ಬೈಯ್ಯಪ್ಪನಹಳ್ಳಿ ಬಳಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ನಲ್ಲಿ ಇಂದಿನಿಂದ (ಜೂ.6) ರೈಲು ಸಂಚಾರ ಆರಂಭಗೊಳ್ಳುತ್ತಿದೆ. ಸೋಮವಾರ ಸಂಜೆ 7ಕ್ಕೆ ಹೊರಡುವ ಬಾಣಸವಾಡಿ-ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್(ರೈಲು ಸಂಖ್ಯೆ 12684) ರೈಲು ನೂತನ ಟರ್ಮಿನಲ್‌ನಿಂದ ಕಾರ್ಯಾಚರಣೆ ನಡೆಸುವ ಮೊದಲ ರೈಲಾಗಿದೆ.
ಬಳಿಕ ವೇಳಾಪಟ್ಟಿಯಂತೆ ಟರ್ಮಿನಲ್‌ನಲ್ಲಿ ವಾರದಲ್ಲಿ ಮೂರು ರೈಲುಗಳು ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟುರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ನೈಋುತ್ಯ ರೈಲ್ವೆ ತಿಳಿಸಿದೆ.
ರೈಲು ಓಡಾಟ ಆರಂಭವಾಗುತ್ತಿರುವ ಹಿನ್ನೆಲೆ ಸೋಮವಾರದಿಂದಲೇ ಟಿಕೆಟ್ ಕೌಂಟರ್, ಲಿಫ್ಟ್, ಆಹಾರ ಮಳಿಗೆಗಳು, ಪಾರ್ಕಿಂಗ್ ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಲಭ್ಯವಾಗಲಿವೆ. ಜತೆಗೆ ಬಿಎಂಟಿಸಿ ಬಸ್ ಸೇವೆ ಒದಗಿಸುತ್ತಿದೆ.
ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮತ್ತು ಯಶವಂತಪುರ ಜಂಕ್ಷನ್ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬೈಯಪ್ಪನಹಳ್ಳಿ ಮತ್ತು ಬಾಣಸವಾಡಿ ರೈಲು ನಿಲ್ದಾಣಗಳ ನಡುವೆ ಈ ನೂತನ ರೈಲ್ವೆ ಟರ್ಮಿನಲ್ ಸ್ಥಾಪಿಸಲಾಗಿದೆ.
2021 ಆರಂಭದಲ್ಲಿಯೇ ನೂತನ ಟರ್ಮಿನಲ್ ನಿರ್ಮಾಣ ಪೂರ್ಣಗೊಂಡಿದ್ದರೂ ಕಾರಣಾಂತರಗಳಿಂದ ಉದ್ಘಾಟನೆಯಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಔಪಚಾರಿಕಾ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿರುವ ನೈಋುತ್ಯ ರೈಲ್ವೆ ಇಲಾಖೆ ಸೋಮವಾರದಿಂದ ರೈಲು ಸಂಚಾರವನ್ನು ಪ್ರಾರಂಭಿಸುತ್ತಿದೆ.
ಹೊಸ ಟರ್ಮಿನಲ್ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ 1.5 ಕಿ.ಮೀ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ 1.2 ಕಿ.ಮೀ ದೂರವಿದ್ದು, ಮೆಟ್ರೋ ನಿಲ್ದಾಣ, ಮೆಜೆಸ್ಟಿಕ್, ಕೆಆರ್ ಪುರದಿಂದ ಬಿಎಂಟಿಸಿ ಬಸ್ ಸೇವೆ ಕಲ್ಪಿಸಲಾಗಿದೆ.