ಟಿಪ್ಪು ಸುಲ್ತಾನರನ್ನು 'ಮೇಕ್ ಇನ್ ಮೈಸೂರು' ಹರಿಕಾರ. ರಾಜಕೀಯ ಲಾಭಕ್ಕಾಗಿ ಇತಿಹಾಸ ತಿರುಚಲಾಗುತ್ತಿದೆ. ಟಿಪ್ಪು 150 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ್ದನ್ನು ಮರೆಮಾಚಿ, ಕೇವಲ ದೇವಸ್ಥಾನ ಧ್ವಂಸವನ್ನು ಮಾತ್ರ ಹೇಳುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದರು.
ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್
ಬೆಂಗಳೂರು (ಮಾ.29): ಪ್ರತಿಯೊಬ್ಬ ರಾಜನ ಇತಿಹಾಸ ನೋಡಿದಾಗ ಅಲ್ಲಿ ಹೀರೊ ಮತ್ತು ವಿಲನ್ ಇಬ್ಬರೂ ಕಾಣಿಸುತ್ತಾರೆ. ಜಗತ್ತಿಗೆ ರಾಕೆಟ್ ಸೈನ್ಸ್ ಪರಿಚಯಿಸಿದ್ದೇ ಟಿಪ್ಪು ಸುಲ್ತಾನ್. ಇಂದು 'ಮೇಕ್ ಇನ್ ಇಂಡಿಯಾ' ಎನ್ನುತ್ತಾರೆ, ಆದರೆ ಅಂದೇ ಟಿಪ್ಪು 'ಮೇಕ್ ಇನ್ ಮೈಸೂರು' ಮಾಡಲು ಮುಂದಾಗಿದ್ದರು. ಟಿಪ್ಪು 150 ದೇವಾಲಯಗಳನ್ನು ಜೀರ್ಣೋದ್ದಾರ ಮಾಡಿದ್ದನ್ನು ಯಾರೂ ಹೇಳುವುದಿಲ್ಲ. ರಾಜಕೀಯ ಕಾರಣಕ್ಕೆ ಹತ್ತು ದೇವಸ್ಥಾನ ದ್ವಂಸ ಮಾಡಿರಬಹುದು. ಅದನ್ನೇ ದೊಡ್ಡದಾಗಿ ಹೇಳುತ್ತಾರೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದರು.
ಬೆಂಗಳೂರಿನಲ್ಲಿ ನಡೆದ ನವೀನ್ ಸೂರಿಂಜೆಯವರ 'ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್' ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್, ವಿಜಯನಗರ ಸಾಮ್ರಾಜ್ಯ ಮತ್ತು ಸಂಘ ಪರಿವಾರದ ಸಿದ್ಧಾಂತಗಳ ಮೇಲೆ ಸರಣಿ ಪ್ರಶ್ನೆಗಳನ್ನು ಎಸೆದಿದ್ದಾರೆ. ಇತಿಹಾಸವೆಂದರೆ ಕೇವಲ ರಾಜಕೀಯ ಲಾಭಕ್ಕಾಗಿ ಬಳಸುವ ಸಾಧನವಲ್ಲ, ಅದು ಸತ್ಯಗಳ ದರ್ಶನ ಮಾಡಿಸುವ ಕನ್ನಡಿ. ಆದರೆ ಇಂದು ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
25
ರಾಜರು, ಮೈತ್ರಿ ಮತ್ತು ರಕ್ತಸಂಬಂಧದ ಇತಿಹಾಸ
'ಪ್ರತಿಯೊಬ್ಬ ರಾಜನ ಇತಿಹಾಸ ನೋಡಿದಾಗ ಅಲ್ಲಿ ಹೀರೊ ಮತ್ತು ವಿಲನ್ ಇಬ್ಬರೂ ಕಾಣಿಸುತ್ತಾರೆ. ರಾಜರ ಮೂಲ ಉದ್ದೇಶ ಸಾಮ್ರಾಜ್ಯ ವಿಸ್ತರಣೆ ಮಾತ್ರ ಆಗಿರುತ್ತಿತ್ತು. ಅದಕ್ಕಾಗಿ ಯುದ್ಧ ಮಾಡಬೇಕಿತ್ತು ಅಥವಾ ಮೈತ್ರಿ ಮಾಡಿಕೊಳ್ಳಬೇಕಿತ್ತು. ಬಿಜೆಪಿಯವರು ಇತಿಹಾಸ ಓದಲ್ಲ. ಇವರು ಯಾವ ರಾಜರ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೋ, ಅವರ ತಂದೆ ಅಥವಾ ತಾಯಂದಿರು ಮುಸಲ್ಮಾನರಾಗಿದ್ದರು. ಮೊಗಲರ ಆಸ್ಥಾನದಲ್ಲಿ ರಜಪೂತ ರಾಣಿಯರು ಇರಲಿಲ್ಲವೇ? ವಿಜಯನಗರ ಸಾಮ್ರಾಜ್ಯದ ಕಾಲದಲ್ಲೂ ಮೈತ್ರಿಗಾಗಿ ಹೆಣ್ಣು ಕೊಟ್ಟು ತರುವ ಪದ್ಧತಿ ಇರಲಿಲ್ಲವೇ?' ಎಂದು ಪ್ರಶ್ನಿಸಿದರು.
35
ಟಿಪ್ಪು ಸುಲ್ತಾನ್ ಎಂಬ 'ಮೇಕ್ ಇನ್ ಮೈಸೂರು' ಹರಿಕಾರ
'ಟಿಪ್ಪು ಜಗತ್ತಿಗೆ ರಾಕೆಟ್ ಸೈನ್ಸ್ ಪರಿಚಯಿಸಿದ್ದೇ ಟಿಪ್ಪು ಸುಲ್ತಾನ್. ಇಂದು ಕೆಲವರು 'ಮೇಕ್ ಇನ್ ಇಂಡಿಯಾ' ಎನ್ನುತ್ತಾರೆ, ಆದರೆ ಅಂದೇ ಟಿಪ್ಪು 'ಮೇಕ್ ಇನ್ ಮೈಸೂರು' ಮಾಡಲು ಮುಂದಾಗಿದ್ದರು. ಬೆಂಗಳೂರಿನ ಎಸ್ ಪಿ ರೋಡ್ ಅನ್ನು 'ತಾರಾ ಮಂಡಲ ಪೇಟೆ' ಎಂದು ಕರೆಯಲಾಗುತ್ತಿತ್ತು, ಏಕೆಂದರೆ ಅಲ್ಲಿ ಗನ್ ಪೌಡರ್ ಮತ್ತು ರಾಕೆಟ್ ಸಂಶೋಧನೆಗಳು ನಡೆಯುತ್ತಿದ್ದವು.
ಟಿಪ್ಪು ಬ್ರಿಟಿಷರ ವಿರುದ್ಧ 4 ಆಂಗ್ಲೋ ಮೈಸೂರು ಯುದ್ಧಗಳನ್ನು ಮಾಡಿದ್ದು ಸುಳ್ಳೇ? ಬ್ರಿಟಿಷರ ವಿರುದ್ಧ ಹೋರಾಡಿದವರು ಸ್ವಾತಂತ್ರ್ಯ ಹೋರಾಟಗಾರರಲ್ಲ ಎನ್ನುವುದು ಆರ್ ಎಸ್ ಎಸ್ ವಾದ. ಹಾಗಿದ್ದರೆ ಆರ್ ಎಸ್ ಎಸ್ ಬ್ರಿಟಿಷರ ವಿರುದ್ಧ ಹೋರಾಡಿತೇ?' ಎಂದು ಕಿಡಿಕಾರಿದರು.
ಬೆಂಗಳೂರಿನ ಹೆಮ್ಮೆಯ ಲಾಲ್ ಬಾಗ್ ಕಟ್ಟಿಸಿದ್ದು ಟಿಪ್ಪು ಸುಲ್ತಾನ್. ಆದರೆ ಆ ಭಾಗದ ಈಗಿನ ಸಂಸದರು ಟಿಪ್ಪು ವಿರೋಧಿ. ಹಾಗಾದರೆ ನೀವು ಟಿಪ್ಪು ಕಟ್ಟಿಸಿದ ಲಾಲ್ ಬಾಗ್ ಅನ್ನು ಸುಡುತ್ತೀರಾ? ಅದು ಸಾಧ್ಯವೇ? ಎಂದು ಪ್ರಶ್ನಿಸಿದರು. ನಮಗೆ ಬಳಕೆಗೆ ಬರುವ 90 ಪ್ರತಿಶತ ಕೇಸರಿ (Saffron) ಇಸ್ಲಾಮಿಕ್ ದೇಶಗಳಿಂದ ಬರುತ್ತದೆ. ನಮ್ಮ ಗ್ಯಾಸ್ (LPG) ಅರಬ್ ದೇಶಗಳಿಂದ ಬರುತ್ತದೆ. ಹಾಗಾದರೆ ನಾಳೆಯಿಂದ ನೀವು ತಿಲಕ ಇಡುವುದನ್ನು ನಿಲ್ಲಿಸುತ್ತೀರಾ ಅಥವಾ ಗ್ಯಾಸ್ ಬಳಸುವುದನ್ನು ನಿಲ್ಲಿಸುತ್ತೀರಾ? ಅರಬ್ ದೇಶಗಳಿಂದ ಬರುವ ವಸ್ತುಗಳನ್ನು ನಿಲ್ಲಿಸಲು ಸಾಧ್ಯವೇ? ಎಂದು ಕೇಳಿದರು.
55
ನಿಜವಾದ ಇತಿಹಾಸ ಇರುವುದು ಪಾಲಿ ಮತ್ತು ಪ್ರಾಕೃತದಲ್ಲಿ
'ಇತಿಹಾಸವನ್ನು ಕೆದಕಲು ಹೋದರೆ ಎಲ್ಲರೂ ಸಿಕ್ಕಿಹಾಕಿಕೊಳ್ಳುತ್ತಾರೆ. ಯಾವುದೇ ಮಸೀದಿ ಕೆಡವಿದರೂ ದೇವಸ್ಥಾನ ಸಿಗಬಹುದು, ದೇವಸ್ಥಾನ ಕೆಡವಿದರೆ ಸ್ತೂಪ ಸಿಗಬಹುದು. ಇನ್ನು ಸ್ತೂಪಗಳನ್ನು ಕೆಡವಿದರೆ ಮತ್ತೇನೋ ಸಿಗಬಹುದು. ನಮ್ಮ ನಿಜವಾದ ಇತಿಹಾಸ ಇರುವುದು ಪಾಲಿ ಮತ್ತು ಪ್ರಾಕೃತ ಭಾಷೆಗಳಲ್ಲಿ ಹೊರತು ಸಂಸ್ಕೃತದಲ್ಲಿ ಅಲ್ಲ ಎಂದು ಅಶೋಕ ಚಕ್ರವರ್ತಿಯ ಶಾಸನಗಳ ಉದಾಹರಣೆ ನೀಡಿದರು. ಇದೇ ಉದ್ದೇಶಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಪಾಲಿ ಯುನಿವರ್ಸಿಟಿ ಸ್ಥಾಪಿಸಿದಾಗ ಅದನ್ನು 'ಖರ್ಗೆಯವರ ಖಾಸಗಿ ಯುನಿವರ್ಸಿಟಿ' ಎಂದು ಬಿಂಬಿಸಿದ ವಿರೋಧಿಗಳ ಬಗ್ಗೆ ಖಂಡಿಸಿದರು.
ಕೊನೆಯದಾಗಿ, ಟಿಪ್ಪು 150 ದೇವಾಲಯಗಳನ್ನು ಜೀರ್ಣೋದ್ದಾರ ಮಾಡಿದ್ದನ್ನು ಯಾರೂ ಹೇಳುವುದಿಲ್ಲ. ರಾಜಕೀಯ ಕಾರಣಕ್ಕೆ ಹತ್ತು ದೇವಸ್ಥಾನ ದ್ವಂಸ ಮಾಡಿರಬಹುದು. ಮರಾಠರ ಬಗ್ಗೆ ಬಂಗಾಳದಲ್ಲಿ ಕೇಳಿದರೆ ಅವರ ಅಭಿಪ್ರಾಯವೇ ಬೇರೆ ಇರುತ್ತದೆ. ಹೀಗಾಗಿ ಇತಿಹಾಸವನ್ನು ಸಮಗ್ರವಾಗಿ ನೋಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಕರೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.