ಸೋಲಿನ ಭೀತಿಯಿಂದ ಬಿಜೆಪಿ ತೆರಿಗೆ ಭಯೋತ್ಪಾದನೆ: ಸಿಎಂ ಸಿದ್ದರಾಮಯ್ಯ

First Published Mar 31, 2024, 5:49 AM IST

ಕಾಂಗ್ರೆಸ್‌ ಪಕ್ಷದ ವಿರುದ್ಧ ತೆರಿಗೆ ಭಯೋತ್ಪಾದನೆ ಮಾಡಲಾಗುತ್ತಿದ್ದು, ಅದರಿಂದ ಕಾಂಗ್ರೆಸ್‌ ಪಕ್ಷವನ್ನು ದುರ್ಬಲಗೊಳಿಸಿ ಚುನಾವಣೆ ಗೆಲ್ಲಬಹುದು ಎಂದು ತಿಳಿದಿದ್ದರೆ ಅದು ಬಿಜೆಪಿಯ ಭ್ರಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಮಾ.31): ಲೋಕಸಭಾ ಚುನಾವಣೆ ಸೋಲಿನ ಭೀತಿಯಿಂದ ಬಿಜೆಪಿ ಐಟಿ, ಇಡಿ, ಸಿಬಿಐನಂತಹ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹುನ್ನಾರದ ಭಾಗವಾಗಿಯೇ ಕಾಂಗ್ರೆಸ್‌ ಪಕ್ಷದ ವಿರುದ್ಧ ತೆರಿಗೆ ಭಯೋತ್ಪಾದನೆ ಮಾಡಲಾಗುತ್ತಿದ್ದು, ಅದರಿಂದ ಕಾಂಗ್ರೆಸ್‌ ಪಕ್ಷವನ್ನು ದುರ್ಬಲಗೊಳಿಸಿ ಚುನಾವಣೆ ಗೆಲ್ಲಬಹುದು ಎಂದು ತಿಳಿದಿದ್ದರೆ ಅದು ಬಿಜೆಪಿಯ ಭ್ರಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ವರಮಾನ ತೆರಿಗೆ ರೂಪದಲ್ಲಿ 1,823 ಕೋಟಿ ರು. ಪಾವತಿಸುವಂತೆ ಐಟಿ ನೀಡಿರುವ ನೋಟಿಸ್‌ ಕುರಿತಂತೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಚುನಾವಣೆ ಘೋಷಣೆಯಾಗುತ್ತಿದ್ದಂತೆ ಐಟಿ ಇಲಾಖೆ ಅತಿಕ್ರಿಯಾಶೀಲವಾಗಿದೆ.

ಕಾಂಗ್ರೆಸ್‌ ನೋಟಿಸ್‌ ನೀಡಿರುವ ಮಾದರಿಯಲ್ಲಿಯೇ ಟಿಎಂಸಿ, ಸಿಪಿಐ ಸೇರಿದಂತೆ ಇತರ ವಿರೋಧ ಪಕ್ಷಗಳ ಮೇಲೂ ತೆರಿಗೆ ಭಯೋತ್ಪಾದನೆ ಅಸ್ತ್ರ ಪ್ರಯೋಗಿಸಿದೆ. ವಿಪಕ್ಷಗಳ ಮೇಲೆ ಮುಗಿಬಿದ್ದಿರುವ ಐಟಿ ಬಿಜೆಪಿಯ ತೆರಿಗೆ ಉಲ್ಲಂಘನೆ ಬಗ್ಗೆ ಕುರುಡಾಗಿದೆ. ಐಟಿ ಇಲಾಖೆ ಕಣ್ಣಿಗೆ ಬಟ್ಟೆ ಕಟ್ಟಿರುವವರು ಯಾರು ಎನ್ನುವುದು ದೇಶದ ಜನತೆಗೂ ತಿಳಿದಿದೆ ಎಂದರು.

ಬಿರ್ಲಾ-ಸಹರಾ ಡೈರಿ ಕಣ್ಣಿಗೆ ಬಿದ್ದಿಲ್ಲವೇ: ಐಟಿ ಇಲಾಖೆ ಕಾಂಗ್ರೆಸ್‌ ಪಕ್ಷದ ಕೆಲ ನಾಯಕರ ಡೈರಿಗಳೆಂದು ಹೇಳಲಾದ ದಾಖಲೆಗಳನ್ನು ಮುಂದಿಟ್ಟುಕೊಂಡು ತೆರಿಗೆ ಉಲ್ಲಂಘನೆಯಾಗಿದೆ ಎಂದು ಆರೋಪ ಮಾಡುತ್ತಿದೆ. ಆದರೆ, ಐಟಿ ಇಲಾಖೆಗೆ ಕರ್ನಾಟಕದಲ್ಲಿಯೇ ಬಯಲಾಗಿದ್ದ ಬಿ.ಎಸ್‌. ಯಡಿಯೂರಪ್ಪ ಡೈರಿ, ನರೇಂದ್ರ ಮೋದಿ ಅವರೂ ಫಲಾನುಭವಿ ಎಂದು ಆರೋಪಿಸಲಾಗಿರುವ ಬಿರ್ಲಾ-ಸಹರಾ ಡೈರಿಗಳು ಏಕೆ ಕಣ್ಣಿಗೆ ಬಿದ್ದಿಲ್ಲ? 

ಹಾಗೆಯೇ ನೀರವ್‌ ಮೋದಿ, ವಿಜಯ್‌ ಮಲ್ಯಯಂತಹ ಬ್ಯಾಂಕ್‌ ವಂಚಕರ 10.09 ಲಕ್ಷ ಕೋಟಿ ರು. ಬ್ಯಾಂಕ್‌ ಸಾಲ ಮನ್ನಾ ಮಾಡಿರುವ ಬಿಜೆಪಿ ಸರ್ಕಾರ ಅವರಿಂದ ಪಡೆದಿರುವ ಕಮಿಷನ್‌ ಹಣ ಎಷ್ಟು ಎನ್ನುವುದನ್ನು ದೇಶದ ಜನರಿಗೆ ತಿಳಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

click me!