ನನ್ನನ್ನು ರಾಷ್ಟ್ರಪತಿ, ಪ್ರಧಾನಿ ಮಾಡ್ತೀನಿ ಅಂದ್ರೂ ಬಿಜೆಪಿ ಕಡೆ ತಲೆ ಹಾಕಲ್ಲ: ಸಿಎಂ ಸಿದ್ದರಾಮಯ್ಯ

First Published Apr 4, 2024, 10:09 AM IST

ನಮಗೆ ಸೈದ್ಧಾಂತಿಕ ಸ್ಪಷ್ಟತೆ ಇದ್ದಾಗ ಮಾತ್ರ ರಾಜಕೀಯ ಶಕ್ತಿ ಬರುತ್ತದೆ. ಬಿಜೆಪಿ- ಆರ್‌ಎಸ್‌ಎಸ್‌ ಕಡೆ ತಲೆ ಹಾಕಬೇಡಿ. ಮೋದಿ ಪ್ರಧಾನಿಯಾದರೆ ದೇಶ ತೊರೆಯುತ್ತೇನೆ ಎಂದಿದ್ದ ದೇವೇಗೌಡರು ಈಗ ಮೋದಿಗೂ, ತಮಗೂ ಅವಿನಾಭಾವ ಸಂಬಂಧ ಇದೆ ಎನ್ನುತ್ತಿದ್ದಾರೆ. 

ಮೈಸೂರು/ಚಾಮರಾಜನಗರ (ಏ.04): ನನ್ನನ್ನು ರಾಷ್ಟ್ರಪತಿ, ಪ್ರಧಾನ ಮಂತ್ರಿ ಮಾಡ್ತೀನಿ ಅಂದ್ರೂ ನಾನು ಬಿಜೆಪಿ ಕಡೆ ತಲೆ ಹಾಕಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. 

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಮಗೆ ಸೈದ್ಧಾಂತಿಕ ಸ್ಪಷ್ಟತೆ ಇದ್ದಾಗ ಮಾತ್ರ ರಾಜಕೀಯ ಶಕ್ತಿ ಬರುತ್ತದೆ. ಬಿಜೆಪಿ- ಆರ್‌ಎಸ್‌ಎಸ್‌ ಕಡೆ ತಲೆ ಹಾಕಬೇಡಿ. ಮೋದಿ ಪ್ರಧಾನಿಯಾದರೆ ದೇಶ ತೊರೆಯುತ್ತೇನೆ ಎಂದಿದ್ದ ದೇವೇಗೌಡರು ಈಗ ಮೋದಿಗೂ, ತಮಗೂ ಅವಿನಾಭಾವ ಸಂಬಂಧ ಇದೆ ಎನ್ನುತ್ತಿದ್ದಾರೆ. 

ರಾಜಕಾರಣಿಯಾದವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು ಎಂದರು. ಶೂದ್ರರಿಗೆ-ದಲಿತರಿಗೆ-ಮಹಿಳೆಯರಿಗೆ ಆರ್‌ಎಸ್‌ಎಸ್‌ ಗರ್ಭಗುಡಿಯೊಳಗೆ ಪ್ರವೇಶವನ್ನೇ ಕೊಡಲ್ಲ. ಗೂಳಿಹಟ್ಟಿ ಶೇಖರ್ ಕೂಡ ತಮ್ಮನ್ನು ಆರ್‌ಎಸ್‌ಎಸ್‌ ಗರ್ಭಗುಡಿಯೊಳಗೆ ಬಿಟ್ಟುಕೊಳ್ಳಲ್ಲ ಅಂತ ಬಹಿರಂಗವಾಗಿ ಹೇಳಿದ್ದಾರೆ.

ಬಿಜೆಪಿ ಸಾಮಾಜಿಕ ವಿರೋಧಿಯಾದ್ದರಿಂದ ಯಾರೂ ಇಷ್ಟಪಡುವುದಿಲ್ಲ. ಮೀಸಲಾತಿ ಎನ್ನುವುದು ಭಿಕ್ಷೆಯಲ್ಲ. ಅದು ಶೋಷಿತ ಜನ ಸಮುದಾಯಗಳ ಹಕ್ಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಮೀಸಲಾತಿ ಇದ್ದೇ ಇರಬೇಕು ಎಂದರು.

ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ಬರೀ ಸುಳ್ಳುಗಳನ್ನೇ ಹೇಳುತ್ತಾ ಜನರನ್ನು ವಂಚಿಸುತ್ತಾ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಎಲ್ಲಾ ಅನುದಾನಗಳಲ್ಲಿ ಅನ್ಯಾಯವಾಗಿದೆ. ಆದರೆ, ಗೃಹ ಸಚಿವ ಅಮಿತ್ ಶಾ ಸುಳ್ಳನ್ನು ಹೇಳುತ್ತಿದ್ದಾರೆ. ಇಂತವರಿಗೆ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದರು.

click me!