Grama Vastavya: 72 ಗಂಟೆಯಲ್ಲಿ ಪಿಂಚಣಿ ಪತ್ರ, ದೇಶದಲ್ಲೇ ಕರ್ನಾಟಕ ಮೊದಲು: ಅಶೋಕ್‌

First Published | Apr 16, 2022, 9:29 AM IST

ಕಾರವಾರ(ಏ.16):  ಸರ್ಕಾ​ರದ ಪಿಂಚಣಿ(Government Pension) ಯೋಜನೆಯ ಪ್ರಯೋಜನ ಪಡೆಯಲು ಇನ್ನು ಮುಂದೆ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ದೂರವಾಣಿ ಕರೆ ಮಾಡಿ ಹಲೋ ಎಂದು ಎರಡು ದಾಖ​ಲೆ​ಗ​ಳ ನಂಬರ್‌ಗಳನ್ನು ಕೊಟ್ಟರೆ ಸಾಕು. 72 ಗಂಟೆಗಳಲ್ಲಿ ಪಿಂಚಣಿ ಪ್ರಮಾಣಪತ್ರ ನಿಮ್ಮ ಕೈಯಲ್ಲಿರುತ್ತದೆ. ಇಂಥ ಯೋಜನೆ ದೇಶದ ಯಾವ ರಾಜ್ಯದಲ್ಲೂ ಇಲ್ಲ ಎಂದು ಕಂದಾಯ ಸಚಿವ ಅಶೋಕ್‌(R Ashok) ಹೇಳಿ​ದ​ರು.

ಅಂಕೋಲಾ(Ankola) ತಾಲೂಕು ಅಚವೆಯ ಗ್ರಾಮ ವಾಸ್ತವ್ಯದಲ್ಲಿ ಪಿಂಚಣಿ ಪಡೆಯುವ ನೂತನ ವಿಧಾನವನ್ನು ಅಶೋ​ಕ್‌ ಪ್ರಕಟಿಸಿದರು. ನಾಲ್ಕು ಡಿಜಿಟ್‌ಗಳ ಟೋಲ್‌ ಫ್ರೀ ನಂಬರ್‌ ನೀಡಲಾಗುತ್ತದೆ. ಆ ನಂಬರ್‌ಗೆ ಕರೆಮಾಡಿ, ಪಿಂಚಣಿ ಫಲಾನುಭವಿಗಳಾಗುವವರ ಆಧಾರ್‌ ಸಂಖ್ಯೆ, ಬ್ಯಾಂಕ್‌ ಅಕೌಂಟ್‌ ಸಂಖ್ಯೆ ನೀಡಬೇಕು. 15 ನಿಮಿಷಗಳಲ್ಲಿ ಆ ಮಾಹಿತಿ ಸಂಬಂಧಪಟ್ಟಜಿಲ್ಲಾಧಿಕಾರಿ, ತಹಸೀಲ್ದಾರ್‌ ಮತ್ತಿತರ ಅಧಿಕಾರಿಗೆ ಹೋಗುತ್ತದೆ. ಗ್ರಾಮ ಸಹಾಯಕರು ಅವರ ಮನೆಗೆ ತೆರಳಿ ಫಲಾನುಭವಿಯ ಫೋಟೋ, ಇತರ ದಾಖಲೆ ಪಡೆದು ಅಪ್‌ಲೋಡ್‌ ಮಾಡುತ್ತಾರೆ. ಅದಾದ 72 ಗಂಟೆಗಳಲ್ಲಿ ಪಿಂಚಣಿ ಪತ್ರ ಫಲಾನುಭವಿಯ ಕೈಸೇರಲಿದೆ ಎಂದು ಹೇಳಿದ ಆರ್‌. ಅಶೋಕ್‌

ಪಿಂಚಣಿಗಾಗಿ ವೃದ್ಧರು ಅಲೆದಾಡುವ ಪರಿಸ್ಥಿತಿ ಇದೆ. ಜತೆಗೆ ಪಿಂಚಣಿ ಬರುತ್ತದೆ ಎಂದರೆ ಮಕ್ಕಳೂ ತಮ್ಮ ತಂದೆ ತಾಯಿಯನ್ನು ದೂರ ಮಾಡುವುದಿಲ್ಲ. ಜನರ ಅಲೆದಾಟ ತಪ್ಪಿಸಲು ಈ ನೂತನ ವಿಧಾನವನ್ನು ಸದ್ಯದಲ್ಲೇ ಜಾರಿಗೊಳಿಸಲಾಗುವುದು ಎಂದು ತಿಳಿಸಿದ ಸಚಿವರು

Latest Videos


ಇಂದು ತಾವೊಬ್ಬರೇ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ. ರಾಜ್ಯದ(Karnataka) ಎಲ್ಲೆಡೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಶಾಸಕರು ಗ್ರಾಮ ವಾಸ್ತವ್ಯ(Grama Vastavya) ಮಾಡುತ್ತಿದ್ದಾರೆ. ಒಟ್ಟು 250 ಕಡೆಗಳಲ್ಲಿ ಗ್ರಾಮ ವಾಸ್ತವ್ಯ ನಡೆಯುತ್ತಿದೆ. ಲಕ್ಷಾಂತರ ಜನರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದರು.

ಗ್ರಾಮ ವಾಸ್ತವ್ಯದಿಂದ ನಾನು ಬಹಳಷ್ಟು ಕಲಿತಿದ್ದೇನೆ. ಕೆಲವು ಗ್ರಾಮ ವಾಸ್ತವ್ಯದಲ್ಲಿ ಅಧಿಕಾರಿಗಳು ರಾತ್ರಿ ಎಸಿ ಹಾಕಿಕೊಂಡು ಐಬಿಯಲ್ಲಿ ಉಳಿಯುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಅಧಿಕಾರಿಗಳನ್ನು ಗ್ರಾಮದಲ್ಲಿಯೇ ಉಳಿಯುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಪ್ರಜಾಪ್ರಭುತ್ವ(Democracy) ಎಂದರೆ ದೇವಸ್ಥಾನ(Temple). ಅಲ್ಲಿ ಪ್ರಜೆಗಳೇ ದೇವರು. ದೇವತಾ ಸಮಾನರಾದ ಜನರ ಸಂಕಷ್ಟಕ್ಕೆ ಸ್ಪಂದಿಸಿ, ಅವರಿಗೆ ಬೇಕಾದ ಸೌಲಭ್ಯವನ್ನು ಮನೆ ಮನೆಗೆ ಮುಟ್ಟಿಸುವ ಚಿಂತನೆಯ ಆಂದೋಲನವೇ ಗ್ರಾಮ ವಾಸ್ತವ್ಯವಾಗಿದೆ ಎಂದು ಬಿಡಿಸಿ ಹೇಳಿದ ಅವರು ಸರ್ಕಾರದ ಸೌಲಭ್ಯದಿಂದ ವಂಚಿತರಾದ ಜನರನ್ನು ಹುಡುಕಿ ಹುಡುಕಿ ಅವರ ಮನೆ ಬಾಗಿಲಿಗೆ ಸೌಲಭ್ಯ ಕಲ್ಪಿಸುವುದೇ ನಮ್ಮ ಸರ್ಕಾರದ ಆದ್ಯ ಗುರಿಯಾಗಿದೆ ಎಂದು ತಿಳಿಸಿದ ಅಶೋಕ್‌

ಗ್ರಾಮ ವಾಸ್ತವ್ಯದಿಂದ ರಾಜ್ಯದಲ್ಲಿ 99,197 ಅರ್ಜಿಗಳು ಬಂದಿದ್ದವು. ಇದರಲ್ಲಿ 89,000 ಅರ್ಜಿಗಳು ಇತ್ಯರ್ಥಗೊಂಡಿವೆ. ಇದರಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲ ಅರ್ಜಿಗಳು ವಿಲೇವಾರಿಯಾಗಿರುವುದು ವಿಶೇಷವಾಗಿ ತೃಪ್ತಿ ತಂದಿದೆ. ಇನ್ನು ಬಾಕಿ ಉಳಿದ ಇನ್ನಿತರ ಇಲಾಖೆಗೆ ಸಂಬಂಧಪಟ್ಟ ಅರ್ಜಿಗಳು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಸಚಿವರು

ಈ ಗ್ರಾಮ ವಾಸ್ತವ್ಯವನ್ನು ವಿರೋಧ ಪಕ್ಷದವರು ಸ್ವಾಗತಿಸಿದ್ದಾರೆ. ಇದು ನನ್ನ ಕಲ್ಪನೆಯ ಕಾರ್ಯ​ಕ್ರ​ಮ​ವಾ​ಗಿ​ದ್ದರೂ ನಾನು ಇದಕ್ಕೆ ಅಶೋಕನ ಗ್ರಾಮ ವಾಸ್ತವ್ಯ ಎಂದು ಹೆಸರಿಟ್ಟಿಲ್ಲ. ಈ ಗ್ರಾಮವಾಸ್ತವ್ಯ ನಿರಂತರವಾಗಿ ನಡೆಯಬೇಕು ಎಂಬ ನಿಟ್ಟಿನಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಎಂಬ ಹೆಸರನ್ನು ಇಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು. 

click me!