ಪ್ರಾದೇಶಿಕ ಸೇನೆಗೆ ನಿಯೋಜನೆಗೊಂಡ ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ!

ಕಾಂಗ್ರೆಸ್‌ ಪಕ್ಷದ ವಕ್ತಾರೆ ಹಾಗೂ ಸೋಶಿಯಲ್‌ ಮೀಡಿಯಾ ವಿಭಾಗದಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಭವ್ಯಾ ನರಸಿಂಹಮೂರ್ತಿ ದೇಶದ ಟೆರಿಟರಿಯಲ್‌ ಆರ್ಮಿಗೆ ನಿಯೋಜನೆಗೊಂಡಿದ್ದಾರೆ. 
 

ಇಲ್ಲಿಯವರೆಗೂ ಕಾಂಗ್ರೆಸ್‌ನ ವಕ್ತಾರೆಯಾಗಿ ಜನರಿಗೆ ಪರಿಚಯರಾಗಿದ್ದ ಭವ್ಯಾ ನರಸಿಂಹಮೂರ್ತಿ ಈಗ ಲೆಫ್ಟಿನೆಂಟ್‌ ಭವ್ಯಾ ನರಸಿಂಹ ಮೂರ್ತಿಯಾಗಿದ್ದಾರೆ. 

ತಾವು ದೇಶದ ಟೆರಿಟರಿಯಲ್‌ ಆರ್ಮಿ ಅಂದರೆ, ಪ್ರಾದೇಶಿಕ ಆರ್ಮಿಯಲ್ಲಿ ಲೆಫ್ಟಿನೆಂಟ್‌ ಆಗಿ ನಿಯೋಜನೆಗೊಂಡಿರುವ ಬಗ್ಗೆ ಭವ್ಯಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 


ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಎನ್ನುವ ಶ್ರೇಯಕ್ಕೂ ಲೆಫ್ಟಿನೆಂಟ್‌ ಭವ್ಯಾ ನರಸಿಂಹ ಮೂರ್ತಿ ಪಾತ್ರರಾಗಿದ್ದಾರೆ.

2022ರ ಸಾಲಿನ ಪರೀಕ್ಷೆಯಲ್ಲಿ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಎನ್ನುವ ಗೌರವವೂ ಭವ್ಯಾ ನರಸಿಂಹಮೂರ್ತಿ ಅವರದ್ದಾಗಿದೆ.

ಪ್ರಾದೇಶಿಕ ಸೇನೆ ಅನ್ನೋದು ರೆಗ್ಯಲರ್‌ ಆರ್ಮಿಯಲ್ಲ. ಭಾರತದ ನಾಗರೀಕರಿಗೆ ತಮ್ಮ ವೃತ್ತಿಯೊಂದಿಗೆ ಭಾರತೀಯ ಸೇನೆಯ ಭಾಗವಾಗಿ ದೇಶಸೇವೆ ಮಾಡುವ ಅವಕಾಶವನ್ನು ಕಲ್ಪಿಸುತ್ತದೆ.

ಟೀಮ್‌ ಇಂಡಿಯಾ ಮಾಜಿ ನಾಯಕ ಎಂಎಸ್‌ ಧೋನಿ ಪ್ಯಾರಾಚೂಟ್‌ ರೆಜಿಮೆಂಟ್‌ನ ಪ್ರಾದೇಶಿಕ ಸೇನೆಯ ಭಾಗವಾಗಿದ್ದಾರೆ. ಅದರೊಂದಿಗೆ ರಾಜಸ್ಥಾನದ ಸಚಿನ್‌ ಪೈಲಟ್‌, ಬಿಜೆಪಿಯ ಅನುರಾಗ್‌ ಠಾಕೂರ್‌ ಕೂಡ ಟೆರಿಟರಿಯಲ್‌ ಆರ್ಮಿಗೆ ಸೇರಿದ ಪ್ರಮುಖರಾಗಿದ್ದಾರೆ.

ವರ್ಷದಲ್ಲಿ ಎರಡು ತಿಂಗಳ ಕಾಲ ಪ್ರಾದೇಶಿಕ ಸೇನೆಯಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ರಾಜ್ಯದ ಜನರ ಆಶೀರ್ವಾದ ತಮ್ಮ ಮೇಲೆ ಇರಲಿ ಎಂದು ಭವ್ಯಾ ನರಸಿಂಹ ಮೂರ್ತಿ ಹೇಳಿದ್ದಾರೆ.

ಕಾಶ್ಮೀರದಲ್ಲಿ ಭಾರತ ಹಾಗೂ ಪಾಕಿಸ್ತಾನದ ಗಡಿಯ ಬಳಿ ಇರುವ ಭಾರತೀಯ ಸೇನಾ ಘಟಕದಲ್ಲಿ ತರಬೇತಿ ಪಡೆದ ಬಳಿಕ ಲೆಫ್ಟಿನೆಂಟ್‌ ಆಗಿ ಅವರು ನಿಯೋಜನೆಗೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ನಾನು ರಾಜಕಾರಣಿಯಾಗಿ ದೇಶದ ಒಳಗೆ ಹಾಗೂ ಸೇನಾಧಿಕಾರಿಯಾಗಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಲಿದ್ದೇನೆ ಎಂದು ಭವ್ಯಾ ಬರೆದುಕೊಂಡಿದ್ದಾರೆ.

2022 ರಲ್ಲಿ ಡೈರೆಕ್ಟರೇಟ್ ಜನರಲ್ ಟೆರಿಟೋರಿಯಲ್ ಆರ್ಮಿ ನಡೆಸಿದ ಪರೀಕ್ಷೆಯ ಮೂಲಕ ನನ್ನ ಆಯ್ಕೆಯಾಗಿದೆ. 2022 ರ ಪರೀಕ್ಷೆಯಲ್ಲಿ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ನಾನು ಎಂದು ಅವರು ಹೇಳಿಕೊಂಡಿದ್ದಾರೆ.

“ಮೇ 2024 ರಲ್ಲಿ, ನಾನು ಇಂಡೋ-ಪಾಕ್ LOC (ನಿಯಂತ್ರಣ ರೇಖೆ) ಬಳಿ ಇರುವ ಸೇನಾ ಘಟಕದಲ್ಲಿ ನನ್ನನ್ನು ನೇಮಿಸಲಾಯಿತು, ಅಲ್ಲಿ ನನಗೆ ತರಬೇತಿ ನೀಡಲಾಯಿತು ಮತ್ತು ಲೆಫ್ಟಿನೆಂಟ್ ಆಗಿ ನಿಯೋಜಿಸಲಾಯಿತು' ಎಂದು ಭವ್ಯಾ ಹೇಳಿದ್ದಾರೆ.

ಪ್ರಾದೇಶಿಕ ಸೇನೆಯು ನಾಗರಿಕರು ತಮ್ಮ ನಾಗರಿಕ ವೃತ್ತಿಯಲ್ಲಿ ಮುಂದುವರಿಯುತ್ತಲೇ ಭಾರತೀಯ ಸೇನೆಯ ಭಾಗವಾಗಿ ದೇಶಕ್ಕೆ ಸೇವೆ ಸಲ್ಲಿಸಲು ಇರುವ ಅವಕಾಶವಾಗಿದೆ ಎಂದಿದ್ದಾರೆ.

Latest Videos

click me!