ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಡೆಸಿದ ಡಿ.ವಿ.ಸದಾನಂದಗೌಡ
ಬಿಜೆಪಿಯಲ್ಲಿ ಹಲವು ಒಕ್ಕಲಿಗ ಸಮುದಾಯದವರಿದ್ದಾರೆ. ನಾನು ಸೇರಿದಂತೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವರಾದ ಅಶೋಕ್, ಡಾ.ಕೆ.ಸುಧಾಕರ್, ನಾರಾಯಣಗೌಡ, ಗೋಪಾಲಯ್ಯ ಅವರೆಲ್ಲಾ ಗೌಡರಲ್ಲವೇ? ಜಾತಿ ರಾಜಕಾರಣ ಇತಿಮಿತಿಯಲ್ಲಿರಬೇಕು. ಆದರೆ, ಚುನಾವಣೆ ಸಮಯದಲ್ಲಿ ಜಾತಿ ಬಳಕೆ ಮಾಡುವವರಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ವಾಗ್ದಾಳಿ ನಡೆಸಿದ ಡಿ.ವಿ.ಸದಾನಂದಗೌಡ
ಉಪಚುನಾವಣೆಯೂ ರಾಜ್ಯದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಆದರೆ, ಆರ್.ಆರ್.ನಗರ ಕ್ಷೇತ್ರದಲ್ಲಿ ಅತ್ಯಂತ ಬದಲಾವಣೆ ಮಾಡಲಿದೆ. ರಾಜ್ಯದಲ್ಲಿರುವ ಆಡಳಿತ ಪಕ್ಷದಲ್ಲಿ ಬಿಜೆಪಿ ಶಾಸಕರಿದ್ದರೆ ಮುಖ್ಯಮಂತ್ರಿ ಜತೆ ಕುಳಿತು ಅನುದಾನ ಕೇಳಬಹುದು. ಕ್ಷೇತ್ರದಲ್ಲಿ ಇನ್ನು 172 ಹಕ್ಕುಪತ್ರಗಳನ್ನು ಮಾತ್ರ ನೀಡುವುದು ಬಾಕಿ ಇದೆ. ಅದನ್ನು ತಕ್ಷಣ ನೀಡಲು ಸಹಕಾರಿಯಾಗಲಿದೆ. ಅಲ್ಲದೇ, ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಲಿದೆ. ಮುನಿರತ್ನ ಅವರು ಮೈತ್ರಿ ಸರ್ಕಾರದಲ್ಲಿದ್ದರು. ಆದರೆ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಜಂಟಿ ಜಗಳದಿಂದ ಅಭಿವೃದ್ಧಿ ಕುಂಟಿತಗೊಂಡಿದೆ. ಅನುದಾನ ಬರದಂತಾಯಿತು. ಹೀಗಾದರೆ ಕ್ಷೇತ್ರ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ಬರಲು ಕಾರಣರಾದರು ಎಂದು ಹೇಳಿದರು.
ಚುನಾವಣೆ ಬಳಿಕ ಎರಡು ವರ್ಷದಲ್ಲಿ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಇಲ್ಲದಂತೆ ಮಾಡಬಹುದು. ಮುನಿರತ್ನ ಅವರು ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡಲಿದ್ದಾರೆ. ರಾಜ್ಯದ ಹಿತಾಸಕ್ತಿಗಾಗಿ ಪ್ರಧಾನಿ ನರೇಂದ್ರ ಮೋದಿ ಜತೆ ಜಗಳ ಮಾಡಿ ಅನುದಾನ ತರುತ್ತೇನೆ. ಯಡಿಯೂರಪ್ಪ ಅವರಿಗೂ ಕೇಂದ್ರದಿಂದ ಅನುದಾನ ತರಲು ಪೂರಕವಾಗಿ ಕೆಲಸ ಮಾಡುತ್ತೇನೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅಂತೆಯೇ ಆರ್.ಆರ್.ನಗರದಲ್ಲಿಯೂ ಬಿಜೆಪಿ ಇದ್ದರೆ ನೇರ ಅನುದಾನ ಬರಲು ಸಾಧ್ಯವಿದೆ ಎಂದು ತಿಳಿಸಿದರು.
ಪ್ರಚಾರದ ವೇಳೆ ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಮಾಜಿ ಸದಸ್ಯೆ ತಾರಾ ಅನುರಾಧ ಇತರರು ಉಪಸ್ಥಿತರಿದ್ದರು.