ಹಾಸನ (ಮಾ.02): ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸಲ್ಲಿಸಿರುವ ಜಾತಿ ಗಣತಿ ವರದಿ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಾತಿ ಗಣತಿ ವರದಿ ಜಾತಿ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೆಗ್ಡೆ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅದನ್ನು ನಾವು ಸ್ವೀಕರಿಸಿದ್ದೇವೆ. ಆ ವರದಿಯಲ್ಲೇನಿದೆ ಎಂಬ ಕುರಿತು ಸಚಿವ ಸಂಪುಟದಲ್ಲಿ ವಿಸ್ತೃತವಾಗಿ ಚರ್ಚೆ ಮಾಡುತ್ತೇವೆ ಎಂದರು.
ಇದೇ ವೇಳೆ, ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ, ಜೆಡಿಎಸ್ ಜತೆಗೆ ಮಾಡಿಕೊಂಡಿರುವ ಮೈತ್ರಿಯನ್ನು ಆ ಪಕ್ಷದ ಶಾಸಕರೇ ಒಪ್ಪಿಲ್ಲ. ಜಾತ್ಯತೀತ ಪಕ್ಷವಾದ ಜೆಡಿಎಸ್ ಕೋಮುವಾದಿಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ದೂರಿದರು. ಎಫ್ಎಸ್ಎಲ್ ವರದಿ ಕುರಿತು ಪ್ರತಿಕ್ರಿಯಿಸಿ, ವರದಿ ಬಂದ ಕೂಡಲೇ ಬಹಿರಂಗ ಮಾಡುತ್ತೇವೆ. ಅನುಮಾನ ಬೇಡ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ ರು. ಆಮಿಷ: ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕಾಂಗ್ರೆಸ್‌ನ ಒಬ್ಬೊಬ್ಬ ಶಾಸಕರಿಗೆ ಬಿಜೆಪಿ 50 ಕೋಟಿ ರುಪಾಯಿ ಆಫರ್ ಮಾಡಿದೆ. ಆದರೆ, ಕಾಂಗ್ರೆಸ್ ಶಾಸಕರ್‍ಯಾರೂ ಇದಕ್ಕೆ ಬಗ್ಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ 136 ಸ್ಥಾನಗಳ ಬಲವಿದ್ದರೂ ಬಿಜೆಪಿಯು ರಾಜ್ಯ ಸರ್ಕಾರವನ್ನು ಅಲುಗಾಡಿಸಲು ಯತ್ನಿಸುತ್ತಿದೆ. ಬಿಜೆಪಿಯವರಿಗೆ ಸರ್ಕಾರಗಳನ್ನು ಬೀಳಿಸುವುದು ಅಭ್ಯಾಸವಾಗಿ ಹೋಗಿದೆ. ನೇರವಾಗಿ ಅವರು ಯಾವತ್ತೂ ಚುನಾವಣೆ ಮಾಡಿಯೇ ಇಲ್ಲ. ದೇಶದ ವಿವಿಧೆಡೆ ಸರ್ಕಾರವನ್ನು ಅತಂತ್ರ ಮಾಡುವ ರೀತಿ ಕರ್ನಾಟಕದಲ್ಲೂ ನಡೆದಿರುವುದು ಸತ್ಯ ಎಂದು ಹೇಳಿದರು.
ಬಿಜೆಪಿಯು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಪ್ರಯತ್ನ ನಡೆಸುತ್ತಿದೆ ಎಂದು ಹಿಂದೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದರು. ಬಿಜೆಪಿಯು ನಮ್ಮ ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದೆ. ಆದರೆ, ಕಾಂಗ್ರೆಸ್‌ನ ಯಾವೊಬ್ಬ ಶಾಸಕನೂ ಬಿಜೆಪಿಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದರು. ಅದೇ ರೀತಿ ಶಾಸಕ ರವಿ ಗಣಿಗ ಕೂಡ ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರುಪಾಯಿ ಮತ್ತು ಸಚಿವ ಸ್ಥಾನದ ಆಮಿಷ ನೀಡಲಾಗುತ್ತಿದೆ ಎಂದು ಬಹಿರಂಗ ಆರೋಪ ಮಾಡಿದ್ದರು.