ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ₹5000 ಸಿಗ್ತಿದೆ: ಡಿ.ಕೆ.ಶಿವಕುಮಾರ್‌

First Published | Feb 18, 2024, 4:00 AM IST

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಅನೇಕರ ಮನೆ ದೀಪ ಬೆಳಗುತ್ತಿದೆ. ಅದರ ಉಪಕಾರವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ತೀರಿಸಲಿದ್ದು, ಕನಿಷ್ಠ 20 ಸೀಟುಗಳನ್ನಾದರೂ ನಾವು ರಾಜ್ಯದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭರವಸೆ ವ್ಯಕ್ತಪಡಿಸಿದ್ದಾರೆ. 
 

ಮಂಗಳೂರು (ಫೆ.18): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಅನೇಕರ ಮನೆ ದೀಪ ಬೆಳಗುತ್ತಿದೆ. ಅದರ ಉಪಕಾರವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ತೀರಿಸಲಿದ್ದು, ಕನಿಷ್ಠ 20 ಸೀಟುಗಳನ್ನಾದರೂ ನಾವು ರಾಜ್ಯದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭರವಸೆ ವ್ಯಕ್ತಪಡಿಸಿದ್ದಾರೆ. 

ಮಂಗಳೂರಿನಲ್ಲಿ ಶನಿವಾರ ನಡೆದ ಕಾಂಗ್ರೆಸ್‌ನ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದಾಗಿ ಪ್ರತಿ ಕುಟುಂಬ ತಿಂಗಳಿಗೆ 5 ಸಾವಿರ ರು.ಗೂ ಅಧಿಕ ಹಣವನ್ನು ತಮ್ಮ ಜೀವನೋಪಾಯಕ್ಕಾಗಿ ಉಳಿಸಿ, ಬಳಸುತ್ತಿದೆ ಎಂದರು. ಈಗ ಬಿಜೆಪಿ-ಜೆಡಿಎಸ್‌ ಎರಡೂ ಪಕ್ಷಗಳು ಜತೆಯಾಗಿವೆ. ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದ ದೇವೇಗೌಡರು ಈಗ ಬಿಜೆಪಿಯತ್ತ ಹೋಗಿದ್ದಾರೆ. 

Tap to resize

ಅವರು ಬೇಕಾದರೆ ತಮ್ಮ ಸಿದ್ಧಾಂತಗಳನ್ನು ಬದಲಾವಣೆ ಮಾಡಿಕೊಳ್ಳಲಿ, ಹೊಂದಾಣಿಕೆ ಮಾಡಿಕೊಳ್ಳಲಿ.  ಕಾಂಗ್ರೆಸ್‌ ಪಕ್ಷದ ತತ್ವ-ಸಿದ್ಧಾಂತ ಮಾತ್ರ ಎಂದೂ ಬದಲಾಗಲ್ಲ. ಎಲ್ಲರನ್ನೂ ಜತೆಗೂಡಿಸಿಕೊಂಡು ಒಟ್ಟಾಗಿ ಹೋಗುವ ಸಿದ್ಧಾಂತವನ್ನು ನಾವು ಉಳಿಸಿಕೊಂಡು ಹೋಗುತ್ತೇವೆ ಎಂದ ಡಿ.ಕೆ.ಶಿವಕುಮಾರ್‌, ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಉಡುಪಿ- ಚಿಕ್ಕಮಗಳೂರಿನಲ್ಲಿ ಗೆದ್ದಿದ್ದ ಸ್ಥಾನಕ್ಕೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಡಿ.ವಿ.ಸದಾನಂದ ಗೌಡರು ರಾಜೀನಾಮೆ ನೀಡಿದ್ದರು.  ಆ ಸಂದರ್ಭದಲ್ಲೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್‌ಗೆ ಕಳುಹಿಸಿದ ಇತಿಹಾಸ ಇದೆ ಎಂದರು. 

ಕಾಂಗ್ರೆಸ್‌ ಪಕ್ಷ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಅಭಿವೃದ್ಧಿಗಾಗಿ 56 ಸಾವಿರ ಕೋಟಿ ರು.ಗಳನ್ನು ನೀಡುತ್ತಿದೆ. ಆದರೂ ಬಜೆಟ್‌ ವಿರೋಧಿಸಿ ಬಿಜೆಪಿ ಪ್ರತಿಭಟಿಸಿದೆ. ರಾಜ್ಯದಲ್ಲಿ 136 ಕಾಂಗ್ರೆಸ್‌ ಶಾಸಕರು, ಇಬ್ಬರು ಪಕ್ಷೇತರರು ನಮ್ಮ ಜತೆಗಿದ್ದಾರೆ. ವಿಪಕ್ಷದವರು ಏನೇ ತಂತ್ರ ಮಾಡಲಿ, ಕಾಂಗ್ರೆಸ್‌ ಸರ್ಕಾರ ಮುಂದಿನ ಐದು ವರ್ಷಪೂರ್ತಿ ಅಧಿಕಾರ ನಡೆಸಲಿದೆ. ನಂತರವೂ ಅಧಿಕಾರಕ್ಕೆ ಬರಲಿದೆ ಎಂದು ಶಿವಕುಮಾರ್‌ ಭರವಸೆ ವ್ಯಕ್ತಪಡಿಸಿದರು.

370 ಸೀಟ್‌ ಗೆಲ್ಲಲು ಅಸಾಧ್ಯ: ಪ್ರಧಾನಿಯವರು ಹೇಳುವಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 370 ಸೀಟು ಗೆಲ್ಲಲು ಸಾಧ್ಯವೇ ಇಲ್ಲ. ಅತ್ತ ರಾಹುಲ್‌ ಗಾಂಧಿ ದೇಶ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದರೆ, ಮಹಾತ್ಮಾ ಗಾಂಧಿ, ನೆಹರೂ, ರಾಜೀವ್‌ ಗಾಂಧಿ ಕುಳಿತ ಜಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದಾರೆ. ಅವರ ನಾಯಕತ್ವದಲ್ಲಿ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಮುಂದೆಯೂ ಬರಲಿದೆ ಎಂದರು. ದೇಶದಲ್ಲಿ ಭಾರತ್‌ ಜೋಡೋ ಯಾತ್ರೆ ಮೂಲಕ ರಾಹುಲ್‌ ಗಾಂಧಿ ಜನರ ಮನಸ್ಸನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲೀಗ ಜನ ಹೊಸ ನಾಯಕತ್ವಕ್ಕೆ ಜನ ಚಿಂತಿಸತೊಡಗಿದ್ದಾರೆ. ವಿರೋಧಿಗಳು ಏನೇ ಮಾಡಲಿ, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸೀಟ್‌ ಗೆಲ್ಲುವುದರೊಂದಿಗೆ ದೇಶದಲ್ಲಿ ‘ಇಂಡಿಯಾ’ ಒಕ್ಕೂಟ ಸರ್ಕಾರ ರಚನೆ ಮಾಡಲಿದೆ ಎಂದು ಭವಿಷ್ಯ ನುಡಿದರು.

Latest Videos

click me!