ಬಹುಕೋಟಿ ಹಗರಣದಲ್ಲಿ ಬಂಧಿತನಾದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ, ಹುಟ್ಟೂರು ಹುಬ್ಬಳ್ಳಿಯೊಂದಿಗೂ ನಂಟು ಹೊಂದಿದ್ದ. ಈತನ ಆ್ಯಪ್‌ನಲ್ಲಿ ಹುಬ್ಬಳ್ಳಿಯವರೂ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಐಡಿ ತನಿಖೆ ಹುಬ್ಬಳ್ಳಿಯತ್ತ ಮುಖ ಮಾಡುವ ಸಾಧ್ಯತೆ ಇದೆ.
ಅತ್ತ ನೀಲಣ್ಣವರ ಬಂಧನ: ಇತ್ತ ಹುಬ್ಬಳ್ಳಿಯಲ್ಲಿ ಕಾವೇರಿದ ಚರ್ಚೆ
ಹುಬ್ಬಳ್ಳಿ: ಬಹುಕೋಟಿ ಹಗರಣದಲ್ಲಿ ಸಿಲುಕಿ ಬಂಧನಕ್ಕೊಳಗಾಗಿರುವ ಶಿವಂ ಅಸೋಸಿಯೇಟ್ಸ್‌ನ ಮಾಲೀಕ ಶಿವಾನಂದ ನೀಲಣ್ಣವರ ಊರು ಬಿಟ್ಟಿದ್ದರೂ ಹುಬ್ಬಳ್ಳಿಯಲ್ಲಿನ ನಂಟು ಬಿಟ್ಟಿರಲಿಲ್ಲ. ಆಗಾಗ ಹುಬ್ಬಳ್ಳಿಗೂ ಬರುತ್ತಿದ್ದ. ಹೀಗಾಗಿ ಹುಬ್ಬಳ್ಳಿಗರಿಂದಲೂ ತನ್ನ ಆ್ಯಪ್ ಮೂಲಕ ಹೂಡಿಕೆ ಮಾಡಿಸಿದ್ದು, ದುಡ್ಡು ಕಳೆದುಕೊಂಡವರಲ್ಲಿ ಇಲ್ಲೂ ಇದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಪ್ರಕರಣ ಕೈಗತ್ತಿಕೊಂಡಿರುವ ಸಿಐಡಿ ಪೊಲೀಸರು ತನಿಖೆಗಾಗಿ ಹುಬ್ಬಳ್ಳಿಯತ್ತ ಮುಖ ಮಾಡುವ ಸಾಧ್ಯತೆ ಇದೆ.
25
ಬೆಳಗಾವಿಲ್ಲಿದ್ದರೂ ಹುಟ್ಟಿದ ಊರಿನೊಂದಿಗೂ ಭಾರೀ ನಂಟು
ಶಿವಾನಂದ ನೀಲಣ್ಣವರ ಇಲ್ಲಿನ ಉಣಕಲ್ ದುರ್ಗದ ಓಣಿಯವ. ಇಲ್ಲೇ ಐಸ್ಕ್ರಿಂ ಮಾರುತ್ತಿದ್ದ. ಈತನ ತಂದೆ ತೀರಿದ ಬಳಿಕ ಈತನ ಸಹೋದರನಿಗೆ ಹೆಸ್ಕಾಂನಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಸಿಕ್ಕಿದ್ದು, ಇಡೀ ಕುಟುಂಬ ಬೆಳಗಾವಿಗೆ ಹೋಗಿ ಸೆಟ್ಲ್ ಆಗಿದೆ. ಆದರೆ, ಅಲ್ಲಿಗೆ ಹೋಗಿ ನೆಲೆಸಿದ್ದರೂ ಕೂಡ ಹುಬ್ಬಳ್ಳಿಯೊಂದಿಗಿನ ನಂಟು ಮಾತ್ರ ಬಿಟ್ಟಿರಲಿಲ್ಲ.
35
ದೇಗುಲಕ್ಕೂ ದೇಣಿಗೆ
ನೀಲಣ್ಣವರ ಎಂಬ ಅಡ್ರೆಸ್ ಹೊಂದಿರುವ ಮನೆತನಗಳು ನಗರದಲ್ಲಿ ಸಾಕಷ್ಟಿವೆ. ಕೆಲವೊಂದಿಷ್ಟು ಜನ ಅವರ ದೂರದ ಸಂಬಂಧಿಕರಿದ್ದಾರೆ. ಹೀಗಾಗಿ ಸಂಬಂಧಿಕರ ಮದುವೆ ಸೇರಿದಂತೆ ಯಾವುದೇ ಶುಭ ಕಾರ್ಯಕ್ರಮ ಅಥವಾ ಅಶುಭ ಕಾರ್ಯಕ್ರಮಕ್ಕೆ ಶಿವಾನಂದ ಹುಬ್ಬಳ್ಳಿಗೆ ಬರುತ್ತಿದ್ದನಂತೆ. ಆಗಾಗ ಬರುತ್ತಿದ್ದ ಶಿವಾನಂದ ಉಣಕಲ್‌ನ ದೇವಸ್ಥಾನವೊಂದರ ಜಾತ್ರಾ ಮಹೋತ್ಸವಕ್ಕೆ ಇತ್ತೀಚಿಗೆ ದೇಣಿಗೆ ಕೂಡ ನೀಡಿದ್ದನಂತೆ. ಜಾತ್ರಾ ಮಹೋತ್ಸವದಲ್ಲೂ ಭಾಗವಹಿಸಿದ್ದನೆಂದು ಮೂಲಗಳು ತಿಳಿಸುತ್ತವೆ.
ಸದ್ಯ ಈತ 35 ಸಾವಿರ ಜನರಿಂದ ₹ 4500 ಕೋಟಿ ಹೂಡಿಕೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ತನಿಖೆ ಮುಂದುವರಿಯುತ್ತಿದ್ದಂತೆ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯುಂಟು. ಅದರಲ್ಲಿ ಹುಬ್ಬಳ್ಳಿಯವರು ಹೂಡಿಕೆ ಮಾಡಿದ್ದಾರೆಯೇ? ಮಾಡಿದ್ದರೆ ಎಷ್ಟು ಜನ ಮಾಡಿರಬಹುದು? ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ, ಹೂಡಿಕೆ ಮಾಡಿದವರು ತಾವೇ ಹೂಡಿಕೆ ಮಾಡಿದ್ದೇವೆ ಎಂದು ಈ ವರೆಗೂ ಬಂದು ಹೇಳಿಕೊಳ್ಳುತ್ತಿಲ್ಲ. ಇದಕ್ಕೆ ಭಯವೂ ಕಾರಣವಿರಬಹುದು ಎಂಬ ವಿಶ್ಲೇಷಣೆ ಕೂಡ ಕೇಳಿ ಬರುತ್ತಿದೆ. ಈ ಕಾರಣದಿಂದ ತನಿಖೆಗಾಗಿ ಸಿಐಡಿ ಪೊಲೀಸರು ಹುಬ್ಬಳ್ಳಿಗೂ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಒಟ್ಟಿನಲ್ಲಿ ಬೆಳಗಾವಿಯಲ್ಲಿ ಘಟನೆ ನಡೆದರೂ ಅದರಷ್ಟೇ ಚರ್ಚೆ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವುದಂತೂ ಸತ್ಯ.
55
ಕರೆಗಳ ಸುರಿಮಳೆ!
ಅತ್ತ ನೀಲಣ್ಣವರ ಬಂಧನವಾಗುತ್ತಿದ್ದಂತೆ ಇತ್ತ ಇಲ್ಲಿನ ಈ ಹೆಸರಿನವರಿಗೆ ಮೊಬೈಲ್ ಕರೆಗಳ ಸುರಿಮಳೆಯೇ ಬರುತ್ತಿದೆ. ಬೆಳಗಾವಿಯಲ್ಲಿ ಬಂಧನವಾಗಿದೆಯೆಲ್ಲ ಅವರು ನಿಮ್ಮ ಸಂಬಂಧಿಕರಾಕಾ? ನಿಮ್ಮ ಅಡ್ರೆಸ್ ಸೇಮ್ ಟು ಸೇಮ್ ಐತಲಾ ಅದಕ್ಕೆ ಕೇಳಿದೆ.. ಎಂಬೆಲ್ಲ ಪ್ರಶ್ನೆಗಳ ಸುರಿಮಳೆ ಆಗುತ್ತಿದೆ.