ಸಾಮಾನ್ಯವಾಗಿ ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಒಂದೇ ಹೃದಯ, ಒಂದೇ ಮೆದುಳು ಇರುತ್ತದೆ. ಹೃದಯ ಬಡಿತವಿದ್ದರೆ ಮಾತ್ರ ಜೀವವಿದೆ ಎಂದು ನಂಬುತ್ತೇವೆ. ಆದರೆ ಒಂದು ಜೀವಿಗೆ ಬರೋಬ್ಬರಿ 9 ಮೆದುಳುಗಳು ಮತ್ತು 3 ಹೃದಯಗಳಿವೆ. ಹಾಗಾದರೆ ಆ ಜೀವಿ ಯಾವುದು?
ಸಾಮಾನ್ಯವಾಗಿ ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಒಂದೇ ಹೃದಯ, ಒಂದೇ ಮೆದುಳು ಇರುತ್ತದೆ ಎಂದು ನಾವು ಭಾವಿಸುತ್ತೇವೆ. ಹೃದಯ ಬಡಿತವಿದ್ದರೆ ಮಾತ್ರ ಜೀವವಿದೆ ಎಂದು ನಂಬುತ್ತೇವೆ. ಹಾಗೆಯೇ ಮೆದುಳು ಹೇಳಿದಂತೆ ದೇಹ ನಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಒಂದು ಜೀವಿಗೆ ಬರೋಬ್ಬರಿ 9 ಮೆದುಳುಗಳು ಮತ್ತು 3 ಹೃದಯಗಳಿವೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ? ಇದು ಕೇಳಲು ವಿಚಿತ್ರವೆನಿಸಿದರೂ ನಿಜ. ಹಾಗಾದರೆ ಆ ಜೀವಿ ಯಾವುದು? ಅವು ಹೇಗೆ ಕೆಲಸ ಮಾಡುತ್ತವೆ? ಎಂಬ ಕುತೂಹಲಕಾರಿ ವಿಷಯಗಳನ್ನು ಇಲ್ಲಿ ತಿಳಿಯೋಣ.
ಸಮುದ್ರ ಜೀವಿಗಳಲ್ಲಿ ಅತ್ಯಂತ ಬುದ್ಧಿವಂತ ಜೀವಿ ಎಂದು ಹೆಸರುವಾಸಿಯಾದ ಆಕ್ಟೋಪಸ್ (Octopus) ಬಗ್ಗೆ ಅನೇಕ ಆಸಕ್ತಿದಾಯಕ ಸಂಗತಿಗಳಿವೆ. ಅದರಲ್ಲಿ ಮುಖ್ಯವಾದುದು ಆಕ್ಟೋಪಸ್‌ಗೆ ಮೂರು ಹೃದಯಗಳು ಮತ್ತು ಒಂಬತ್ತು ಮೆದುಳುಗಳಿವೆ ಎಂಬುದು. ಇದು ಸಂಪೂರ್ಣವಾಗಿ ಸತ್ಯ. ಆದರೆ ಮನುಷ್ಯರಂತೆ ಅದಕ್ಕೆ ಒಂಬತ್ತು ಪೂರ್ಣ ಪ್ರಮಾಣದ ಮೆದುಳುಗಳಿರುವುದಿಲ್ಲ. ಅದರ ದೇಹದ ರಚನೆ ಮತ್ತು ನರಮಂಡಲದ ಕಾರಣದಿಂದಾಗಿ ಈ ವಿಶೇಷತೆ ಬಂದಿದೆ.
25
ಮೂರು ಹೃದಯಗಳು ಏಕೆ ಇರುತ್ತವೆ?
ಆಕ್ಟೋಪಸ್‌ಗೆ ಒಟ್ಟು ಮೂರು ಹೃದಯಗಳಿವೆ. ಇವುಗಳಲ್ಲಿ ಎರಡು ಹೃದಯಗಳು ಕಿವಿರುಗಳಿಗೆ (Gills) ರಕ್ತವನ್ನು ಕಳುಹಿಸಿ ಆಮ್ಲಜನಕವನ್ನು ಒದಗಿಸುತ್ತವೆ. ಮೂರನೇ ಹೃದಯವು ಆ ಆಮ್ಲಜನಕಯುಕ್ತ ರಕ್ತವನ್ನು ಇಡೀ ದೇಹಕ್ಕೆ ಪಂಪ್ ಮಾಡುತ್ತದೆ. ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ, ಆಕ್ಟೋಪಸ್ ಈಜುವಾಗ ಅದರ ಮುಖ್ಯ ಹೃದಯದ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಆದ್ದರಿಂದಲೇ ಅವು ಹೆಚ್ಚಾಗಿ ಸಮುದ್ರದ ತಳದಲ್ಲಿ ತೆವಳುತ್ತಾ ಸಂಚರಿಸುತ್ತವೆ.
35
9 ಮೆದುಳುಗಳು ಹೇಗೆ ಕೆಲಸ ಮಾಡುತ್ತವೆ?
ಆಕ್ಟೋಪಸ್‌ಗೆ ಒಂದು ಮುಖ್ಯ ಮೆದುಳು ಇರುತ್ತದೆ. ಉಳಿದ ಎಂಟು ತೋಳುಗಳಲ್ಲಿ ಒಂದೊಂದು ನರ ಕೇಂದ್ರವಿರುತ್ತದೆ. ಇವುಗಳನ್ನು ಸಾಮಾನ್ಯವಾಗಿ 'ಮಿನಿ ಮೆದುಳು' ಎಂದು ಕರೆಯಬಹುದು. ಇವು ಸಂಪೂರ್ಣ ಪ್ರಮಾಣದ ಮೆದುಳುಗಳಲ್ಲದಿದ್ದರೂ, ಮುಖ್ಯ ಮೆದುಳಿನ ಸಹಾಯವಿಲ್ಲದೆಯೇ ಆಯಾ ತೋಳುಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿವೆ.
ಆಕ್ಟೋಪಸ್‌ನ ಪ್ರತಿಯೊಂದು ತೋಳು ಬೇರೆ ಬೇರೆಯಾಗಿ ಪ್ರತಿಕ್ರಿಯಿಸಬಲ್ಲದು. ಒಂದು ತೋಳು ಆಹಾರವನ್ನು ಹುಡುಕುತ್ತಿದ್ದರೆ, ಇನ್ನೊಂದು ತೋಳು ಕಲ್ಲನ್ನು ಹಿಡಿದುಕೊಳ್ಳಬಹುದು. ಮುಖ್ಯ ಮೆದುಳು ಪ್ರತಿಯೊಂದು ಸಣ್ಣ ಚಲನೆಯನ್ನು ನಿಯಂತ್ರಿಸುವ ಅಗತ್ಯವಿರುವುದಿಲ್ಲ. ಆದ್ದರಿಂದ ಆಕ್ಟೋಪಸ್ ಪರಿಸ್ಥಿತಿಗೆ ಅನುಗುಣವಾಗಿ ಅತ್ಯಂತ ವೇಗವಾಗಿ ಪ್ರತಿಕ್ರಿಯಿಸುತ್ತದೆ.
ಆಕ್ಟೋಪಸ್ ದೇಹದ ಒಟ್ಟು ನರಕೋಶಗಳಲ್ಲಿ ಸುಮಾರು ಮೂರನೇ ಎರಡರಷ್ಟು ಭಾಗ ತೋಳುಗಳಲ್ಲೇ ಇರುತ್ತವೆ. ಇದರಿಂದಾಗಿ ಪ್ರತಿಯೊಂದು ತೋಳು ಸ್ಪರ್ಶವನ್ನು ಗುರುತಿಸಲು, ವಸ್ತುಗಳನ್ನು ಪರೀಕ್ಷಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಇದನ್ನು ವಿಜ್ಞಾನಿಗಳು 'ಡಿಸ್ಟ್ರಿಬ್ಯೂಟೆಡ್ ಇಂಟೆಲಿಜೆನ್ಸ್' (Distributed Intelligence) ಎಂದು ಕರೆಯುತ್ತಾರೆ.
55
ಶತ್ರುಗಳಿಂದ ರಕ್ಷಣೆ
ಈ ವಿಶೇಷ ವ್ಯವಸ್ಥೆಯಿಂದಾಗಿ ಆಕ್ಟೋಪಸ್ ಬೇಟೆಯಾಡಲು, ಶತ್ರುಗಳಿಂದ ತಪ್ಪಿಸಿಕೊಳ್ಳಲು, ಸಣ್ಣ ರಂಧ್ರಗಳ ಮೂಲಕ ನುಸುಳಲು ಮತ್ತು ಬಾಟಲಿಗಳ ಮುಚ್ಚಳವನ್ನು ತೆರೆಯುವಂತಹ ಕಠಿಣ ಕೆಲಸಗಳನ್ನು ಅದ್ಭುತವಾಗಿ ಮಾಡಬಲ್ಲದು. ಇದೇ ಕಾರಣಕ್ಕೆ ಇದು ವಿಶ್ವದ ಅತ್ಯಂತ ಬುದ್ಧಿವಂತ ಅಕಶೇರುಕ (Invertebrate) ಜೀವಿ ಎಂದು ಹೆಸರುವಾಸಿಯಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.