ಮಂಡ್ಯ (ಏ.18): ನಾನು ಏಕೆ ಆದಿಚುಂಚನಗಿರಿ ಸ್ವಾಮೀಜಿಯವರ ಫೋನ್ ಟ್ಯಾಪ್ ಮಾಡಲಿ?, ಅವರ ಮೇಲೆ ಅನುಮಾನ ಇದ್ದಿದ್ದರೆ ಅವರ ಜೊತೆ ನಾನು ಏಕೆ ಅಮೆರಿಕಕ್ಕೆ ಹೋಗುತ್ತಿದ್ದೆ. ನಾನು ಯಾರ ಫೋನ್ ಅನ್ನು ಕೂಡ ಟ್ಯಾಪ್ ಮಾಡಿಸಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ತಮ್ಮ ಅಧಿಕಾರದ ಅವಧಿಯಲ್ಲಿ ಸ್ವಾಮೀಜಿಯವರ ಪೋನ್ ಟ್ಯಾಪ್ ಮಾಡಲಾಗಿತ್ತು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಚುನಾವಣೆಯಲ್ಲಿ 85ರಿಂದ 90 ರಷ್ಟು ಒಕ್ಕಲಿಗರರು ಬಿಜೆಪಿ-ಜೆಡಿಎಸ್ ಮೈತ್ರಿ ಪರ ಇದ್ದಾರೆ. ಇದು ಕಾಂಗ್ರೆಸ್‌ನವರ ಭಯಕ್ಕೆ ಕಾರಣವಾಗಿದೆ. ನಾನು ಏಕೆ ಸ್ವಾಮೀಜಿಯವರ ಫೋನ್ ಟ್ಯಾಪ್ ಮಾಡಲಿ?.
ಅವರ ಮೇಲೆ ಅನುಮಾನ ಇದ್ದಿದ್ದರೆ ಅವರ ಜೊತೆ ಯಾಕೆ ನಾನು ಅಮೆರಿಕಕ್ಕೆ ಹೋಗುತ್ತಿದ್ದೆ. ಯಾರೂ ನನಗೆ ಸರ್ಕಾರ ಬೀಳುತ್ತೆ ಅಂತಾ ಹೇಳಿರಲಿಲ್ಲ. ನೀವು ಅರಾಮಾಗಿ ಹೋಗಿ ಬನ್ನಿ ಅಂತಾ ಹೇಳಿ ಕಳುಹಿಸಿದ್ದರು. ನಾನು ಯಾರ ಫೋನ್ ಕೂಡ ಟ್ಯಾಪ್ ಮಾಡಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮೈತ್ರಿ ಸರ್ಕಾರ ಶುರುವಾದ 15 ದಿನಕ್ಕೆ ರಮೇಶ್ ಜಾರಕಿಹೊಳಿ, ಶಿವಕುಮಾರ್ ನಡುವೆ ಯಾರಿಗೋಸ್ಕರ ಕಲಹ ಆರಂಭವಾಯ್ತು ಎಂಬುದನ್ನು ಅವರು ಹೇಳಲಿ?. ಸರ್ಕಾರ ರಚನೆಯಾದ ಆರಂಭದಲ್ಲೇ ಅವರಿಬ್ಬರ ನಡುವೆ ಕಲಹ ಯಾಕೆ ಆಯ್ತು? ಎಂದು ಅವರು ಪ್ರಶ್ನಿಸಿದರು. ನನ್ನ ಮೇಲೆ 150 ಕೋಟಿ ರು. ಲಂಚದ ಆರೋಪ ಮಾಡಿದ ಜನಾರ್ಧನ ರೆಡ್ಡಿ ಬಗ್ಗೆಯೆ ತಲೆ ಕೆಡಿಸಿಕೊಳ್ಳಲಿಲ್ಲ.
ಬೇರೆಯವರ ಫೋನ್‌ಗಳನ್ನು ನಾನು ಯಾಕೆ ಟ್ಯಾಪ್ ಮಾಡಲಿ. 1996ರಲ್ಲಿ ಚುನಾವಣೆಗೆ ನಿಂತಾಗ ಸಿಂಧ್ಯಾ ಅವರಿಗೆ ನಾನು ಕಪಾಳಮೋಕ್ಷ ಮಾಡಿದೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ತರಹದ ರಾಜಕಾರಣ ಶಿವಕುಮಾರ್‌ಗೆ ರಕ್ತಗತವಾಗಿ ಬಂದಿದೆ. ಸುಳ್ಳು ಹೇಳಿಕೊಂಡೆ ಅವರು ರಾಜಕಾರಣ ಮಾಡಿದ್ದಾರೆ ಎಂದು ಅವರು ತಿರುಗೇಟು ನೀಡಿದರು.