ಬೆಂಗಳೂರು (ಮೇ.08): ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಚುನಾವಣೆ ಪ್ರಚಾರದ ಭಾಗವಾಗಿ ಇಂದು ಬೆಂಗಳೂರಿನ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಿದರು.
ಬಸ್ ಪ್ರಯಾಣ ವೇಳೆ ಪ್ರಯಾಣಿಕರ ಜೊತೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ, ಜನರ ಸಮಸ್ಯೆಗಳನ್ನು ಆಲಿಸಿದರು. ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ವಿವರಿಸಿ ಮತಯಾಚನೆ ಮಾಡಿದರು .
ಮಹಿಳಾ ಪ್ರಯಾಣಿಕರ ಜೊತೆ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುತ್ತದೆ ಎಂದು ಹೇಳಿ ಮತ ಕೇಳಿದರು.
ಇನ್ನು ತಮ್ಮ ಬಸ್ನಲ್ಲಿ ರಾಹುಲ್ ಗಾಂಧಿ ಅವರು ಬರುತ್ತಿದ್ದಂತೆ ಪ್ರಯಾಣಿಕರು ಒಂದು ಕ್ಷಣ ಆಶ್ಚರ್ಯಗೊಂಡರು. ನಂತರ ರಾಹುಲ್ ಗಾಂಧಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಬಹಿರಂಗ ಪ್ರಚಾರ ಇಂದು ಸಂಜೆ 6ಕ್ಕೆ ಅಂತ್ಯ: ಜಿದ್ದಾಜಿದ್ದಿನ ಕಣವಾಗಿರುವ ವಿಧಾನಸಭೆ ಚುನಾವಣೆಗೆ ಅಬ್ಬರದ ಬಹಿರಂಗ ಪ್ರಚಾರ ಸೋಮವಾರ ಸಂಜೆ 6ಗಂಟೆಗೆ ಮುಕ್ತಾಯವಾಗಲಿದ್ದು, ‘ನಿಶ್ಶಬ್ದ ಅವಧಿ’ (ಸೈಲೆಂಟ್ ಪೀರಿಯಡ್) ಪ್ರಾರಂಭವಾಗಲಿದೆ.
ಆದರೆ, ಅಂತಿಮ ಕ್ಷಣದವರೆಗೆ ಮತದಾರರ ಮನವೊಲಿಕೆ ಕಸರತ್ತು ಮುಂದುವರೆಯಲಿದೆ. ಅಭ್ಯರ್ಥಿಗಳು ಅಥವಾ ಅವರ ಪರವಾಗಿ ಮುಖಂಡರು, ಕಾರ್ಯಕರ್ತರು ಮತದಾರರ ಮನೆ ಮನೆಗೆ ತೆರಳಿ ಪ್ರಚಾರವನ್ನೂ ನಡೆಸಬಹುದು.
ಚುನಾವಣಾ ಅಖಾಡದಲ್ಲಿ ಮತಬೇಟೆಯ ಅಬ್ಬರ ತೀವ್ರವಾಗಿದ್ದು, ಪ್ರಚಾರದ ಭರಾಟೆ ಸ್ತಬ್ದವಾಗಲಿದೆ. ಮತದಾನ ಮುಕ್ತಾಯದ 48 ಗಂಟೆಗೂ ಮೊದಲು ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾಗುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 6ಗಂಟೆಯೊಳಗೆ ಎಲ್ಲಾ ಕ್ಷೇತ್ರದಲ್ಲಿಯೂ ಬಹಿರಂಗ ಪ್ರಚಾರ, ಸಾರ್ವಜನಿಕ ಸಭೆಗಳು ಮುಕ್ತಾಯವಾಗಲಿವೆ. ನಿಶಬ್ದ ಅವಧಿಯಲ್ಲಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ವ್ಯಕ್ತಿಗಳು ಕ್ಷೇತ್ರದಲ್ಲಿ ಉಳಿಯುವಂತಿಲ್ಲ.
ಸ್ಟಾರ್ ಪ್ರಚಾರಕರು, ಮುಖಂಡರು ಕ್ಷೇತ್ರವನ್ನು ತೊರೆಯಬೇಕು. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಅಂತಿಮ ಮತಯಾಚನೆಯ ಕಸರತ್ತು ನಡೆಸಲಿದ್ದಾರೆ. ಸೋಮವಾರ ಸಂಜೆ 6 ಗಂಟೆಯ ಬಳಿಕ ಕ್ಷೇತ್ರದಲ್ಲಿ ಸಂಬಂಧಪಡದ ವ್ಯಕ್ತಿಗಳು ಕಂಡು ಬಂದರೆ ಚುನಾವಣಾ ಆಯೋಗದ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಿದ್ದಾರೆ. ಇದೇ ವೇಳೆ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗುತ್ತದೆ.
5 ಮಂದಿಗಿಂತ ಹೆಚ್ಚು ಮಂದಿ ಓಡಾಡುವಂತಿಲ್ಲ: ಸೋಮವಾರ ಸಂಜೆ 6 ಗಂಟೆಯ ಬಳಿಕ ನಿಶ್ಶಬ್ದ ಅವಧಿಯಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಗುಂಪು ಗುಂಪಾಗಿ ಓಡಾಡುವಂತಿಲ್ಲ. ಪ್ರತಿ ಕ್ಷೇತ್ರದಲ್ಲಿ ಐದು ಮಂದಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ ಮತ್ತು ಓಡಾಡುವಂತೆಯೂ ಇಲ್ಲ. ಐದು ಮಂದಿಗಿಂತ ಹೆಚ್ಚು ಜನ ಒಂದೆಡೆ ಕಂಡು ಬಂದರೆ ನೀತಿ ಸಂಹಿತೆ ಉಲ್ಲಂಘನೆಯಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದಿದೆ.