ಇಂದು ವಿಶ್ವ ಯೋಗ ದಿನಾಚರಣೆ: ಪೇಜಾವರ ಶ್ರೀಗಳಿಗೆ ಪ್ರತಿನಿತ್ಯವೂ ಯೋಗ ದಿನವೇ..!

First Published | Jun 21, 2022, 1:04 PM IST

ಉಡುಪಿ(ಜೂ.21):  ಇಂದು ಯೋಗ ದಿನ. ಆದರೆ ಉಡುಪಿಯ ಮಹಾಯೋಗಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ರಿಗೆ ಪ್ರತಿದಿನವೂ ಯೋಗ ದಿನ! ಕಠಿಣಾತಿಕಠಿಣ ಯೋಗಗಳನ್ನು ಸುಲಲಿತವಾಗಿ ಮಾಡುವುದರಲ್ಲಿ ಪೇಜಾವರ ಶ್ರೀಗಳು ಸಿದ್ಧಹಸ್ತರು.

ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಅಪರೂಪದ ಯೋಗಿ. ಹಿರಿಯ ಶ್ರೀಗಳಾಗಿದ್ದ ವಿಶ್ವೇಶತೀರ್ಥರು ಕೂಡ ಪ್ರತಿದಿನ ಯೋಗ ಅಭ್ಯಾಸ ಮಾಡುತ್ತಿದ್ದರು. ಆದರೆ ಅವರದ್ದು ಸರಳ ಯೋಗ. ತನ್ನ ಪುಟ್ಟ ದೇಹವನ್ನು ಅನುಕೂಲಕ್ಕೆ ತಕ್ಕಂತೆ ಬಗ್ಗಿಸಿ ಬಾಗಿಸಿ, ತನ್ನದೇ ಶೈಲಿಯಲ್ಲಿ ಯೋಗ ಮಾಡುತ್ತಿದ್ದರು. ಇಳಿವಯಸ್ಸಿನಲ್ಲೂ ಬಿಡುವಿಲ್ಲದ ದಿನಚರಿಯ ನಡುವೆಯೂ ವಿಶ್ವೇಶತೀರ್ಥರು ಯೋಗ ಮಾಡುವುದನ್ನು ತಪ್ಪಿಸಿದ್ದಿಲ್ಲ.
 

ಗುರುಗಳಾದ ವಿಶ್ವೇಶತೀರ್ಥ ರಿಂದ, ಸ್ಪೂರ್ತಿ ಪಡೆದ ವಿಶ್ವಪ್ರಸನ್ನ ತೀರ್ಥರು ಯೋಗಾಭ್ಯಾಸ ಪರಿಣಿತರಾಗಿ ರೂಪುಗೊಂಡರು. ಯೋಗದಲ್ಲಿ ಕಠಿಣಾತಿಕಠಿಣ ಎಂದು ಭಾವಿಸಲಾಗುವ ಆಸನಗಳನ್ನು ಕೂಡ ಲೀಲಾಜಾಲವಾಗಿ ಮಾಡಬಲ್ಲರು. ಕೇವಲ ನೆಲದ ಮೇಲೆ ಮಾತ್ರವಲ್ಲ ನೀರಿನಲ್ಲೂ ಯೋಗಾಸನಗಳನ್ನು ವಿಶ್ವಪ್ರಸನ್ನ ತೀರ್ಥರು ಪ್ರದರ್ಶಿಸಬಲ್ಲರು. ವಯಸ್ಸು 60ರ ಆಸುಪಾಸು ಆಗಿದ್ದರೂ ವಿಶ್ವಪ್ರಸನ್ನ ತೀರ್ಥರು ಇನ್ನೂ ಎಳೆಯರಂತೆ ಲವಲವಿಕೆಯಿಂದ ಓಡಾಡುವುದರ ಗುಟ್ಟೇ ಕಠಿಣ ಯೋಗ. ಕೇವಲ ಆಚರಣೆಗಳಿಗೆ ಸೀಮಿತವಲ್ಲದ ಇವರ ಯೋಗಾಭ್ಯಾಸ ಅನೇಕರಿಗೆ ಸ್ಪೂರ್ತಿ ನೀಡಿದೆ.

Tap to resize

ಮುಂಬೈ‌ನಲ್ಲಿ ಯೋಗಾಭ್ಯಾಸ ಮಾಡಿದ ವಿಶ್ವಪ್ರಸನ್ನ ತೀರ್ಥರು. ಇಂದು ಯೋಗ ದಿನ. ವಿಶ್ವಪ್ರಸನ್ನ ತೀರ್ಥರು ಸದ್ಯ ಮುಂಬೈ ಪ್ರವಾಸದಲ್ಲಿದ್ದಾರೆ. ಇಂದು ಮುಂಜಾನೆ ತಮ್ಮ ದೈನಂದಿನ ದಿನಚರಿಯಂತೆ ಯೋಗಾಭ್ಯಾಸ ನಡೆಸಿದ್ದಾರೆ. ಈ ಮೂಲಕ ತನ್ನ ಶಿಷ್ಯರಿಗೆ, ಮಠದ ಭಕ್ತರಿಗೆ ವಿಶೇಷ ಪ್ರೇರಣೆ ನೀಡಿದ್ದಾರೆ

ಯೋಗ ದಿನಾಚರಣೆಯ ಕುರಿತು ಮಾತನಾಡಿದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಯೋಗ ಪ್ರಾಚೀನ ಕಾಲದ ಋಷಿ ಮುನಿಗಳಿಂದ ಮಾನವ ಜನಾಂಗಕ್ಕೆ ಸಿಕ್ಕಿರುವ ಹಲವಾರು ಕೊಡುಗೆಗಳಲ್ಲೊಂದು. ಪ್ರಕೃತಿಯ ನಡುವೆ ಸಂಪರ್ಕದಲ್ಲಿದ್ದ ಋಷಿಮುನಿಗಳಿಗೆ ಯೋಗದ ಅಗತ್ಯ ಇರಲಿಲ್ಲ. ಇಂದು ಮಾನವಕುಲ ಪ್ರಕೃತಿಯಿಂದ ದೂರವಾಗಿರು ಹೊತ್ತಿನಲ್ಲಿ ಮಾನಸಿಕ ಮತ್ತು ಶಾರೀರಿಕ ಆರೋಗ್ಯಕ್ಕೆ ಯೋಗ ಅತ್ಯಗತ್ಯ. ಅಂತಹ ಯೋಗವನ್ನು ನಾವು ನಮ್ಮ ಜೀವನದಲ್ಲಿ ನಿತ್ಯ ರೂಪಿಸಿಕೊಳ್ಳೋಣ ಅಂತ ಕರೆ ನೀಡಿದ್ದಾರೆ. 

ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರು ನಗರಕ್ಕೆ ಬಂದು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ನಾಡಿಗೆ ಪ್ರಧಾನಿಗಳು ಬಂದದ್ದು ಬಹಳ ಸಂತೋಷದ ಸಂಗತಿ. ಅವರ ಆಗಮನದಿಂದ ಯೋಗದ ಮಹತ್ವ ಹೆಚ್ಚಾಗಿದೆ. ಅವರನ್ನು ಮಠದ ಪರವಾಗಿ ಅಭಿನಂದಿಸುತ್ತೇನೆ. ಜನರಲ್ಲಿ ಯೋಗಾಭ್ಯಾಸದ ಬಗ್ಗೆ ಜಾಗೃತಿ ಹೆಚ್ಚಾಗಿದೆ. ಎಳೆಯ ಮಕ್ಕಳಲ್ಲೇ ಯೋಗದ ಮಹತ್ವದ ಬಗ್ಗೆ ನಾವು ಅರಿವು ಮೂಡಿಸಬೇಕು. ಆ ಮೂಲಕ ಮಾನವ ಜನಾಂಗ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಬೇಕು. ಎಂದು ಸ್ವಾಮೀಜಿ ಕರೆ ನೀಡಿದ್ದಾರೆ.

ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪತಂಜಲಿ ಯೋಗ ಸಮಿತಿಯ ಸಹಭಾಗಿತ್ವದೊಂದಿಗೆ ಯೋಗ ದಿನಾಚರಣೆ ನಡೆಯಿತು. ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ದೈಹಿಕ ಚೈತನ್ಯಕ್ಕೆ ಯೋಗಾಭ್ಯಾಸ ಅತಿಮುಖ್ಯ. ಯೋಗದಲ್ಲಿ ಎರಡು ವಿಧ ಧ್ಯಾನಯೋಗ ಮತ್ತು ಕರ್ಮಯೋಗ ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ್ದಾನೆ ಎಂದು ಸಂದೇಶ ನೀಡಿದರು. 350ಕ್ಕೂ ಅಧಿಕ ಮಂದಿ ಈ ವೇಳೆ ರಾಜಾಂಗಣದಲ್ಲಿ ಯೋಗಾಭ್ಯಾಸ ನಡೆಸಿದರು.

Latest Videos

click me!