ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ 2028ರ ಚುನಾವಣಾ ಟಿಕೆಟ್‌ಗಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಶಾಸಕ ಎಲ್. ನಾಗೇಂದ್ರ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದು, ಇದು ನಾಗೇಂದ್ರರ ಅಸಮಾಧಾನಕ್ಕೆ ಕಾರಣವಾಗಿದೆ.
ಮೈಸೂರಿನಲ್ಲಿ ಬಿಜೆಪಿಯ ಮಾಜಿ ಸಂಸದ ಮತ್ತು ಮಾಜಿ ಶಾಸಕ ನಡುವಿನ ಬಹಿರಂಗ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. 2028ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ, ಚಾಮರಾಜ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಪಕ್ಷದೊಳಗೆ ಆಂತರಿಕ ಪೈಪೋಟಿ ಆರಂಭವಾಗಿದೆ. ಕೇಂದ್ರ ರಾಜಕಾರಣ ಮುಗಿದ ಬಳಿಕ ಸಹಜವಾಗಿ ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ ಎಂದು ಹೇಳಿರುವ ಪ್ರತಾಪ್ ಸಿಂಹ, 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸ್ಪಷ್ಟ ಸೂಚನೆ ನೀಡಿದ್ದಾರೆ. ಚಾಮರಾಜ ಕ್ಷೇತ್ರವನ್ನು ತಮ್ಮ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿ ಆಯ್ಕೆ ಮಾಡಿಕೊಂಡಿರುವುದಾಗಿ ಅವರು ಬಹಿರಂಗವಾಗಿ ಹೇಳಿರುವುದು, ಇದೇ ಕ್ಷೇತ್ರದ ಮಾಜಿ ಶಾಸಕ ಎಲ್. ನಾಗೇಂದ್ರ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
27
ಪಕ್ಷದ ಇತಿ–ಮಿತಿಗಳನ್ನು ಮೀರಿ ಯಾರೂ ವರ್ತಿಸಬಾರದು: ಎಲ್. ನಾಗೇಂದ್ರ
ಈ ಬೆಳವಣಿಗೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಎಲ್. ನಾಗೇಂದ್ರ, ವಿಧಾನಸಭಾ ಟಿಕೆಟ್ ಯಾರಿಗೆ ಕೊಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಈ ಬಗ್ಗೆ ಪ್ರತಾಪ್ ಸಿಂಹ ಅವರಿಗೆ ಅರಿವು ಇರಬೇಕಿತ್ತು. ನಾನು ಕಳೆದ ಚುನಾವಣೆಯಲ್ಲಿ ಕೇವಲ ಸ್ವಲ್ಪ ಮತಾಂತರದಿಂದ ಸೋತಿದ್ದೇನೆ. ಪಕ್ಷದ ಇತಿ–ಮಿತಿಗಳನ್ನು ಮೀರಿ ಯಾರೂ ವರ್ತಿಸಬಾರದು. ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಹೇಳಿಕೆಗಳು ಸಲ್ಲದು ಎಂದು ಕಿಡಿಕಾರಿದ್ದಾರೆ. ಜೊತೆಗೆ ನನ್ನ ಹೋರಾಟ ಚಾಮರಾಜ ಕ್ಷೇತ್ರದಲ್ಲೇ ಮುಂದುವರಿಯಲಿದೆ. ಟಿಕೆಟ್ ಕುರಿತು ಅಂತಿಮ ತೀರ್ಮಾನ ಪಕ್ಷದ ವರಿಷ್ಠರದ್ದೇ ಎಂದು ನಾಗೇಂದ್ರ ಸ್ಪಷ್ಟಪಡಿಸಿದ್ದು, ಇಬ್ಬರ ನಡುವಿನ ವಾಕ್ಸಮರಕ್ಕೆ ವೇದಿಕೆ ಸಿದ್ಧವಾದಂತಾಗಿದೆ.
37
ಕಳೆದ 30 ವರ್ಷಗಳಿಂದ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಎಲ್. ನಾಗೇಂದ್ರ
1978ರಲ್ಲಿ ವಿಧಾನಸಭಾ ಕ್ಷೇತ್ರವಾಗಿ ರೂಪುಗೊಂಡ ಚಾಮರಾಜ ಕ್ಷೇತ್ರ, ಮೈಸೂರಿನ ಅರಮನೆ, ಚಾಮುಂಡಿಬೆಟ್ಟ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಒಳಗೊಂಡಿದ್ದು, ದೊಡ್ಡ ಮತದಾರರ ಸಂಖ್ಯೆಯನ್ನು ಹೊಂದಿದೆ. ಈ ಕಾರಣದಿಂದಲೇ ಕ್ಷೇತ್ರದ ಮೇಲೆ ಬಿಜೆಪಿ ಒಳಗೇ ಪೈಪೋಟಿ ಹೆಚ್ಚಾಗಿದೆ. ರಾಜಕೀಯವಾಗಿ ಎಲ್. ನಾಗೇಂದ್ರ ಅವರಿಗೆ ಸುದೀರ್ಘ ಅನುಭವವಿದ್ದು, ಅವರು ಒಮ್ಮೆ ಶಾಸಕರಾಗಿ, ಮೂರು ಬಾರಿ ಪಾಲಿಕೆ ಸದಸ್ಯರಾಗಿ, ಮೇಯರ್, ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 30 ವರ್ಷಗಳಿಂದ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಅವರು ಕ್ಷೇತ್ರದಲ್ಲಿ ಬಲವಾದ ಹಿಡಿತ ಹೊಂದಿದ್ದಾರೆ.
ಚಾಮರಾಜ ಕ್ಷೇತ್ರ ಹಣದ ಪ್ಯಾಕೆಟ್ ಕೊಟ್ಟು ಗೆಲ್ಲುವ ಕ್ಷೇತ್ರವಲ್ಲ
ಇನ್ನೊಂದೆಡೆ, ಎರಡು ಬಾರಿ ಸಂಸದರಾಗಿರುವ ಪ್ರತಾಪ್ ಸಿಂಹಗೂ ಮೈಸೂರಿನಲ್ಲಿ ಸಾಕಷ್ಟು ವರ್ಚಸ್ಸು ಇದೆ. 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ಪರಿಣಾಮ ಅವರ ಹ್ಯಾಟ್ರಿಕ್ ಸಂಸದೀಯ ಕನಸು ನುಚ್ಚುನೂರಾಗಿತ್ತು. ಇದೀಗ ಅವರು ರಾಷ್ಟ್ರ ರಾಜಕಾರಣವನ್ನು ಬಿಟ್ಟು ರಾಜ್ಯ ರಾಜಕಾರಣದತ್ತ ಹೆಜ್ಜೆ ಇಟ್ಟಿದ್ದಾರೆ. ಈ ಬಗ್ಗೆ ಪ್ರತಾಪ್ ಸಿಂಹ ಮಾತನಾಡಿ, “ಕೇಂದ್ರ ರಾಜಕಾರಣ ಮುಗಿದ ಮೇಲೆ ಸಹಜವಾಗಿ ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ. ಎಲ್ಲಾ ದೃಷ್ಟಿಯಿಂದಲೂ ಚಾಮರಾಜ ಕ್ಷೇತ್ರ ನನಗೆ ಅನುಕೂಲಕರವಾಗಿದೆ. ಇದು ಬಿಜೆಪಿ ಬಲವಾದ ಕ್ಷೇತ್ರ. ಈ ಹಿಂದೆ ಶಂಕರಲಿಂಗೇಗೌಡರು ನಾಲ್ಕು ಬಾರಿ ಇಲ್ಲಿ ಗೆದ್ದಿದ್ದಾರೆ. ಹೀಗಾಗಿ ಚಾಮರಾಜ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.
ಚಾಮರಾಜ ಕ್ಷೇತ್ರ ಹಣದ ಪ್ಯಾಕೆಟ್ ಕೊಟ್ಟು ಗೆಲ್ಲುವ ಕ್ಷೇತ್ರವಲ್ಲ. ಇಲ್ಲಿ ಮತದಾರರು ಕೆಲಸ ನೋಡಿ ಬೆಂಬಲ ನೀಡುವ ಪ್ರಜ್ಞಾವಂತರು. ನಾನು ಈ ಕ್ಷೇತ್ರವನ್ನು ಕೇವಲ ಒಂದು ಸಮುದಾಯದ ಆಧಾರದಲ್ಲಿ ನೋಡುತ್ತಿಲ್ಲ. ಇಲ್ಲಿ ಎಲ್ಲ ವರ್ಗಗಳ ಜನರು ಇದ್ದಾರೆ. ಅದೇ ನನ್ನ ಆಯ್ಕೆಗೆ ಕಾರಣ” ಎಂದು ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.
57
ಚಾಮರಾಜ ಕ್ಷೇತ್ರದಲ್ಲಿ ಸದ್ದಿಲ್ಲದೇ ಚಟುವಟಿಕೆ ಆರಂಭಿಸಿ ಸಿಂಹ
ಕಳೆದ ಕೆಲವು ತಿಂಗಳುಗಳಿಂದ ಪ್ರತಾಪ್ ಸಿಂಹ ಅವರು ಚಾಮರಾಜ ಕ್ಷೇತ್ರದಲ್ಲಿ ಸದ್ದಿಲ್ಲದೇ ಚಟುವಟಿಕೆ ಆರಂಭಿಸಿದ್ದು, ಕ್ಷೇತ್ರದ ನಾಯಕರು, ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದಾರೆ. ಸಭೆ–ಸಮಾರಂಭಗಳಲ್ಲಿ ಭಾಗವಹಿಸುವ ಜೊತೆಗೆ, ಕ್ಷೇತ್ರದ ಮುಖಂಡರ ಕುಟುಂಬಸ್ಥರ ಜನ್ಮದಿನಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿಸುವ ಮೂಲಕ ತಮ್ಮ ಹಾಜರಾತಿಯನ್ನು ಗಟ್ಟಿಗೊಳಿಸುತ್ತಿದ್ದಾರೆ.
67
ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯೆ
ಇನ್ನು ಈ ವಾಕ್ಸಮರದ ಕುರಿತು ಪ್ರತಿಕ್ರಿಯೆ ನೀಡಿರುವ ಮೈಸೂರು–ಕೊಡಗು ಸಂಸದ ಯದುವೀರ್ ಒಡೆಯರ್, “ಚುನಾವಣೆ ಟಿಕೆಟ್ ಹಂಚಿಕೆ ಮಾಡುವುದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪಕ್ಷದ ವರಿಷ್ಠರ ಕೆಲಸ. ಎಲ್ಲರಿಗೂ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯ ಇದೆ. ಆದರೆ ಅಂತಿಮ ತೀರ್ಮಾನ ವರಿಷ್ಠರದ್ದೇ. ಪಕ್ಷ ಹೇಳುವ ಅಭ್ಯರ್ಥಿಗೆ ನಾವು ಎಲ್ಲರೂ ಒಗ್ಗೂಡಿ ಬೆಂಬಲ ನೀಡಬೇಕು. ಪಕ್ಷದ ಗೆಲುವಿಗೆ ಶ್ರಮಿಸುವುದೇ ಎಲ್ಲರ ಮೊದಲ ಆದ್ಯತೆ ಆಗಬೇಕು” ಎಂದು ಹೇಳಿದ್ದಾರೆ.
77
ಚಾಮರಾಜ ಕ್ಷೇತ್ರದ ಹಿಂದಿನ ಚುನಾವಣಾ ಫಲಿತಾಂಶ
ಚಾಮರಾಜ ಕ್ಷೇತ್ರದ ಹಿಂದಿನ ಚುನಾವಣಾ ಫಲಿತಾಂಶಗಳನ್ನು ನೋಡಿದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಎಲ್. ನಾಗೇಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿ ಕೆ. ಹರೀಶ್ ಗೌಡ ಎದುರು ಕೇವಲ 4,094 ಮತಗಳ ಅಂತರದಿಂದ ಸೋಲು ಕಂಡಿದ್ದರು. ಹರೀಶ್ ಗೌಡ 72,931 ಮತಗಳನ್ನು ಪಡೆದಿದ್ದರೆ, ನಾಗೇಂದ್ರ 68,837 ಮತಗಳನ್ನು ಪಡೆದು ಭಾರೀ ಪೈಪೋಟಿ ನೀಡಿದ್ದರು. 2018ರಲ್ಲಿ ನಾಗೇಂದ್ರ ಅವರು ಕಾಂಗ್ರೆಸ್‌ನ ವಾಸು ವಿರುದ್ಧ ಗೆಲುವು ಸಾಧಿಸಿದ್ದರು.
ಒಟ್ಟಿನಲ್ಲಿ, ಹತ್ತು ವರ್ಷಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಪ್ರತಾಪ್ ಸಿಂಹ ಇದೀಗ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿರುವುದು ಬಿಜೆಪಿಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದು, 2028ರ ಚಾಮರಾಜ ಕ್ಷೇತ್ರದ ಟಿಕೆಟ್ ಕಿತ್ತಾಟ ಇನ್ನೂ ಕಾವೇರಲಿದೆ ಎಂಬುದು ಸ್ಪಷ್ಟವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.