪಿಕೊಂಡರು.

ಹಾಗೇನಾದರೂ ನಾನು ಈ ಯುಗದಲ್ಲಿ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ಆಡಿದ್ದರೆ, ಖಂಡಿತವಾಗಿ ನನ್ನ ಗೆಲುವುಗಳನ್ನು ಬಹಳ ವಿಭಿನ್ನವಾಗಿ ಸಂಭ್ರಮಿಸಲಾಗುತ್ತಿತ್ತು ಎಂದಿದ್ದಾರೆ.

ನಾನು ಕ್ರೀಡಾಪಟುವಾಗಿ ಸುಮಾರು 25 ವರ್ಷಗಳನ್ನು ಕಳೆದಿದ್ದೇನೆ ಮತ್ತು ಈ ಅವಧಿಯಲ್ಲಿ ಗಣನೀಯ ಬದಲಾವಣೆಗೆ ಸಾಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಎರಡು ದಶಕಗಳ ಹಿಂದೆ ನಾನು ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಅಥ್ಲೀಟ್‌ ಎನಿಸಿಕೊಂಡಿದ್ದೆ. ಆದರೆ, ಆ ಸಮಯದಲ್ಲಿ ನಾನು ಕೆಲಸಕ್ಕೆ ಇದ್ದ ಸರ್ಕಾರಿ ಇಲಾಖೆ ನನಗೆ ಪ್ರಮೋಷನ್‌ ಕೂಡ ಕೊಡಲು ಸಿದ್ಧರಿರಲಿಲ್ಲ ಎಂದಿದ್ದಾರೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ನೀರಜ್ ಚೋಪ್ರಾ ಅವರ ಒಲಿಂಪಿಕ್ ಗೆಲುವಿನ ನಂತರ ಭಾರತದ ಕ್ರೀಡೆಯಲ್ಲಿ ದೊಡ್ಡಮಟ್ಟದ ಬದಲಾವಣೆಗಳನ್ನು ಗಮನಿಸಲಾಗಿದೆ.

ಭಾರತದಲ್ಲಿ ಕ್ರೀಡೆಗೆ ಹೊಸ ಉತ್ಸಾಹವನ್ನು ನೀಡಿದ ಪ್ರಸ್ತುತ ಪೀಳಿಗೆಯ ಕ್ರೀಡಾಪಟುಗಳ ಬಗ್ಗೆ ತಮಗೆ ಅಸೂಯೆಯಾಗುತ್ತಿದೆ ಎಂದೂ ಅಂಜು ಬಾಬಿ ಜಾರ್ಜ್‌ ಹೇಳಿದ್ದಾರೆ.

ಭಾರತೀಯ ಹೆಣ್ಣುಮಕ್ಕಳು ತಮ್ಮ ಕನಸುಗಳನ್ನು ಮುಂದುವರಿಸಲು ಮಹಿಳಾ ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡಿರುವುದನ್ನು ಅವರು ಶ್ಲಾಘಿಸಿದರು

ಅದರಲ್ಲೂ ಮುಖ್ಯವಾಗಿ ದೇಶದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಗೆಲುವು ಸಾಧಿಸಿದ ಬಳಿಕ ಅವರನ್ನು ಶ್ಲಾಘಿಸುವ ಹಾಗೂ ಗೌರವ ನೀಡುವ ಪರಿಪಾಠದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿದೆ ಎಂದಿದ್ದಾರೆ.

ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಭವಿಷ್ಯದ ಬಗ್ಗೆ ವಿಶ್ವಾಸದಿಂದ ಮಾತನಾಡಿದ ಅಂಜು, "ಮುಂಬರುವ ವರ್ಷಗಳಲ್ಲಿ ನಾವು ಜಾಗತಿಕ ಕ್ರೀಡಾ ಸ್ಥಾನಮಾನಗಳಲ್ಲಿ ಅಗ್ರಸ್ಥಾನದಲ್ಲಿರುತ್ತೇವೆ ಎಂದು ನಾನು ನಂಬುತ್ತೇನೆ" ಎಂದು ಹೇಳಿದ್ದಾರೆ.

ಅಂಜು ಅವರು 2003 ರ ಆಫ್ರೋ-ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಮತ್ತು 2004 ಅಥೆನ್ಸ್ ಒಲಿಂಪಿಕ್ ಗೇಮ್ಸ್‌ನಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ 6.83 ಮೀ ಸೇರಿದಂತೆ ಹಲವು ಸಾಧನೆಗಳನ್ನು ಮಾಡಿದ್ದಾರೆ.

2004ರ ಅಥೇನ್ಸ್‌ ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಅದ್ಭುತ ನಿರ್ವಹಣೆ ತೋರಿದ್ದ ಅಂಜು ಬಾಬಿ ಜಾರ್ಜ್‌, ಈ ಕ್ರೀಡಾಕೂಟದಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದರು.

2002 ರಲ್ಲಿ ಅರ್ಜುನ ಪ್ರಶಸ್ತಿ, 2003 ರಲ್ಲಿ ಖೇಲ್ ರತ್ನ, ಮತ್ತು 2004 ರಲ್ಲಿ ದೇಶದ ನಾಲ್ಕನೇ ಅತ್ಯಂತ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಸೇರಿದಂತೆ ಹಲವು ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ.

Latest Videos

click me!