ಎನ್‌ಡಿಆರ್‌ಎಫ್ ಹಣಕ್ಕಾಗಿ ಸುಪ್ರೀಂಗೆ ಹೋಗಿರುವುದು ರಾಜಕೀಯ ತಂತ್ರಗಾರಿಕೆ: ಬೊಮ್ಮಾಯಿ

First Published | Mar 27, 2024, 8:02 AM IST

ರಾಜ್ಯ ಸರ್ಕಾರ ಅಧೋಗತಿಗೆ ಹೋಗಿದೆ. ಅದೇ ಕಾರಣಕ್ಕೆ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಸುಪ್ರೀಂಕೋರ್ಟ್‌ಗೆ ಹೋಗಿರುವುದು ರಾಜಕೀಯ ತಂತ್ರಗಾರಿಕೆ. ರಾಜ್ಯ ಸರ್ಕಾರ ಕೇಂದ್ರದಿಂದ ಹಣ ಬಂದಿಲ್ಲ ಎಂದು ಆರೋಪಿಸುತ್ತಿದೆ. 

ಹುಬ್ಬಳ್ಳಿ (ಮಾ.27): ರಾಜ್ಯಕ್ಕೆ ಕೇಂದ್ರದಿಂದ ಯುಪಿಎ ಕಾಲದಲ್ಲಿ ಎಷ್ಟು ಹಾಗೂ ಎನ್‌ಡಿಎ ಕಾಲದಲ್ಲಿ ಎಷ್ಟು ಎನ್‌ಡಿಆರ್‌ಎಫ್ ಹಣ ಬಂದಿದೆ ಎನ್ನುವುದನ್ನು ರಾಜ್ಯ ಸರ್ಕಾರ ಬಹಿರಂಗ ಪಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸವಾಲು ಹಾಕಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧೋಗತಿಗೆ ಹೋಗಿದೆ. ಅದೇ ಕಾರಣಕ್ಕೆ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಸುಪ್ರೀಂಕೋರ್ಟ್‌ಗೆ ಹೋಗಿರುವುದು ರಾಜಕೀಯ ತಂತ್ರಗಾರಿಕೆ. ರಾಜ್ಯ ಸರ್ಕಾರ ಕೇಂದ್ರದಿಂದ ಹಣ ಬಂದಿಲ್ಲ ಎಂದು ಆರೋಪಿಸುತ್ತಿದೆ. ಅದರ ಬದಲು ಹಿಂದೆ ಎಷ್ಟು ಬಂದಿತ್ತು. ಈಗ ಎಷ್ಟು ಬಂದಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದರು.

Tap to resize

ಇದೇ ವೇಳೆ ಮೋದಿ ಮೋದಿ ಎಂದು ಕೂಗುವ ಯುವಕರ ಕಪಾಳಕ್ಕೆ ಹೊಡೆಯಿರಿ ಎಂದು ಸಚಿವ ಶಿವರಾಜ್ ತಂಗಡಗಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇನ್ನು ಸ್ವಲ್ಪ ದಿನ ತಾಳಿ, ಮತಗಳ ಮೂಲಕ ಜನ ಪರೋಕ್ಷವಾಗಿ ಕಾಂಗ್ರೆಸ್‌ಗೆ ಕಪಾಳಕ್ಕೆ ಹೊಡೆಯುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ವಾತಾವರಣ ಉತ್ತಮವಾಗಿದೆ. ಎಲ್ಲ ಕಡೆ ಮೋದಿ ಪರ ಅಲೆ ಇದೆ. ರಾಜ್ಯದಲ್ಲಿ ಭಿನ್ನಮತ ಶಮನ ಆಗುತ್ತಿದೆ. ಸಂಗಣ್ಣ ಕರಡಿ ಅವರು ಸಮಾಧಾನ ಆಗಿದ್ದಾರೆ ಎಂದರು.

ಸೆಲೆಬ್ರಿಟಿಗಳು ಬರುತ್ತಾರೆ: ಲೋಕಸಭೆ ಚುನಾವಣಾ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು ಎಲ್ಲ ಕಡೆ ಬರುತ್ತಾರೆ. ರಾಷ್ಟ್ರೀಯ ನಾಯಕರ ಜೊತೆ ಸೆಲೆಬ್ರೆಟಿಗಳು ಪ್ರಚಾರಕ್ಕೆ ಬರುತ್ತಾರೆ. ಎರಡು ಮೂರು ದಿನಗಳಲ್ಲಿ ರಾಷ್ಟ್ರೀಯ ನಾಯಕರ ಪ್ರಚಾರ, ಪ್ರವಾಸದ ನಿರ್ಧಾರ ಆಗುತ್ತದೆ. ಧಾರವಾಡ ಹಾಗೂ ನಮ್ಮ ಕ್ಷೇತ್ರಕ್ಕೂ ಪ್ರಚಾರಕ್ಕೆ ಬರುತ್ತಾರೆ. ನಮ್ಮ ಕ್ಷೇತ್ರಕ್ಕೆ ಯಡಿಯೂರಪ್ಪ, ವಿಜಯೇಂದ್ರ ಸೇರಿ ಎಲ್ಲರೂ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದರು.

ರೆಡ್ಡಿ ಬಲ: ಮಾಜಿ ಸಚಿವ ಜನಾರ್ದನ ರೆಡ್ಡಿ ಪಕ್ಷಕ್ಕೆ ಬಂದಿರುವುದು ಬಲ ಬಂದಿದೆ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಅವರ ಪ್ರಭಾವ ಇದೆ ಎಂದರು. ಬಿಜೆಪಿಗೆ ಬಂದರೆ ಎಲ್ಲರೂ ಶುದ್ಧವಾಗುತ್ತಾರೆ ಅನ್ನುವ ಸಚಿವ ಸಂತೋಷ್ ಲಾಡ್ ಹೇಳಿಕೆಗೆ, ಅದು ಅವರ ಅನುಭವದ ಮಾತು ಎಂದು ತಿರುಗೇಟು ನೀಡಿದರು.

Latest Videos

click me!