ಕೊಪ್ಪಳ: ಬಿರು ಬೇಸಿಗೆಯಲ್ಲಿ ಪಕ್ಷಿಗಳ ದಾಹ ನೀಗಿಸುವ ಯುವಕರು..!

First Published | Apr 12, 2021, 1:01 PM IST

ಹನುಮಸಾಗರ(ಏ.12): ಈ ಕಡು ಬೇಸಿಗೆಯಲ್ಲಿ ಜನ- ಜಾನುವಾರುಗಳು ಕುಡಿಯುವ ನೀರಿಗೆ ಬಾಯಿಬಾಯಿ ಬಿಡುತ್ತಿದ್ದಾರೆ. ಇನ್ನು ಪಕ್ಷಿಗಳ ಸ್ಥಿತಿ ಹೇಗಿರಬೇಡ ಎಂದು ತಮ್ಮಲ್ಲೇ ಮರುಗಿದ ಇಲ್ಲಿನ ಐದಾರು ಯುವಕರು ಪಕ್ಷಿಪ್ರೇಮಿ ಶಿಕ್ಷಕ ರಾಘವೇಂದ್ರ ಈಳಗೇರ ಅವರ ಮಾರ್ಗದರ್ಶನದಲ್ಲಿ ಮರಗಳಲ್ಲಿ ತತ್ರಾಣಿಗಳನ್ನು ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕಾಯಕವನ್ನು ಮೂರು ವರ್ಷಗಳಿಂದ ಮಾಡುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಯುವಕರು
ಈ ಬಾರಿ ವಿನೂತನ ರೀತಿಯಲ್ಲಿ ಪ್ರಯೋಗ ಮಾಡಿದ್ದು, ಅದು ಯಶಸ್ವಿಯಾಗಿದ್ದರಿಂದ ಸದ್ಯ ಹೆಚ್ಚು ಪಕ್ಷಿಗಳು ಇರುವ ಸುಮಾರು 60 ಮರಗಳಲ್ಲಿ ವಿನೂತನ ತತ್ರಾಣಿಗಳ ವ್ಯವಸ್ಥೆ ಮಾಡಿದ್ದಾರೆ.
Tap to resize

ಈ ಹಿಂದೆ ಪಕ್ಷಿಗಳ ದಾಹ ನೀಗಿಸಲು ಕೆಲವೆಡೆ ಸಿಮೆಂಟ್‌ಗಳಿಂದ ಪುಟ್ಟ ದೋಣಿಗಳನ್ನು ಮಾಡಿದ್ದರು. ಆನಂತರದ ವರ್ಷದಲ್ಲಿ ಕುಂಬಾರರ ಮನೆಗೆ ಹೋಗಿ ತಮಗೆ ಬೇಕಾದ ಅಳತೆಗೆ ತಕ್ಕಂತೆ ನೂರಾರು ಮಣ್ಣಿನ ತತ್ರಾಣಿಗಳನ್ನು ತಂದು ಮರಗಳಿಗೆ ನೇತು ಬಿಟ್ಟಿದ್ದರು. ಆದರೆ ಸಿಮೆಂಟ್‌ ದೋಣಿಗಳಲ್ಲಿ ಇತರ ಪ್ರಾಣಿಗಳಿಂದ ನೀರು ಮಲೀನವಾಗುತ್ತಿರುವುದು, ಬೇಗ ಆವಿಯಾಗುತ್ತಿರುವುದು, ಬಿಸಿಲಿಗೆ ಬಿಸಿಯಾಗುತ್ತಿರುವುದು, ಗಾಳಿಗೆ ಕಸ ಬಂದು ಬೀಳುತ್ತಿರುವ ಕಾರಣ ದೋಣಿಗಳನ್ನು ಮಾಡುವುದನ್ನು ಬಿಟ್ಟರು. ಅಲ್ಲದೆ ಮಡಕೆಗಳು ಬೇಗ ಒಡೆಯುವ ಕಾರಣವಾಗಿ ಅದನ್ನೂ ಕೈಬಿಟ್ಟು ಈಗ ತಗಡಿನ ಡಬ್ಬಿಗಳನ್ನು ಬಳಕೆ ಮಾಡುತ್ತಿದ್ದಾರೆ.
ದಿನಸಿ ಅಂಗಡಿಯಲ್ಲಿ ದೊರೆಯುವ ಅಡುಗೆ ಎಣ್ಣೆಯ ಖಾಲಿ ತಗಡಿನ ಡಬ್ಬಿಗಳನ್ನು ಸಂಗ್ರಹಿಸಿ ಸ್ವಚ್ಛವಾಗಿ ತೊಳೆಯುತ್ತಾರೆ. ಅವುಗಳ ನಾಲ್ಕು ಭಾಗಗಳಲ್ಲಿನ ತಗಡುಗಳನ್ನು ಅರ್ಧ ಭಾಗದ ವರೆಗೆ ಕತ್ತರಿಸಿ ಬಾಗಿಸಿದ್ದಾರೆ. ಹೀಗೆ ಬಾಗಿದ ತಗಡಿನ ಭಾಗದಲ್ಲಿ ಪಕ್ಷಿಗಳಿಗೆ ಧಾನ್ಯ ಹಾಕಲಾಗುತ್ತದೆ. ಧಾನ್ಯಗಳು ಹೊರಗೆ ಚೆಲ್ಲಬಾರದು ಎಂಬ ದೃಷ್ಟಿಯಿಂದ ಅಂಚುಗಳನ್ನು ಮಣಿಸಲಾಗಿದೆ.
ಡಬ್ಬದ ಒಳಭಾಗದಲ್ಲಿ ನೀರು ಹಾಕಿರುವುದರಿಂದ ಭಾರಕ್ಕೆ ಡಬ್ಬಿಯೂ ಓಲಾಡುವುದಿಲ್ಲ. ಹೀಗಾಗಿ ಇಲ್ಲಿ ಪಕ್ಷಿಗಳಿಗೆ ನೀರಿನ ಜತೆಗೆ ಧಾನ್ಯವೂ ದೊರೆತಂತಾಗಿದೆ.
ಪಕ್ಷಿ ಪ್ರೇಮಿಗಳಾದ ಸಂಜುವರಾಯ ಕುಲಕರ್ಣಿ, ಅಮಿತ್‌ ಬಡಿಗೇರ, ಶಿವರಾಜ ಬೋವಿ, ಹುಸೇನ್‌ ಇತರರು ಕಾರ್ಯ ನಿರ್ವಹಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಯಶಸ್ವಿ ಪ್ರಯೋಗ ಮಾಡಿದ್ದೇವೆ. ಮೊದಲು ಒಂದು ಡಬ್ಬಿಗಳನ್ನು ಕತ್ತರಿಸಿ ಮರದಲ್ಲಿ ನೇತು ಬಿಟ್ಟಿದ್ದೆವು. ಸಾಕಷ್ಟು ಸಂಖ್ಯೆಯಲ್ಲಿ ಹಕ್ಕಿಗಳು ಬಂದು ಕಾಳು ತಿಂದು ನೀರು ಕುಡಿದು ಹೋಗಿದ್ದವು. ಈ ಪ್ರಯೋಗ ಯಶಸ್ವಿಯಾದ ಕಾರಣ ಹೆಚ್ಚಿನ ಡಬ್ಬಿಗಳನ್ನು ನೇತು ಹಾಕಿದ್ದೇವೆ. ಅಷ್ಟಿಷ್ಟುಹಣ ಖರ್ಚಾಗಿದೆ. ಇದರಿಂದ ನನಗೆ ಬಹಳ ಸಂತಸ ತಂದಿದೆ ಎಂದು ಹನುಮಸಾಗರದ ಪಕ್ಷಿಪ್ರೇಮಿ ರಾಘವೇಂದ್ರ ಈಳಗೇರ ತಿಳಿಸಿದ್ದಾರೆ.

Latest Videos

click me!