ಹುಬ್ಬಳ್ಳಿ (ಏ.01): ಕಾಂಗ್ರೆಸ್ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಕೋಟ್ಯಂತರ ಹಣ ಲೂಟಿ ಮಾಡಿದ್ದಾರೆ. ಇದೀಗ ಐಟಿ ಅಧಿಕಾರಿಗಳು ನೋಟಿಸ್ ಕೊಡದೇ ಏನು ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2016ರಿಂದ 2019ರಲ್ಲಿ ದೊಡ್ಡ ಮಟ್ಟದ ಕ್ಯಾಶ್ ತೆಗೆದುಕೊಂಡಿದ್ದಾರೆ. ಹೀಗಾಗಿ, ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದು, ಕಾನೂನು ಪ್ರಕಾರ ಐಟಿ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ. ಐಟಿ ನೋಟಿಸ್ ಕೊಟ್ಟು ತನಿಖೆಗೆ ಮುಂದಾಗಿದ್ದರೆ ಇದನ್ನು ಕಾಂಗ್ರೆಸ್ ಪಕ್ಷ ರಾಜಕೀಯ ದುರುದ್ದೇಶ ಎಂದು ಟೀಕೆ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ.
ಅರವತ್ತು ವರ್ಷಗಳ ರಾಜಕೀಯ ಅನುಭವದಲ್ಲಿ ಏನು ಮಾಡಿದ್ದಾರೆ. ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳದ ಮನಸ್ಥಿತಿಗೆ ಬಂದು ಬಿಟ್ಟಿದ್ದಾರೆ ಎಂದರು. ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೆ ಕುರಿತು ಕೇಳಿದ ಪ್ರಶ್ನೆಗೆ, ಯಾವದಕ್ಕೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನುಡಿದರು. ದಿಂಗಾಲೇಶ್ವರ ಸ್ವಾಮೀಜಿ ನಡೆ ಬಗ್ಗೆ ನಾನು ಯಾರ ಮೊರೆಯೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಮುರುಘಾಮಠವಾಗಲಿ ಮತ್ತು ತಿಪಟೂರು ಷಡಕ್ಷರಿ ರುದ್ರಮುನಿ ಸ್ವಾಮೀಜಿ ಮಾತ್ರವಲ್ಲ, ಯಾರ ಮೊರೆಯೂ ಹೋಗಿಲ್ಲ, ಮಾತನಾಡಿಲ್ಲ ಎಂದು ಪ್ರತಿಕ್ರಿಯಿಸಿದರು. ದಿಂಗಾಲೇಶ್ವರ ಶ್ರೀಗಳು ತಮಗೆ ಕ್ಷೇತ್ರ ಬದಲಾವಣೆ ಬಗ್ಗೆ ಕೊಟ್ಟ ಗಡುವು ನಾಳೆಗೆ ಮುಗಿಯುತ್ತದೆಯಲ್ಲ? ಎಂಬ ಪ್ರಶ್ನೆಗೆ, ನೋಡೋಣನಂತೆ ಗಡುವು ಮುಗಿದ ಮೇಲೆ ಎಂದು ಉತ್ತರಿಸಿದರು.
ಧಾರವಾಡ ಮುರುಘಾ ಮಠದ ಶ್ರೀಗಳು ಕೊಟ್ಟ ಎರಡು ದಿನದ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇನಷ್ಟೇ. ಆ ಬಗ್ಗೆ ತಮಗೆ ಹೆಚ್ಚಿನದೇನು ಗೊತ್ತಿಲ್ಲ ಎಂದರು. ಚಿತ್ರದುರ್ಗ ಮಾತ್ರವಲ್ಲ, ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಅತೃಪ್ತಿ ಇರುವ ಎಲ್ಲೆಡೆಯೂ ವಿಶೇಷ ಗಮನಹರಿಸಿ ಸಮಸ್ಯೆ ಬಗೆಹರಿಸುತ್ತೇವೆ. ಗೆಲ್ಲುವ ಪಕ್ಷದೊಳಗೆ ಸಣ್ಣ ಪುಟ್ಟ ಗೊಂದಲ ಸಹಜ ಎಂದು ಹೇಳಿದರು.