ವಿತ್ತೀಯ ಶಿಸ್ತಿನ ಅಡಿಯಲ್ಲೇ ಸಾಲ: 1.05 ಲಕ್ಷ ಕೋಟಿ ರು. ಸಾಲ ಮಾಡಿರುವುದನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿತ್ತೀಯ ಶಿಸ್ತು ಅಧಿನಿಯಮದ ಅಡಿಯಲ್ಲೇ ಸಾಲ ಮಾಡಲಾಗಿದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳಿಂದ ಈ ಬಾರಿ ಕೊರತೆ ಬಜೆಟ್ ಉಂಟಾಗಿರುವುದು ಸತ್ಯ. ಮುಂದಿನ ವರ್ಷದಿಂದ ಉಳಿತಾಯ ಬಜೆಟ್ ಆಗಲಿದೆ. 1.05 ಲಕ್ಷ ಕೋಟಿ ರು. ಸಾಲ ಮಾಡಿದ್ದರೂ ಜಿಡಿಪಿಯ ಶೇ.0.97ರಷ್ಟರ ಮಿತಿಯಲ್ಲೇ ಇದೆ. ಒಟ್ಟು ರಾಜ್ಯ ಆಂತರಿಕ ಉತ್ಪನ್ನದ ಶೇ.23.68 ರಷ್ಟು ಮಾತ್ರ ಸಾಲ ಮಾಡಿದ್ದು, ನಿಯಮಗಳಲ್ಲೇ ಶೇ.25ರವರೆಗೆ ಸಾಲ ಮಾಡಲು ಅವಕಾಶವಿದೆ. ನಾವು ಜಿಡಿಪಿಯ ಶೇ.0.97ರಷ್ಟು ಸಾಲ ಮಾಡಿದ್ದರೆ ಕೇರಳ ಶೇ.2.1, ರಾಜಸ್ತಾನ ಶೇ.1.4, ಆಂಧ್ರಪ್ರದೇಶ 1.6 ಹಾಗೂ ಕೇಂದ್ರ ಸರ್ಕಾರ ಶೇ.2 ರಷ್ಟು ಸಾಲ ಮಾಡಿದೆ. ಕೇಂದ್ರ ಸರ್ಕಾರವು 2024-25ರ 40 ಲಕ್ಷ ಕೋಟಿ ರು. ಬಜೆಟ್‌ನಲ್ಲಿ 17 ಲಕ್ಷ ಕೋಟಿ ರು. ಸಾಲ ಮಾಡಿದ್ದಾರೆ. ಕೇಂದ್ರಕ್ಕಿಂತ ಬಹಳಷ್ಟು ಪಾಲು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಹೇಳಿದರು.