ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗುತ್ತಿದ್ದಂತೆಯೇಬಿ.ವೈ.ವಿಜಯೇಂದ್ರ ಅವರ ಮೈಸೂರು ಭೇಟಿ ಜಿಲ್ಲಾ ರಾಜಕಾರಣದಲ್ಲಿ ಮಿಂಚಿನ ಸಂಚಲನ ಮೂಡಿಸಿದೆ.
ವರುಣಾ ಮಂಡಲದ ಆಹ್ವಾನದ ಮೇರೆಗೆ, ಸೋಮವಾರ ನಡೆದ ಮೊದಲ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಬಂದಿದ್ದ ವಿಜಯೇಂದ್ರ, ಇದೇ ವೇಳೆ ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವ ಜೊತೆಗೆ ಚರ್ಚಿಸಿದ್ದು, ಎರಡನೇ ಹಂತದ ನಾಯಕರೊಟ್ಟಿಗೆ ವಿವಿಧೆಡೆ ತೆರಳಿದ್ದು, ಕಮಲ ಪಾಳೆಯದೊಳಗೆ ಹೊಸ ಸಂಚಲನವೊಂದನ್ನು ಸೃಷ್ಟಿಸಿದೆ.
ವರುಣಾ ಮಂಡಲದ ಪದಾಧಿಕಾರಿಗಳನ್ನು ಕಾರ್ಯಕಾರಿಣಿಯಲ್ಲಿ ಪರಿಚಯಿಸಿಕೊಂಡ ವಿಜಯೇಂದ್ರ, ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆಗೊಳಿಸುವ ಜೊತೆಗೆ ಗ್ರಾಮ ಪಂಚಾಯಿತಿ ಚುನಾವಣೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿಕ್ಕಾಗಿ ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಎಂದು ಸೂಚಿಸಿದರು.
ಈ ಹಿಂದಿನ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂಬುದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್ ಘೋಷಣೆಯಾಗಲಿಲ್ಲ.
ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಈಗಿನಿಂದಲೇ ವರುಣಾ ಅಖಾಡದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.
ಉಪಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ವಿಜಯೇಂದ್ರ ಭಾಗವಹಿಸಿದ ಮೊದಲ ಸಭೆಯಿದು. ವರುಣಾ ವಿಧಾನಸಭಾ ಕ್ಷೇತ್ರದ ಬಗ್ಗೆ ಒಲವು ಕಳೆದುಕೊಂಡಿಲ್ಲ ಎಂಬುದನ್ನು ಇದೇ ಪುಷ್ಟೀಕರಿಸಲಿದೆ
ಉಪಾಧ್ಯಕ್ಷರಾಗಿ ನೇಮಕಗೊಳ್ಳುತ್ತಿದ್ದಂತೆಯೇ ಮೊದಲ ಮೈಸೂರಿಗೆ ತೆರಳಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನ ಭೇಟಿ ಮಾಡಿದರು.
ಬಳಿಕ ಸುತ್ತೂರಿಗೆ ತೆರಳಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು