ಬಿಜೆಪಿ ಸಂಸದರರೊಬ್ಬರ ಪುತ್ರ ಹಾಗೂ ಹಾಲಿ ಶಾಸಕರೊಬ್ಬರನ್ನು ಕಾಂಗ್ರೆಸ್ ಸೆಳೆಯುವಲ್ಲಿ ಡಿಕೆ ಶಿವಕುಮಾರ್ ಸಕ್ಸಸ್ ಆಗಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಶಾಸಕ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ.
ಶರತ್ ಬಚ್ಚೇಗೌಡ ಅವರನ್ನ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಇಂದು (ಮಂಗಳವಾರ) ಹೊಸಕೊಟೆ ಸ್ಥಳೀಯ ಕೈ ಮುಖಂಡರ ಜೊತೆ ಡಿ.ಕೆ ಶಿವಕುಮಾರ್, ಕೃಷ್ಣ ಬೈರೇಗೌಡ ಅವರು ಸಭೆ ನಡೆಸಿದರು
ಸಭೆಯಲ್ಲಿ ಶರತ್ ಬಚ್ಚೇಗೌಡ ಅವರನ್ನ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಶರತ್ ಬಚ್ಚೇಗೌಡ ಅವರ ಬೆಂಬಲಿಗರ ಜೊತೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರನ್ನ ಒಟ್ಟೆಗೆ ತೆಗೆದುಕೊಂಡರೆ ನಮ್ಮ ಅಭ್ಯಂತರವಿಲ್ಲ ಎಂದ ಸ್ಥಳೀಯ ಮುಖಂಡರು ತಿಳಿಸಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ, ಇದೇ ಅಕ್ಟೋಬರ್ 25 ರಂದು ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇನ್ನು ಹೊಸಕೊಟೆ ಕೈ ನಾಯಕರು ಹಾಗೂ ಶರತ್ ಬಚ್ಚೇಗೌಡ ನಡುವೆ ಸಭೆ ನಡೆಸುವ ಹೊಣೆಯನ್ನು ಡಿ.ಕೆ ಶಿವಕುಮಾರ್ ಅವರು ಕೃಷ್ಣಬೈರೇಗೌಡರಿಗೆ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಉಪ ಚುನಾವಣೆಯಲ್ಲಿ ಜಿದ್ದಾ ಜಿದ್ದಿನ ಕಣದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್ ವಿರುದ್ಧ ಶರತ್ ಬಚ್ಚೇಗೌಡ ಭರ್ಜರಿ ಗೆಲುವು ದಾಖಲಿಸಿದ್ದರು. ಶರತ್ ಗೆಲುವಿಗೆ ಜೆಡಿಎಸ್‌ನ ಪರೋಕ್ಷ ಬೆಂಬಲವೂ ಇತ್ತು ಎಂದು ಹೇಳಲಾಗಿತ್ತು. ಆದರೆ, ಈಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಹ್ವಾನದ ಮೇರೆಗೆ ಕಾಂಗ್ರೆಸ್ ಸೇರುತ್ತಿದ್ದಾರೆ.