ವಿಜಯೇಂದ್ರ ಜತೆ ಅಮಿತ್ ಶಾ ನಡೆದುಕೊಂಡ ರೀತಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ
ಬೆಂಗಳೂರು (ಮಾ.24): ಬೆಂಗಳೂರು ಪ್ರವಾಸದಲ್ಲಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕುಮಾರಕೃಪಾ ರಸ್ತೆಯಲ್ಲಿರುವ ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿದರು. ಆ ವೇಳೆ ಕುತೂಹಲಕಾರಿ ಘಟನೆಯೊಂದು ನಡೆಯಿತು. ಅಮಿತ್ ಶಾ ಅವರನ್ನು ಸ್ವಾಗತಿಸಲು ಯಡಿಯೂರಪ್ಪ ಅವರು ತಮ್ಮ ನಿವಾಸದ ಅಂಗಳದಲ್ಲಿ ಹೂಗುಚ್ಛಗಳನ್ನು ಹಿಡಿದು ಕಾಯುತ್ತಾ ನಿಂತಿದ್ದರು. ಅವರ ಪುತ್ರ ವಿಜಯೇಂದ್ರ ಹಾಗೂ ಮಕ್ಕಳು ಕೂಡ ಇದ್ದರು. ಕಾರಿನಿಂದ ಇಳಿದ ತಕ್ಷಣ ಅಮಿತ್ ಶಾ ಅವರು ಯಡಿಯೂರಪ್ಪನವರ ಕಡೆಗೆ ನೋಡಿ ನಿಮ್ಮ ಕೈಯ್ಯಲ್ಲಿರುವ ಹೂಗುಚ್ಛವನ್ನು ನಿಮ್ಮ ಮಗನ ಕೈಗೆ ನೀಡಿ ಎಂದು ಹೇಳಿದರು. ಬಿಎಸ್‌ವೈಗೆ ಮೊದಲಿಗೆ ಇದರ ಒಳಾರ್ಥ ತಿಳಿಯಲಿಲ್ಲ. ಅದನ್ನು ಗಮನಿಸಿದ ಶಾ, ಮತ್ತೆ ಹೂಗುಚ್ಛವನ್ನು ಅವರಿಗೆ ಕೊಡಿ ಅಂತ ಕೈ ಸನ್ನೆ ಮಾಡಿ ತೋರಿಸಿದರು. ಆಗ ಯಡಿಯೂರಪ್ಪನವರು ತಮ್ಮ ಕೈಯ್ಯಲ್ಲಿದ್ದ ಗುಲಾಬಿ ಹೂಗುಚ್ಛವನ್ನು ಪುತ್ರ ವಿಜಯೇಂದ್ರಗೆ ಕೊಟ್ಟರು. ಬಳಿಕ ಅಮಿತ್ ಶಾ ವಿಜಯೇಂದ್ರೆಗೆ ಬೆನ್ನು ತಟ್ಟಿದರು. ಸದ್ಯ ಈ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಮಿತ್ ಶಾ ಅವರು ತಂದೆಯಿಂದಲೇ ಮಗನಿಗೆ ಹೂಗುಚ್ಚ ನೀಡುವಂತೆ ಹೇಳಿದ್ದು ಯಾಕೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.