Chetan Ahimsa Political Party: ನಟ ಚೇತನ್ ಅಹಿಂಸಾ ಹೊಸ ರಾಜಕೀಯ ಪಕ್ಷ ಸ್ಥಾಪನೆ; ಇಲ್ಲಿವೆ ಪ್ರಣಾಳಿಕೆ 10 ಅಂಶಗಳು

Published : Jun 21, 2026, 07:51 PM IST

ಸಾಮಾಜಿಕ ಹೋರಾಟಗಾರ ನಟ ಚೇತನ್ ಅಹಿಂಸಾ (Actor Chetan Ahimsa) ಅವರು ಹೊಸ ರಾಜಕೀಯ ಪಕ್ಷ (New Political Party) ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ದಲಿತ ಹಾಗೂ ಬಹುಜನ ಸಂಘಟನೆಗಳನ್ನು ಒಗ್ಗೂಡಿಸಿ, 2027ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷಕ್ಕೆ ಅಧಿಕೃತ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.

PREV
16

ಬಾಗಲಕೋಟೆ (ಜೂ.21): ಸಿನಿಮಾದ ನಟನೊಬ್ಬ ಹೊಸ ರಾಜಕೀಯ ಪಕ್ಷ ಸ್ಥಾಪಿಸಿ, ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳಿಂದ ಗೆಲ್ಲುವ ಮೂಲಕ ಮುಖ್ಯಮಂತ್ರಿಯಾದ ತಮಿಳುನಾಡಿದ ಸಿಎಂ ವಿಜಯ್ ಅವರ ಸಾಧನೆಗೆ ಇಡೀ ದೇಶದ ರಾಜಕಾರಣಿಗಳು ನಿಬ್ಬೆರಗಾಗಿದ್ದಾರೆ. ಇದೀಗ ಕನ್ನಡ ನಾಡಿನಲ್ಲಿಯೂ ಇದೀಗ ನಟ ಅಹಿಂಸಾ ಚೇತನ್ ಅವರು ಹೊಸ ಪಕ್ಷವನ್ನು ಸ್ಥಾಪಿಸಿ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ಈ ಬಗ್ಗೆ ತಾವು 2027ರ ಜನವರಿಯಲ್ಲಿ ಹೊಸ ಪಕ್ಷವನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

26

ರಾಜ್ಯದಲ್ಲಿ ಸದಾ ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಳ್ಳುವ ನಟ ಮತ್ತು ಹೋರಾಟಗಾರ ಚೇತನ್ ಅಹಿಂಸಾ ಈಗ ರಾಜಕೀಯ ರಂಗಕ್ಕೆ ಅಧಿಕೃತವಾಗಿ ಕಾಲಿಡಲು ಸಿದ್ಧತೆ ನಡೆಸಿದ್ದಾರೆ. ಬಾಗಲಕೋಟೆಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ರಾಜಕೀಯ ಪಕ್ಷವನ್ನು ಕಟ್ಟುವುದಾಗಿ ಘೋಷಿಸಿದ್ದಾರೆ. ಕೇವಲ ಪಕ್ಷ ಘೋಷಣೆ ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ತರುವ ಗುರಿಯನ್ನು ಹೊಂದಿದ್ದಾರೆ.

36

ದಲಿತ ಹಾಗೂ ಬಹುಜನ ಸಂಘಟನೆಗಳ ಒಕ್ಕೂಟ:

ತಮ್ಮ ರಾಜಕೀಯ ನಡೆಯ ಬಗ್ಗೆ ವಿವರಿಸಿದ ಚೇತನ್, 'ವಿವಿಧ ಸಮಾಜಪರ ಸಂಘಟನೆಗಳು, ದಲಿತ ಮತ್ತು ಬಹುಜನ ಪರ ಹೋರಾಟಗಾರರನ್ನು ಒಗ್ಗೂಡಿಸಿ ಹೊಸ ಶಕ್ತಿಯನ್ನು ರೂಪಿಸುತ್ತಿದ್ದೇವೆ. ಇದಕ್ಕಾಗಿ ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಸಂಘಟನೆ ಮಾಡುವ ಗುರಿ ಹೊಂದಿದ್ದೇವೆ' ಎಂದು ತಿಳಿಸಿದರು.

46

2027 ಜನವರಿಯಲ್ಲಿ ಬೃಹತ್ ಸಮಾವೇಶ:

ಪಕ್ಷದ ಅಧಿಕೃತ ಲಾಂಚ್ ಬಗ್ಗೆ ಮಾಹಿತಿ ನೀಡಿದ ಅವರು, '2027ರ ಜನವರಿ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ 25,000ಕ್ಕೂ ಅಧಿಕ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲಾಗುವುದು. ಅಂದು ಪಕ್ಷದ ಹೆಸರು, ಚಿಹ್ನೆ, ಪ್ರಣಾಳಿಕೆ, ಧ್ವಜ ಹಾಗೂ ರಾಜ್ಯ ಸಮಿತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು. ನಮ್ಮ ಪಕ್ಷದ ಹೆಸರಿನಲ್ಲಿ ಸಂವಿಧಾನದ ಆಶಯಗಳ ಪದಗಳಿರಲಿವೆ' ಎಂದರು. ಪ್ರಸ್ತುತ ಪಕ್ಷದ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

56

ಪ್ರಣಾಳಿಕೆಯ 10 ಪ್ರಮುಖ ಅಂಶಗಳು:

ಸಮ ಸಮಾಜ ಕಟ್ಟುವ ಉದ್ದೇಶದೊಂದಿಗೆ ಚೇತನ್ ಅವರು ತಮ್ಮ ಪಕ್ಷದ 10 ಪ್ರಮುಖ ಆಶಯಗಳನ್ನು ಹಂಚಿಕೊಂಡಿದ್ದಾರೆ:

  1. ಲಿಂಗ ಸಮಾನತೆ
  2. ಜಾತಿಯ ಸಮಾನತೆ
  3. ಆರ್ಥಿಕ ಸಮಾನತೆ
  4. ಭದ್ರತೆ
  5. ಧರ್ಮ ನಿರಪೇಕ್ಷತೆ
  6. ಪ್ರಾದೇಶಿಕತೆ ಮತ್ತು ಭಾಷೆ-ಸಾಂಸ್ಕೃತಿಕ ಸಮಾನತೆ
  7. ಪರಿವರ್ತನಾ ಪರಿಸರವಾದ
  8. ಭ್ರಷ್ಟಾಚಾರ ವಿರೋಧಿ
  9. ಅಭಿವ್ಯಕ್ತಿ ಮತ್ತು ಮಾಧ್ಯಮ ಸ್ವಾತಂತ್ರ್ಯ
  10. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ.

ಇದರೊಂದಿಗೆ ಪೊಲೀಸ್ ಮತ್ತು ಜೈಲು ಸುಧಾರಣೆ ಹಾಗೂ ತಂತ್ರಜ್ಞಾನದ ಸದ್ಬಳಕೆಗೆ ಒತ್ತು ನೀಡುವುದಾಗಿ ಹೇಳಿದ್ದಾರೆ.

66

ಕಾಂಗ್ರೆಸ್ ವಿರುದ್ಧ ವಾಗ್ದಾಳಿ:

ತಮ್ಮ ಹೋರಾಟದ ಹಾದಿಯ ಬಗ್ಗೆ ಮಾತನಾಡಿದ ಚೇತನ್, 'ನಾವು ಮೂಲತಃ ಮನುವಾದಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಗಟ್ಟಿಯಾದ ಹೋರಾಟ ಕಟ್ಟುತ್ತಾ ಬಂದಿದ್ದೇವೆ. ಈ ದೇಶದಲ್ಲಿರುವ ಸಾವಿರಾರು ಪಕ್ಷಗಳು ಸಾಮಾನ್ಯ ಜನರಿಗೆ ನ್ಯಾಯ ಒದಗಿಸಿಲ್ಲ. ನಮಗೆ ಬೇಕಾಗಿರುವುದು ಸಮ ಸಮಾಜ. ಅದಕ್ಕಾಗಿ ಒಂದು ಪ್ರತ್ಯೇಕವಾದ, ಗಟ್ಟಿಯಾದ ಧ್ವನಿಯನ್ನು ನಾವು ಕಟ್ಟುತ್ತಿದ್ದೇವೆ. ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಚೇತನ್ ಅವರ ಈ ರಾಜಕೀಯ ನಡೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಇವರ ಜೊತೆ ಹೇಗೆ ಕೈಜೋಡಿಸಲಿವೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories