ಹಂಪಿಯ ಹಜಾರರಾಮ ದೇಗುಲದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಡೆಸಿದ ಉತ್ಖನನದಲ್ಲಿ, ಭಗ್ನಗೊಂಡ ಪುರಾತನ ಆಳ್ವರ್ ವಿಗ್ರಹಗಳು ಮತ್ತು ಪೀಠಗಳು ಪತ್ತೆಯಾಗಿವೆ. 1565ರ ತಾಳಿಕೋಟೆ ಕದನದ ನಂತರ ನಡೆದ ದಾಳಿಗೆ ಸಾಕ್ಷಿಯಾಗಿವೆ.
ಹೊಸಪೇಟೆ: ಹಂಪಿಯ ಹಜಾರರಾಮ ದೇಗುಲ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ ಕಳೆದ ಕೆಲ ದಿನಗಳಿಂದ ಉತ್ಖನನ ನಡೆಯುತ್ತಿದ್ದು, ಭಗ್ನಗೊಂಡಿರುವ ಪುರಾತನ ಕಾಲದ ಎರಡು ಆಳ್ವರ್ (ತಮಿಳುನಾಡಿನ ಒಂದು ಭಕ್ತಿ ಪಂಥದವರು ಕೆತ್ತಿದ ವಿಗ್ರಹ), ವಿಗ್ರಹ ಪ್ರತಿಷ್ಠಾಪನೆ ಮಾಡುವ ಮೂರು ಪೀಠಗಳು ಪತ್ತೆಯಾಗಿವೆ.
24
ಶಿರಚ್ಛೇದನಗೊಂಡ ವಿಗ್ರಹಗಳು
ಕಳೆದ ಮೂರು ದಿನಗಳ ಹಿಂದೆ ಕಲ್ಲಿನ ಚಾವಣಿ, ಆನೆಯ ವಿಗ್ರಹಗಳು ಪತ್ತೆ ಆಗಿದ್ದವು. 1565ರ ತಾಳಿಕೋಟೆ ಕದನದಲ್ಲಿ ವಿಜಯನಗರ ಅರಸರು ಪರಾಭವಗೊಂಡರು. ನಂತರ ಬಹುಮನಿ ಸುಲ್ತಾನರ ಆಕ್ರಮಣಕ್ಕೆ ತುತ್ತಾಗಿ ಸಾವಿರಾರು ವಿಗ್ರಹಗಳು, ದೇವರ ಮೂರ್ತಿಗಳ ಶಿರಚ್ಛೇದನಗೊಳಿಸಿ, ನಾಶಪಡಿಸಲಾಯಿತು. ಬಳಿಕ ಈಗ ನಡೆಯುತ್ತಿರುವ ಉತ್ಖನನದಲ್ಲಿ ವಿಗ್ರಹಗಳು ಪತ್ತೆಯಾಗುತ್ತಿವೆ.
34
ಆಳ್ವರ್ ಮೂರ್ತಿ
ಈಗ ದೊರೆತ ಮೂರ್ತಿಗಳು ಆಳ್ವರ್ ಮೂರ್ತಿಗಳಾಗಿವೆ. ಸುಮಾರು 11 ಜನ ಆಳ್ವರ್ ಸಂತರು ವೈಷ್ಣವ ಮತ ಪ್ರಚಾರಕರಾಗಿದ್ದರು. ಹಂಪಿ ಪ್ರದೇಶದಲ್ಲಿ ವೈಷ್ಣವ ಪರಂಪರೆಯ ಪ್ರಭಾವ ಬಹಳ ಗಾಢವಾಗಿತ್ತು. ವಿಶೇಷವಾಗಿ ವಿಜಯನಗರ ಕಾಲದಲ್ಲಿ ವೈಷ್ಣವ ಸಂಪ್ರದಾಯ, ವಿಷ್ಣು ಭಕ್ತಿ ಮತ್ತು ಆಳ್ವರ್‌ಗಳ ಭಕ್ತಿಗೀತೆಗಳಿಗೆ ಹೆಚ್ಚಿನ ಗೌರವ ಇತ್ತು ಎಂದು ಇತಿಹಾಸಕಾರರು ಹೇಳಿದ್ದಾರೆ.
ಉತ್ಖನನದ ವೇಳೆ ದೊರೆತ ವಿಗ್ರಹಗಳನ್ನು ನೋಡಿದರೆ ಅಂದಿನ ದಾಳಿಯ ಭೀಕರತೆಯನ್ನು ತಿಳಿಯಬಹುದು. ಇನ್ನೂ ಹೆಚ್ಚಿನ ಮಟ್ಟದಲ್ಲಿ ದೊರೆಯುವ ವಿಗ್ರಹಗಳಿಂದ ಮತ್ತು ಕುರುಹುಗಳಿಂದ ವಿಜಯನಗರ ಸಾಮ್ರಾಜ್ಯದ ವೈಭವ, ಶ್ರೀಮಂತಿಕೆಯನ್ನು ತಿಳಿಯಬಹುದು ಎಂದು ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ವಿರೂಪಾಕ್ಷಿ ಹೇಳುತ್ತಾರೆ.