ನನ್ನ ಟೆನ್ಶನ್ ನಿನಗೆ ಅರ್ಥ ಆಗಲ್ಲ ಬಿಡು ಈ ವಾಕ್ಯವನ್ನು ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಬಳಸಿರುತ್ತಾನೆ. ವಿಶೇಷವಾಗಿ ಹುಡುಗರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಯಾಕಂದ್ರೆ ಹುಡುಗರು ಮತ್ತು ಹುಡುಗಿಯರು ನಿಜವಾಗಿಯೂ ವಿಭಿನ್ನವಾಗಿ ಯೋಚಿಸುತ್ತಾರೆ ಮತ್ತು ಜೀವನ ನಡೆಸೋ ರೀತಿ ಕೂಡ ವಿಭಿನ್ನವಾಗಿರುತ್ತೆ.
ಪುರುಷರ ಮನಸ್ಸನ್ನು, ಅವರು ಹೇಳುವ ಕೆಲವು ಮಾತುಗಳನ್ನು ಮಹಿಳೆಯರಿಗೆ ಕೆಲವೊಮ್ಮೆ ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯ ಇಲ್ಲ. ಆದರೆ ಇನ್ನೊಬ್ಬ ಪುರುಷನ ಮಾತನ್ನ ಮತ್ತೊಬ್ಬ ಪುರುಷ ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳಬಲ್ಲನು. ಆತ ಹೇಳದೆಯೇ ಆತನ ಮನಸ್ಸಿನ ಭಾವನೆಗಳನ್ನು ಅರ್ಥೈಸಬಲ್ಲನು. ಪದಗಳನ್ನು ಬಳಸುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ, ಪುರುಷರು ಇತರ ವ್ಯಕ್ತಿಯ ಪರಿಸ್ಥಿತಿಯನ್ನು ಕೇವಲ ಕಣ್ಣಿನ ಸನ್ನೆಗಳ ಮೂಲಕ ಅರ್ಥಮಾಡಿಕೊಳ್ಳುತ್ತಾರೆ. ಇಲ್ಲಿ ಕೆಲವೊಂದು ವಿಷಯಗಳನ್ನ ಹೇಳ್ತೀವಿ, ಅವುಗಳು ಪುರುಷರ ಮನಸ್ಸಿನ ಮಾತುಗಳು, ಅವುಗಳನ್ನ ಗಂಡಸರಷ್ಟೇ ಅರ್ಥ ಮಾಡಿಕೊಳ್ತಾರೆ.
ಮನೆಯ ಜವಾಬ್ದಾರಿ ತೆಗೆದುಕೊಳ್ಳಲೇಬೇಕು
ಈ ಸತ್ಯವು ಎಲ್ಲರಿಗೂ ತಿಳಿದಿದೆ, ಇಂದಿಗೂ ಭಾರತೀಯ ಮನೆಗಳಲ್ಲಿ, ಹುಡುಗಿಯರಿಗೆ ಚಿಕ್ಕ ವಯಸ್ಸಿನಿಂದಲೇ ಮನೆಯನ್ನು ನಿರ್ವಹಿಸಲು ಕಲಿಸಲಾಗುತ್ತದೆ. ಅದೇ ಸಮಯದಲ್ಲಿ, ಹುಡುಗರನ್ನು ಮನೆಕೆಲಸಗಳಿಂದ ದೂರವಿಡೋದು ಕೂಡ ಸಾಮಾನ್ಯವಾಗಿದೆ. ಆದರೆ ಹುಡುಗರು ಬಾಲ್ಯದಿಂದಲೇ ಮನೆಯನ್ನು ಹೇಗೆ ನಿರ್ವಹಿಸಬೇಕು ಅನ್ನೋದನ್ನ ಕಲಿಯುತ್ತಾರೆ. ಹಣ ಸಂಪಾದಿಸುವುದು, ಸಾಲ ತೆಗೆದುಕೊಳ್ಳುವುದು, ಕುಟುಂಬದ ಬೇಡಿಕೆಗಳನ್ನು ಪೂರೈಸುವುದು, ಆಸ್ಪತ್ರೆ ಅಥವಾ ಚಿಕಿತ್ಸೆಗೆ ಖರ್ಚು ಮಾಡುವುದು, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ವೆಚ್ಚಗಳು ಇತ್ಯಾದಿ ಜವಾಬ್ಧಾರಿಗಳು ಮುಖ್ಯವಾಗಿ ಪುರುಷರಿಗೆ ಬರುತ್ತವೆ. ಅವರು ಈ ಜವಾಬ್ದಾರಿಗಳಿಂದ (responsibility) ಓಡಿಹೋಗಲು ಸಾಧ್ಯವಿಲ್ಲ. ಏಕೆಂದರೆ ಮನೆಯ ಪುರುಷರಾಗಿ, ಜವಾಬ್ದಾರಿ ಅವರ ಮೇಲೆ ಮಾತ್ರ ಹೆಚ್ಚಾಗಿ ಇರುತ್ತದೆ. ಒಮ್ಮೆ ಮನೆಯ ಮಗಳು ಅಥವಾ ಮಹಿಳೆ ತನ್ನ ಕೆಲಸವನ್ನು ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಬಹುದು, ಆದರೆ ಪುರುಷನಿಗೆ ಹಾಗೆ ಯೋಚಿಸುವುದು ಕೂಡ ಅಸಾಧ್ಯ.
ಹುಡುಗಿಗೆ ಸಹಾಯ ಮಾಡಲು ಎಲ್ಲರೂ ಮುಂದಿರುತ್ತಾರೆ, ಆದ್ರೆ ಹುಡುಗ ಯಾವಾಗಲೂ ಎರಡನೇ ಆಯ್ಕೆಯಾಗಿರ್ತಾನೆ
ಹುಡುಗರು ಏನಾದ್ರೂ ಮಾಡೋದಕ್ಕೆ ಯೋಚನೆ ಮಾಡಿದ್ರೆ, ಅದನ್ನ ತಾನೇ ಮಾಡಬೇಕು. ಬೇರೆಯವರಿಂದ ಸಹಾಯ ನಿರೀಕ್ಷೆ ಮಾಡೋದು ಕಷ್ಟ. ಯಾಕಂದ್ರೆ ಯಾರೂ ಕೂಡ ಅವರ ಸಹಾಯಕ್ಕೆ ಬರೋದಿಲ್ಲ. ಉದಾಹರಣೆ ಕೊಟ್ಟು ಹೇಳೋದಾದ್ರೆ ಹುಡುಗ-ಹುಡುಗಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಆಕ್ಸಿಡೆಂಟ್ ಆದ್ರೆ, ಹುಡುಗಿಯ ಆರೈಕೆಗೆ ಎಲ್ಲರೂ ಮುಂದೆ ಬರುತ್ತಾರೆ. ಆಕೆಗೆ ಚಿಕಿತ್ಸೆ ನೀಡೋದು, ನೀರು ಕುಡಿಸೋದು ಎಲ್ಲವನ್ನು ಮೊದಲು ಮಾಡ್ತಾರೆ, ಆದರೆ ಹುಡುಗನಿಗೆ, ಸಣ್ಣ ಏಟು ತಾನೆ, ನೀನು ಹುಷಾರಾಗಿದ್ಯಲ್ವಾ? ಗಾಡಿ ಓಡಿಸೋಕೆ ಆಗುತ್ತಲ್ವಾ? ಅಷ್ಟೇ ಕೇಳ್ತಾರೆ. ಯಾಕಂದ್ರೆ ಪುರುಷರು ಇತರರಿಗೆ ಸಹಾಯ ಮಾಡೋರು, ಅವರಿಗೂ ಸಹಾಯ ಬೇಕು ಅಂತ ಯಾರಿಗೂ ಅನಿಸೋದೆ ಇಲ್ಲ.
ತುಂಬಾನೆ ದಣಿದಿದ್ದರೂ ಸಹ, ಯಾರಿಂದಲೂ ಕರುಣೆಯನ್ನ ನಿರೀಕ್ಷಿಸಬೇಡಿ
ಬಸ್, ಮೆಟ್ರೋ, ಇತ್ಯಾದಿಗಳಲ್ಲಿ ಒಬ್ಬ ಹುಡುಗಿ ಅಥವಾ ಹುಡುಗ ಇನ್ನೊಬ್ಬ ಹುಡುಗನಿಗೆ ಸೀಟ್ ಬಿಟ್ಟು ಕೊಡುವುದನ್ನು ನೀವು ಎಷ್ಟು ಬಾರಿ ನೋಡಿದ್ದೀರಿ? ಖಂಡಿತಾ ಇಲ್ಲ ಅಲ್ವಾ? ಸತ್ಯವೇನೆಂದರೆ, ಹುಡುಗರು ತಾವು ಎಷ್ಟೇ ದಣಿದಿದ್ದರೂ, ತಾವು ನಿಲ್ಲುವ ಸ್ಥಿತಿಯಲ್ಲಿಯೂ ಇಲ್ಲದಿದ್ದರೂ, ತಮಗೆ ಯಾರಾದರು ಸೀಟ್ ಬಿಟ್ಟುಕೊಡುತ್ತಾರೆ ಎಂದು ನಿರೀಕ್ಷೆ ಮಾಡಬಾರದು. ಇದು ಕೇವಲ ಒಂದು ಸಣ್ಣ ಉದಾಹರಣೆ ಅಷ್ಟೇ. ಪುರುಷರ ಆಯಾಸ ಅಥವಾ ಅನಾರೋಗ್ಯವನ್ನು ನಿರ್ಲಕ್ಷಿಸುವ ಇಂತಹ ಅನೇಕ ಸಂದರ್ಭಗಳಿವೆ. ಯಾಕಂದರೆ ನಾವೆಲ್ಲಾ ಅಂದುಕೊಂಡಿದ್ದೇವೆ ಅವರು ಪುರುಷರು ಅವರಿಗೇನು ಆಗೋದಿಲ್ಲ ಅಂತ.
ಹುಡುಗರು ಇಮೋಷನ್’ಲೆಸ್ ಆಗಿರ್ತಾರೆ
ಹುಡುಗರಿಗೆ ಭಾವನೆಗಳಿವೆ, ಆದರೆ ಅದನ್ನು ನಿಗ್ರಹಿಸಲು ಅವರು ಮೊದಲಿನಿಂದಲೂ ಕಲಿತಿರುತ್ತಾರೆ ಯಾಕಂದ್ರೆ ಹುಡುಗರು ಅತ್ತರೆ, ಅವರನ್ನ ದುರ್ಬಲ ಅಂತಾರೆ, ಎಷ್ಟೇ ಕೆಟ್ಟ ಸಮಯ ಬಂದರೂ, ದುಃಖದಲ್ಲಿರೂ ಸಹ, ಹುಡುಗರು ವೀಕ್ ಆಗಿ ಕಾಣಿಸಲೇಬಾರದು. ಉದಾಹರಣೆಗೆ, ಒಬ್ಬ ಹುಡುಗ ತನ್ನ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾನೆ. ಇದರಿಂದ ಅವನು ಕೂಡ ಕುಸಿದು ಹೋಗಿದ್ದಾನೆ, ಆದ್ರೆ ಆತನಿಗೆ ಅಲ್ಲಿ ಸೇರಿದ ಜನ ಹೇಳೋದು ಏನು? ನೀನು ಗಂಡು ಮಗ ಅಳಬೇಡ, ನೀನು ಅತ್ತರೆ ಮನೆಯವರನ್ನ ಸಮಾಧಾನ ಮಾಡುವವರು ಯಾರು? ಅಂತಾರೆ. ಇದನ್ನೆ ಬೆಳೆಸಿಕೊಂಡು ಆತ ಭಾವನೆಗಳನ್ನು ತೋರಿಸದೇ ಇದ್ದಾಗ, ಆತನನ್ನು ಇಮೋಷನ್’ಲೆಸ್ (emotionless) ಎನ್ನುತ್ತಾರೆ.
ಒಬ್ಬ ಹುಡುಗನಿಗೆ ಸಮಸ್ಯೆ ಬಂದಾಗ ಮತ್ತೊಬ್ಬ ಹುಡುಗ ತನ್ನ ಜೀವ ನೀಡೋದಕ್ಕು ರೆಡಿಯಾಗಿರ್ತಾನೆ
ಇದು ಕೂಡ 100% ನಿಜಾ. ಹುಡುಗರು ಹೆಚ್ಚಾಗಿ ಏನಾದರು ನಿರ್ಧಾರ ತೆಗೆದುಕೊಳ್ಳುವಾಗ ನನ್ನ ಫ್ರೆಂಡ್ ಹೀಗೆ ಹೇಳಿದ, ನಾನು ಹಾಗೆ ಮಾಡ್ತೇನೆ ಎನ್ನುತ್ತಾರೆ. ಆದರೆ ಹುಡುಗಿಯರು ಎಲ್ಲಾ ವಿಷ್ಯಗಳನ್ನು ಇನ್ನೊಬ್ಬರು ಹೇಳಿದ್ದಾರೆ ಎಂದು ಮಾಡೋ ಬದಲು ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇನ್ನು ಹುಡುಗರ ಅಭ್ಯಾಸ ಏನಂದ್ರೆ, ಅವರು ಸ್ನೇಹಿತರಾಗಿದ್ರೆ ಮತ್ತೊಬ್ಬ ಸ್ನೇಹಿತನಿಗಾಗಿ ಪೆಟ್ಟು ತಿನ್ನೋದಕ್ಕು ರೆಡಿಯಾಗಿರ್ತಾರೆ, ಜಗಳ ಮಾಡೋದಕ್ಕೂ ರೆಡಿ, ಜೀವ ಕೊಡೋದಕ್ಕೂ ರೆಡಿಯಾಗಿರ್ತಾರೆ. ಆದರೆ ಹುಡುಗಿಯರಲ್ಲಿ ಈ ರೀತಿಯ ವರ್ತನೆ ನೋಡೋದಕ್ಕೆ ಸಾಧ್ಯಾನೆ ಇಲ್ಲ.