ತುಂಗಭದ್ರಾ ಜಲಾಶಯ 33 ಗೇಟ್‌ ಬದಲಾವಣೆ ಕಾಮಗಾರಿ, 18ನೇ ಗೇಟ್ ಅಳವಡಿಕೆ ಬರೋಬ್ಬರಿ 15 ದಿನದಲ್ಲಿ ಯಶಸ್ವಿ

Published : Jan 08, 2026, 07:31 PM IST

ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ನವೀಕರಣ ಕಾರ್ಯದಲ್ಲಿ ಮಹತ್ವದ ಪ್ರಗತಿಯಾಗಿದ್ದು, 18ನೇ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಒಟ್ಟು 33 ಹಳೆಯ ಗೇಟ್‌ಗಳನ್ನು ಬದಲಿಸುವ ಈ ಯೋಜನೆಯು ಜಲಾಶಯದ ಭದ್ರತೆ ಮತ್ತು ನೀರು ನಿರ್ವಹಣೆಯನ್ನು ಬಲಪಡಿಸುವ ಗುರಿ ಹೊಂದಿದೆ.  

PREV
15
18ನೇ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಸಂಪೂರ್ಣ

ಕೊಪ್ಪಳ/ವಿಜಯನಗರ: ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನವೀಕರಣ ಕಾರ್ಯದಲ್ಲಿ ಮಹತ್ವದ ಹಂತವನ್ನು ಯಶಸ್ವಿಯಾಗಿ ದಾಟಲಾಗಿದೆ. ಮುನಿರಾಬಾದ್ ಸಮೀಪದಲ್ಲಿರುವ ತುಂಗಭದ್ರಾ ಜಲಾಶಯದಲ್ಲಿ 18ನೇ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಸಂಪೂರ್ಣಗೊಂಡಿದ್ದು, ಇದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ. ತುಂಗಭದ್ರಾ ಜಲಾಶಯದ ಹಳೆಯ ಹಾಗೂ ಶಿಥಿಲಗೊಂಡ ಕ್ರಸ್ಟ್ ಗೇಟ್‌ಗಳನ್ನು ಬದಲಿಸುವ ಉದ್ದೇಶದಿಂದ ಸರ್ಕಾರ ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆಯಡಿ, ಡಿಸೆಂಬರ್ 24, 2025ರಂದು 18ನೇ ಗೇಟ್ ಅಳವಡಿಕೆ ಕಾರ್ಯ ಆರಂಭವಾಗಿತ್ತು. ಈ ಗೇಟ್ ಅನ್ನು ಸಂಪೂರ್ಣವಾಗಿ ಅಳವಡಿಸಲು ಸುಮಾರು 15 ದಿನಗಳ ಸುದೀರ್ಘ ಸಮಯ ಬೇಕಾಗಿದ್ದು, ಇಂಜಿನಿಯರ್‌ಗಳು ಹಾಗೂ ತಾಂತ್ರಿಕ ಸಿಬ್ಬಂದಿಯ ನಿರಂತರ ಪರಿಶ್ರಮದಿಂದ ಕಾರ್ಯ ಯಶಸ್ವಿಯಾಗಿದೆ.

25
18ನೇ ಕ್ರಸ್ಟ್ ಗೇಟ್‌ ಅಳವಡಿಕೆ ಯಶಸ್ವಿ

ಇಂದು 18ನೇ ಕ್ರಸ್ಟ್ ಗೇಟ್‌ಗೆ ಚೈನ್ ಲಿಂಕ್ ಅಳವಡಿಸಲಾಗಿದ್ದು, ಗೇಟ್ ಅನ್ನು ಇಳಿಸುವ ಹಾಗೂ ಎತ್ತುವ ಕಾರ್ಯವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ಮೂಲಕ ಗೇಟ್ ಸಂಪೂರ್ಣ ಕಾರ್ಯನಿರ್ವಹಣೆಗೆ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನ ಜಲಾಶಯದ ಮೂರು ಹಳೆಯ ಮತ್ತು ಜೀರ್ಣಗೊಂಡ ಗೇಟ್‌ಗಳನ್ನು ಕತ್ತರಿಸಿ ತೆಗೆದುಹಾಕುವ ಕಾರ್ಯವನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಕತ್ತರಿಸಲಾದ ಹಳೆಯ ಗೇಟ್‌ಗಳ ಜಾಗದಲ್ಲಿ ಹಂತ ಹಂತವಾಗಿ ಹೊಸ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಮೊದಲ ಹಂತದಲ್ಲಿ 18ನೇ ಗೇಟ್ ಅಳವಡಿಕೆ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಇದು ಯೋಜನೆಯ ಪ್ರಗತಿಗೆ ಮಹತ್ವದ ಮೈಲುಗಲ್ಲಾಗಿದೆ. ಸರ್ಕಾರದ ಯೋಜನೆಯಂತೆ ಜಲಾಶಯದಲ್ಲಿರುವ ಒಟ್ಟು 33 ಕ್ರಸ್ಟ್ ಗೇಟ್‌ಗಳನ್ನು ಸಂಪೂರ್ಣವಾಗಿ ಬದಲಾಯಿಸಲು ನಿರ್ಧರಿಸಲಾಗಿದ್ದು, ಈ ಕಾರ್ಯಕ್ಕೆ ಸುಮಾರು ₹52 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಗೇಟ್ ಬದಲಾವಣೆಯ ಗುತ್ತಿಗೆಯನ್ನು ಗುಜರಾತ್ ಮೂಲದ ಖ್ಯಾತ ಕಂಪನಿಗೆ ಸರ್ಕಾರ ನೀಡಿದೆ.

35
ಒಟ್ಟು 33 ಗೇಟ್‌ಗಳ ಬದಲಾವಣೆ

ಈ ಯೋಜನೆಯಡಿ 33 ಗೇಟ್‌ಗಳ ಪೈಕಿ ಹಳೆಯ ಗೇಟ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ, ವೈಜ್ಞಾನಿಕ ತಳಹದಿಯ ಮೇಲೆ ಹೊಸ ಗೇಟ್‌ಗಳನ್ನು ಅಳವಡಿಸಲಾಗುತ್ತಿದೆ. ಪ್ರತಿಯೊಂದು ಗೇಟ್ ಅಳವಡಿಕೆಯ ನಂತರ ತಾಂತ್ರಿಕ ಪರೀಕ್ಷೆ ನಡೆಸಿ ಮಾತ್ರ ಮುಂದಿನ ಹಂತಕ್ಕೆ ಸಾಗಲಾಗುತ್ತಿದೆ. ಪ್ರಸ್ತುತ ಜಲಾಶಯದ 20ನೇ ಹಾಗೂ 27ನೇ ಗೇಟ್‌ಗಳ ಅಳವಡಿಕೆ ಕಾರ್ಯವೂ ಸಮಂತರವಾಗಿ ಪ್ರಗತಿಯಲ್ಲಿದೆ.

45
ಜೂನ್ ತಿಂಗಳೊಳಗೆ ಎಲ್ಲಾ 33 ಕ್ರಸ್ಟ್ ಗೇಟ್‌ಗಳ ಬದಲಾವಣೆ ವಿಶ್ವಾಸ

ಗುತ್ತಿಗೆ ಪಡೆದ ಕಂಪನಿಯು, ಬರೋ ಜೂನ್ ತಿಂಗಳೊಳಗೆ ಎಲ್ಲಾ 33 ಕ್ರಸ್ಟ್ ಗೇಟ್‌ಗಳ ಬದಲಾವಣೆ ಕಾರ್ಯವನ್ನು ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ತುಂಗಭದ್ರಾ ಜಲಾಶಯದ ಭದ್ರತೆ ಮತ್ತಷ್ಟು ಬಲಗೊಳ್ಳಲಿದ್ದು, ಪ್ರವಾಹ ನಿಯಂತ್ರಣ ಹಾಗೂ ನೀರು ನಿರ್ವಹಣೆಯಲ್ಲಿ ಮಹತ್ವದ ಸುಧಾರಣೆ ಆಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

55
ಹಲವು ಜಿಲ್ಲೆಗಳ ಜೀವನಾಡಿ

ತುಂಗಭದ್ರಾ ಜಲಾಶಯವು ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಕೃಷಿ, ಕುಡಿಯುವ ನೀರು ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಆಧಾರವಾಗಿರುವುದರಿಂದ, ಈ ನವೀಕರಣ ಕಾರ್ಯವನ್ನು ಸರ್ಕಾರ ಅತ್ಯಂತ ಮಹತ್ವದ ಯೋಜನೆಯಾಗಿ ಕೈಗೊಂಡಿದೆ. 18ನೇ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ಸು, ಮುಂದಿನ ಗೇಟ್‌ಗಳ ಬದಲಾವಣೆಗೆ ದಾರಿ ತೋರಿಸುವ ಮಹತ್ವದ ಹೆಜ್ಜೆಯಾಗಿದೆ.

Read more Photos on
click me!

Recommended Stories