ಲೋಕಸಭಾ ಚುನಾವಣೆಗೆ ಬೆಳಗಾವಿಯಿಂದ ಸ್ಪರ್ಧೆ ಮಾಡಲು ಜಗದೀಶ್ ಶೆಟ್ಟರ್ ಒಪ್ಪಿಗೆ!

First Published | Mar 15, 2024, 7:03 AM IST

ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಬೇಸರಗೊಂಡಿದ್ದ ಶೆಟ್ಟರ್ ಅವರನ್ನು ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 

ಬೆಂಗಳೂರು/ಹುಬ್ಬಳ್ಳಿ (ಮಾ.15): ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ನಿಶ್ಚಿತವಾಗಿದೆ. ಧಾರವಾಡ ಅಥವಾ ಹಾವೇರಿ ಕ್ಷೇತ್ರಗಳ ಬಗ್ಗೆ ಒಲವು ಹೊಂದಿದ್ದ ಶೆಟ್ಟರ್‌ ಅವರಿಗೆ ಎರಡೂ ಕ್ಷೇತ್ರಗಳ ಟಿಕೆಟ್‌ ಕೈತಪ್ಪಿದ್ದರಿಂದ ಈಗ ಉಳಿದಿರುವ ಬೆಳಗಾವಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. 

ಇದರಲ್ಲೂ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿದ್ದ ಶಕ್ತಿಗಳ ಪ್ರಭಾವ ಕೆಲಸ ಮಾಡಿದೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ. ಬುಧವಾರ ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಬೇಸರಗೊಂಡಿದ್ದ ಶೆಟ್ಟರ್ ಅವರನ್ನು ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Tap to resize

ಹೀಗಾಗಿ, ಬೆಳಗಾವಿ ಕ್ಷೇತ್ರದ ಹಾಲಿ ಸಂಸದೆಯಾಗಿರುವ ಹಾಗೂ ಬೀಗರೂ ಆಗಿರುವ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ತಪ್ಪುವ ಸಾಧ್ಯತೆಯಿದೆ. ಬುಧವಾರ ಸಂಜೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಶೆಟ್ಟರ್ ತಮ್ಮ ರಾಯಚೂರು ಪ್ರವಾಸ ಮೊಟಕುಗೊಳಿಸಿ ಮರಳಿ ಹುಬ್ಬಳ್ಳಿಗೆ ಆಗಮಿಸಿದ್ದರು. ಗುರುವಾರ ಬೆಳಿಗ್ಗೆ ತಮ್ಮ ಆಪ್ತರೊಂದಿಗೆ ಸಭೆ ನಡೆಸಿದರು. 

ಜತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತಮ್ಮ ಅಸಮಾಧಾನವನ್ನೂ ಹೊರಹಾಕಿದ್ದರು. ಇದಾದ ಕೆಲಹೊತ್ತಿನ ಬಳಿಕ ಅಮಿತ್‌ ಶಾ ಅವರು ಕರೆ ಮಾಡಿ ಮಾತುಕತೆ ನಡೆಸಿದರು ಎನ್ನಲಾಗಿದೆ. 

ಸಂಜೆ ತಮ್ಮ ಸಹೋದರ ಪ್ರದೀಪ ಶೆಟ್ಟರ್‌ ಅವರೊಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಜಗದೀಶ್ ಶೆಟ್ಟರ್‌ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಬೆಂಗಳೂರಿಗೆ ಆಗಮಿಸುವ ಮೊದಲು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿನ ಪಕ್ಷದ ಮುಖಂಡರು, ಶಾಸಕರು, ಮಾಜಿ ಶಾಸಕರೊಂದಿಗೆ ಖುದ್ದು ಶೆಟ್ಟರ್‌ ಫೋನ್‌ ಮೂಲಕವೇ ಮಾತನಾಡಿದರು. ಎಲ್ಲರೂ ಶೆಟ್ಟರ್‌ ಅವರಿಗೆ ಆಹ್ವಾನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Latest Videos

click me!