ಬೀದರ್ (ಏ.26): ಮುಸ್ಲಿಮರಿಗೆ ನೀಡಲಾಗುತ್ತಿರುವ ಶೇ.4ರಷ್ಟು ಮೀಸಲಾತಿಯನ್ನು ಮುಂದುವರಿಸುತ್ತೇವೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೇ ಅಫಿಡವಿಟ್ ಸಲ್ಲಿಸಿದೆ. ಈಗಲೂ ಮುಸ್ಲಿಮರ ಮೀಸಲಾತಿ ಹಿಂದಿನಂತೆ ಮುಂದುವರಿದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಸ್ಲಿಂ ಸಮುದಾಯದವರಿಗೆ ಮೀಸಲಾತಿ ಕಲ್ಪಿಸಲು ದಲಿತರ ಮೀಸಲಾತಿಯನ್ನು ಕಡಿತಗೊಳಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಹೇಳುತ್ತಿದ್ದಾರೆ.
ಬರೀ ಸುಳ್ಳು ಹೇಳಿಕೊಂಡು ಸಮಾಜ ಒಡೆಯುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇವತ್ತಿಗೂ ಕೂಡ ಮುಸ್ಲಿಂ ಸಮುದಾಯಕ್ಕೆ ಶೇ.4ರಷ್ಟು ಮೀಸಲಾತಿ ಮುಂದುವರಿಯುತ್ತಿದೆ ಎಂದರು.
ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸ್ಸಿನಂತೆ ಕಳೆದ 20 ವರ್ಷಗಳಿಂದ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುತ್ತಾ ಬರಲಾಗಿದೆ. ಈ ಹಿಂದೆ ಅದನ್ನು ತೆಗೆದು ಹಾಕಲು ಯತ್ನಿಸಿದ್ದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಬಳಿಕ, ಮೀಸಲಾತಿಯನ್ನು ಯಥಾವತ್ ಮುಂದುವರಿಸುತ್ತೇವೆ ಎಂದು ಸುಪ್ರಿಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
ಅದನ್ನೇ ನಾವೂ ಮುಂದುವರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇನ್ನು ನೇಹಾ ಹತ್ಯೆ ಪ್ರಕರಣದ ತುರ್ತು ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವದು, ಆರೋಪಿಗೆ ಘೋರ ಸಜೆಯಾಗುವಂತೆ ಕ್ರಮವಹಿಸಲು ಪೊಲೀಸರಿಗೆ ಹಾಗೂ ವಕೀಲರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.