ನವೆಂಬರ್‌ ವೇಳೆಗೆ ಎತ್ತಿನಹೊಳೆ ನೀರು ತುಮಕೂರಿಗೆ ತರುತ್ತೇವೆ; ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ

Published : Sep 17, 2026, 05:47 PM IST

ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಗುಬ್ಬಿ ತಾಲೂಕಿನಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದರು. ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ನೀರು ಹರಿಸುವ ಭರವಸೆ ನೀಡಿದ ಅವರು, ಅರಣ್ಯ ಇಲಾಖೆಯ ಅನುಮತಿ ಶೀಘ್ರದಲ್ಲೇ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.

PREV
15

ತುಮಕೂರು (ಸೆ.17): ನವೆಂಬರ್ ಅಂತ್ಯದೊಳಗೆ ಎತ್ತಿನಹೊಳೆ ಯೋಜನೆಯ ಮೂಲಕ ತುಮಕೂರಿಗೆ ನೀರು ಹರಿಸಲಾಗುತ್ತದೆ. ಒಂದೆಡೆ ಮೇಕೆದಾಟು ಯೋಜನೆಗೆ ಪ್ರಯತ್ನ ಮುಂದುವರಿದಿದ್ದರೆ, ಮತ್ತೊಂದೆಡೆ ತುಮಕೂರಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಗುರುವಾರ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಂಚಿಗಾನಹಳ್ಳಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ 'ಪ್ಯಾಕೇಜ್ 11'ರ ಕಾಮಗಾರಿ ಸ್ಥಳಕ್ಕೆ ಸಚಿವ ಎನ್. ಚಲುವರಾಯಸ್ವಾಮಿ ಖುದ್ದು ಭೇಟಿ ನೀಡಿ, ಸಮಗ್ರ ಪರಿಶೀಲನೆ ನಡೆಸಿದರು.

25

ಅರಣ್ಯ ಅನುಮತಿ ಶೀಘ್ರವೇ ಲಭ್ಯ:

ಕಾಮಗಾರಿ ಸ್ಥಳದಲ್ಲಿ ಎದುರಾಗಿರುವ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲು ಸಚಿವರು ತುರ್ತು ಹೆಜ್ಜೆ ಇಟ್ಟಿದ್ದಾರೆ. ಕಂಚಿಗಾನಹಳ್ಳಿಯ ಅರಣ್ಯ ಇಲಾಖೆಗೆ ಸೇರಿದ 1.9 ಕಿ.ಮೀ ಜಾಗವನ್ನು ಪರಿಶೀಲಿಸಿದ ಅವರು, ಯೋಜನೆಗೆ ಅಗತ್ಯವಿರುವ ಅರಣ್ಯ ಇಲಾಖೆಯ 2ನೇ ಹಂತದ (ಸ್ಟೇಜ್ 2) ಅನುಮತಿಗೆ ಸಂಬಂಧಿಸಿದ ಕಡತಗಳು ಈಗಾಗಲೇ ನವದೆಹಲಿಗೆ ತಲುಪಿವೆ ಎಂದು ಸ್ಪಷ್ಟಪಡಿಸಿದರು. ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ದೆಹಲಿಗೆ ಅರ್ಜಿ ಸಲ್ಲಿಸಿದ್ದು, ಸತತ ಪ್ರಯತ್ನದ ಫಲವಾಗಿ ಇನ್ನೊಂದು ವಾರದಲ್ಲಿ ಕೇಂದ್ರದಿಂದ ಅಂತಿಮ ಒಪ್ಪಿಗೆ ದೊರೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

35

ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ:

ಗುರುತ್ವಾಕರ್ಷಣಾ ಕಾಲುವೆ (ಗ್ರಾವಿಟಿ ಕೆನಾಲ್) ನಿರ್ಮಾಣದಲ್ಲಿ ಗುಣಮಟ್ಟಕ್ಕೆ ಅತ್ಯುನ್ನತ ಆದ್ಯತೆ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದರು. 28 ಮೀಟರ್ ಆಳದ ಭೂಮಿಯನ್ನು ಅಗೆಯಬೇಕಿರುವ ಸ್ಥಳದಲ್ಲಿ (ಡೀಪ್ ಕಟ್) ಮಣ್ಣು ಕುಸಿಯದಂತೆ ಅತ್ಯಂತ ಎಚ್ಚರಿಕೆಯಿಂದ 'ಕಟ್ ಅಂಡ್ ಕವರ್' ತಂತ್ರಜ್ಞಾನದ ಮೂಲಕ ಗುಣಮಟ್ಟದ ಕೆಲಸ ನಡೆಯಬೇಕು ಎಂದು ನಿರ್ದೇಶಿಸಿದರು. ಎರಡು ಕಡೆ ಕಾಲುವೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಅಕ್ಟೋಬರ್ 15ರ ಒಳಗಾಗಿ ತುಮಕೂರು ಭಾಗದ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಹಾಗೂ ಶೇಕಡಾ 100ರಷ್ಟು ನೀರು ಪೂರೈಸುವುದು ನಿಶ್ಚಿತ ಎಂದು ಭರವಸೆ ನೀಡಿದರು.

45

ಯೋಜನಾ ವೆಚ್ಚ ಏರಿಕೆ & ಬಿಕ್ರೆಗುಡ್ಡೆ ಯೋಜನೆ ಲೋಕಾರ್ಪಣೆ:

ಪರಿಶೀಲನೆ ಬಳಿಕ ಮಾತನಾಡಿದ ಸಚಿವರು, ಎತ್ತಿನಹೊಳೆ ಯೋಜನೆಯು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಪ್ರಾರಂಭವಾದ ಕನಸಿನ ಯೋಜನೆ ಎಂದರು. ಆರಂಭದಲ್ಲಿ 8 ಸಾವಿರ ಕೋಟಿ ರೂ.ಗಳಷ್ಟಿದ್ದ ಯೋಜನಾ ವೆಚ್ಚವು ಪ್ರಸ್ತುತ 23 ಸಾವಿರ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಆದರೂ ರೈತರ ಹಿತದೃಷ್ಟಿಯಿಂದ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಇದರ ಜೊತೆಗೆ, ಅನಿವಾರ್ಯ ಕಾರಣಗಳಿಂದ ವಿಳಂಬವಾಗಿದ್ದ 'ಬಿಕ್ಕೆಗುಡ್ಡ ಯೋಜನೆ'ಯನ್ನೂ ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

55

ರೈತರ ಹಿತರಕ್ಷಣೆ ನಮ್ಮ ಬದ್ಧತೆ:

ಹೇಮಾವತಿ ಲಿಂಕ್ ಕೆನಾಲ್ ಕೈಬಿಡುವಂತೆ ಬಂದಿರುವ ರೈತರ ಮನವಿ ಕುರಿತು ಪ್ರತಿಕ್ರಿಯಿಸಿದ ಸಚಿವರು, 'ತುಮಕೂರು ಮತ್ತು ರಾಮನಗರ ಎರಡೂ ಭಾಗದ ರೈತರು ನಮಗೆ ಸಮಾನರು. ಯಾರೊಬ್ಬರಿಗೂ ಅನ್ಯಾಯವಾಗದಂತೆ ಮುಖ್ಯಮಂತ್ರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದರು. ಇದೇ ವೇಳೆ ರೈತರು ಮೈಕ್ರೋ ಫೈನಾನ್ಸ್ (ಕಿರು ಸಾಲ) ಮೊರೆ ಹೋಗಿ ಆರ್ಥಿಕವಾಗಿ ಶೋಷಣೆಗೆ ಒಳಗಾಗಬಾರದು ಎಂದು ಸಚಿವರು ಕಳಕಳಿಯ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಗುಬ್ಬಿ ಕ್ಷೇತ್ರದ ಶಾಸಕರೂ ಆದ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಪಿ. ವಾಸು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Read more Photos on
click me!

Recommended Stories